ಏಕಾಂತದ ಹಂಗೇಕಯ್ಯ

Update: 2017-10-06 18:43 GMT

ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯ?
ಕ್ಷಮೆ ದಮೆ ಶಾಂತಿ ಸೈರಣೆಯಿರಲು
ಸಮಾಧಿಯ ಹಂಗೇಕಯ್ಯ?
ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ್ಯ
ಚೆನ್ನಮಲ್ಲಿಕಾರ್ಜುನಾ.

- ಅಕ್ಕ ಮಹಾದೇವಿ

ಉಸಿರಿಗೆ ಪರಿಮಳವಿಲ್ಲದ ಕಾರಣ ನಾವು ಹೂವಿನ ಸುವಾಸನೆ ಬಯಸುತ್ತೇವೆ. ಒಂದು ವೇಳೆ ಉಸಿರೇ ಪರಿಮಳವಾದರೆ ಅದು ಅಘಟಿತ ಘಟನೆಯಾಗುವುದು. ಇಂಥ ಅಘಟಿತ ಘಟನೆಗಳು ಕಾವ್ಯಲೋಕದಲ್ಲಿ ಘಟಿಸುತ್ತವೆ. ಪರಿಶುದ್ಧ ಮಾನವರ ಉಸಿರು ಪರಿಮಳದ ಹಾಗೆ ಎಂದು ಅನುಭಾವಿಗಳು ಹೇಳುತ್ತಾರೆ.

ಮಹಾದೇವಿಯಕ್ಕನ ವಚನಗಳು ಕಾವ್ಯಶಕ್ತಿಯಿಂದ ಅನುಪಮವಾಗಿವೆ. ಎಲ್ಲಕ್ಕೂ ಹೆಚ್ಚಾಗಿ ಬದುಕಿನ ಕಾಳಜಿಯಿಂದ ಮಹತ್ವಪೂರ್ಣವಾಗಿವೆ. ಅಕ್ಕ ಮಹಾದೇವಿ ವಿರಕ್ತೆಯಾದರೂ ಸಂಸಾರವನ್ನು ಆನಂದಮಯಗೊಳಿಸುವ ಛಲ ಹೊತ್ತವಳು. ಆದರ್ಶ ಸತಿ-ಪತಿ ಹೇಗಿರಬೇಕೆಂಬುದನ್ನು ತನ್ನ ಮತ್ತು ಚೆನ್ನಮಲ್ಲಿಕಾರ್ಜುನ ದೇವರ ಆತ್ಮಸಂಬಂಧದಿಂದ ಸೂಚಿಸಿದವಳು. ಪವಿತ್ರ ಬದುಕನ್ನು ಹೊಂದುವ ಮೂಲಕ ಅನುಭಾವವೆಂಬ ಆಧ್ಯಾತ್ಮಿಕ ಅನುಭವ ಮತ್ತು ಲೋಕಾನುಭವಗಳ ಮಧ್ಯದ ಅಂತರವನ್ನು ಕಳೆದವಳು. ಮಾನವಕುಲಕ್ಕೆ ಪಾವಿತ್ರ್ಯದ ಸಾಕಾರ ರೂಪವಾಗಿ ಕಂಡವಳು.

ಏಕಾಂತ ಮತ್ತು ಪರಮಾನಂದದ ಸ್ಥಿತಿಯನ್ನು ಅನುಭವಿಸುವುದು ಅಧ್ಯಾತ್ಮಜೀವಿಗಳ ಆಶಯವಾಗಿರುತ್ತದೆ. ಆದರೆ ಅದಕ್ಕಾಗಿ ಬದುಕಿನಿಂದ ಪಲಾಯನ ಮಾಡಬೇಕಿಲ್ಲ ಎಂದು ಅಕ್ಕ ಸೂಚಿಸುತ್ತಾಳೆ. ಅಕ್ಕ ಮಹಾದೇವಿ ಜ್ಞಾನ ಮತ್ತು ಸೌಂದರ್ಯದ ಗಣಿಯಾಗಿದ್ದಳು. ಸಂಪತ್ತು ಅವಳ ಕಾಲ ಅಡಿಯಲ್ಲಿ ಬಿದ್ದಿತ್ತು. ಆದರೆ ಪಾವಿತ್ರ್ಯದ ಮುಂದೆ ಅವಳಿಗೆ ಯಾವುದೂ ಮುಖ್ಯ ಎನಿಸಲಿಲ್ಲ. ಎಲ್ಲವನ್ನೂ ತೊರೆದು ವೈರಾಗ್ಯಮೂರ್ತಿಯಾಗಿದ್ದ ಅಕ್ಕ ಸಂಸಾರದಲ್ಲಿ ಪವಿತ್ರವಾಗಿರುವ ಕಲೆಯನ್ನು ಕಲಿಸುತ್ತಾಳೆ. ಬದುಕನ್ನು ಹೇಗೆ ಪ್ರೀತಿಸಬೇಕೆಂಬುದನ್ನು ನಮಗೆ ತೋರಿಸಿಕೊಡುತ್ತಾಳೆ.

 ಉಸಿರು ಪರಿಮಳವಾಗುವುದು, ಕ್ಷಮೆ, ದಮೆ (ಇಂದ್ರಿಯ ನಿಗ್ರಹ), ಶಾಂತಿ ಮತ್ತು ಸೈರಣೆಯಿಂದ ಇರುವುದು, ಲೋಕವೇ ತಾನಾಗುವುದು. ಹೀಗೆ ಇವುಗಳನ್ನು ಸಾಂಸಾರಿಗರೂ ಸಾಧಿಸಬಹುದು. ಉಸಿರು ಪರಿಮಳವಾಗುವುದೆಂದರೆ ನಮ್ಮ ಹಿತಮಿತ ಆಹಾರ, ವಿಚಾರ ಮತ್ತು ಆಚಾರ ಪರಿಶುದ್ಧವಾಗಿರಬೇಕು ಎಂದರ್ಥ. ಲೋಕದ ಜನರೊಂದಿಗೆ ವ್ಯವಹರಿಸುವಾಗ ಕ್ಷಮಾಗುಣವಿರಬೇಕು. ಇದರಿಂದ ಮನಶ್ಶಾಂತಿಯ ಜೊತೆಗೆ ಸಾಮಾಜಿಕ ಶಾಂತಿಯೂ ಲಭಿಸುವುದು. ಇಂದ್ರಿಯ ನಿಗ್ರಹದ ಶಕ್ತಿಯನ್ನು ಹೊಂದಿರಬೇಕು. ಇದರಿಂದ ನೆಮ್ಮದಿಯೊಂದಿಗೆ ಸಾಮಾಜಿಕ ಬದುಕಿನಲ್ಲಿ ಗೌರವಾರ್ಹ ವ್ಯಕ್ತಿಗಳಾಗುವೆವು. ಶಾಂತ ಸ್ವಭಾವ ಮತ್ತು ಸಹನಾಶಕ್ತಿಯಿಂದ ಸಂಸಾರದಲ್ಲಿದ್ದೂ ಸ್ಥಿತಪ್ರಜ್ಞರಾಗಿ ಬದುಕುವ ಯೋಗ್ಯತೆ ಬರುವುದು. ದೈನಂದಿನ ಬದುಕಿನಲ್ಲಿದ್ದುಕೊಂಡೇ ಇಂಥ ಸಾಧನೆ ಮಾಡಿದವರು ಸಮಾಧಿ ಸ್ಥಿತಿಯನ್ನು ಹೊಂದಲು ಹಿಮಾಲಯಕ್ಕೆ ಹೋಗಬೇಕಿಲ್ಲ. ಇಂಥವರು ಸಂಸಾರದಲ್ಲಿದ್ದುಕೊಂಡೇ ಸಮಾಧಿ ಸ್ಥಿತಿಯನ್ನು ಹೊಂದುವ ಸಾಮರ್ಥ್ಯ ಪಡೆದಿರುತ್ತಾರೆ.

ಜಗದ ಜಂಜಾಟದಿಂದ ದೂರ ಉಳಿಯುವುದಕ್ಕಾಗಿ ಏಕಾಂತವನ್ನು ಹುಡುಕಿಕೊಂಡು ಹಿಮಾಲಯದ ಕಡೆಗೆ ಪಲಾಯನ ಮಾಡುವವರೂ ಉಂಟು. ಆದರೆ ಹೀಗೆ ಮಾಡುವ ಆವಶ್ಯಕತೆ ಇಲ್ಲ. ಬೇರೆಯವರ ಸುಖದುಃಖ ತಮ್ಮ ಸುಖದುಃಖ ಎಂದು ಸಾಂಸಾರಿಗರು ಭಾವಿಸಿ, ನೆರೆಹೊರೆಯವರಿಗೆ ಬರಿ ಬಾಯಿಮಾತಿನ ಅನುಕಂಪ ತೋರಿಸದೆ, ಸಾಧ್ಯವಾದಷ್ಟು ಸಹಾಯಹಸ್ತ ಚಾಚುತ್ತ ಬದುಕಬೇಕು. ಆ ಮೂಲಕ ಲೋಕವೇ ತಾವಾಗಬೇಕು.

ಇಂಥ ಸಾಧನೆ ಮಾಡಿದ ಸಾಂಸಾರಿಗರು ಪರಿಮಳಕ್ಕಾಗಿ ಕುಸುಮವನ್ನು ಹುಡುಕಿಕೊಂಡು ಹೋಗುವುದಿಲ್ಲ. ಮಾನಸಿಕ ನೆಮ್ಮದಿಗಾಗಿ ಸಮಾಧಿಸ್ಥಿತಿ ತಲುಪಲು ಹೆಣಗುವುದಿಲ್ಲ. ಏಕಾಂತಕ್ಕಾಗಿ ಚಡಪಡಿಸುವುದಿಲ್ಲ. ಕುಸುಮದ, ಸಮಾಧಿಯ ಮತ್ತು ಏಕಾಂತದ ಹಂಗಿಲ್ಲದೆ ಇವೆಲ್ಲವನ್ನೂ ಸಾಧಿಸುತ್ತಾರೆ. ಸಂತರ ವ್ಯಕ್ತಿತ್ವವನ್ನು ಹೊಂದುತ್ತಾರೆ.

ಮಹಾದೇವಿಯಕ್ಕ ಹೇಳಿದ ಹಾಗೆಯೆ 12ನೆ ಶತಮಾನದ ಶರಣರು ಬದುಕಿ ತೋರಿಸಿದ್ದಾರೆ. ಅವರಲ್ಲಿ ಬಹುಪಾಲು ಮಂದಿ ವಿವಿಧ ಕಾಯಕಗಳನ್ನು ಮಾಡುವ ಸಾಂಸಾರಿಗರೇ ಆಗಿದ್ದರು. ಜಗದ ನೋವನ್ನು ತಮ್ಮ ನೋವಾಗಿಸಿಕೊಂಡ ಶರಣರು ಜನರ ಮಧ್ಯೆ ಇದ್ದುಕೊಂಡು, ಅವರ ಅನುಭವವನ್ನು ಗೌರವಿಸುತ್ತಲೇ ಅವರಿಗೆ ಹೊಸ ಬದುಕಿನ ಅರಿವನ್ನು ಕೊಡುತ್ತ ಸಾಗಿದವರು. ಲೋಕವೇ ತಾವಾದವರು. ಕ್ಷಮೆ, ದಮೆ, ಶಾಂತಿ ಮತ್ತು ಸೈರಣೆಯಿಂದ ಇದ್ದವರು. ಹೀಗಾಗಿ ಶರಣರಿಗೆ ಸಮಾಧಿಯ ಮತ್ತು ಏಕಾಂತದ ಹಂಗು ಇರಲಿಲ್ಲ. ಅವರು ಜನರ ಜೊತೆಗೇ ಇದ್ದು ಸಮಾಜ ಪರಿವರ್ತನೆಯಲ್ಲಿ ತೊಡಗಿದ್ದರು. ಸರ್ವಸಮತ್ವದ ಸಮಾಜಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿದ್ದರು. ಇಂಥ ಶರಣಸಂಕುಲದಲ್ಲಿ ಕಂಗೊಳಿಸುವ ಅಕ್ಕ ಮಹಾದೇವಿಯ ಈ ವಚನ ಜೀವಪರ ಧೋರಣೆಯ ಪ್ರತೀಕವಾಗಿದೆ.

ಅಕ್ಕಮಹಾದೇವಿ ಈ ವಚನದಲ್ಲಿ ‘ಸಮಾಧಿ’ ಮತ್ತು ‘ಏಕಾಂತ’ದ ಅರ್ಥವಿಸ್ತಾರ ಮಾಡಿದ್ದಾಳೆ. ವ್ಯಷ್ಟಿ ಪ್ರಜ್ಞೆಯ ಈ ಪದಗಳು ಅಕ್ಕನ ವಚನದಲ್ಲಿ ಸಮಷ್ಟಿ ಪ್ರಜ್ಞೆಯ ಪ್ರತೀಕವಾಗಿ ಮಾನವೀಯ ಚಿಂತನೆಗೆ ಹಚ್ಚುತ್ತವೆ. ಈ ದೃಷ್ಟಿಯಿಂದ ಇದೊಂದು ವಿಶಿಷ್ಟ ವಚನವಾಗಿದೆ. ಒಬ್ಬ ವ್ಯಕ್ತಿ ಸಂಸಾರಿಗನೋ ಅಥವಾ ವಿರಕ್ತನೋ ಎಂಬುದು ಶರಣರಿಗೆ ಮುಖ್ಯವಾಗಿರಲಿಲ್ಲ. ಆತ ಪವಿತ್ರನಾಗಿದ್ದಾನೆಯೆ? ಮಾನವ ಬದುಕಿನ ಬಹುದೊಡ್ಡ ಸಾಧನೆಯಾದ ‘ಸಮಾಧಿಸ್ಥಿತಿ’ಯನ್ನು ಹೊಂದಿದ್ದಾನೆಯೆ? ಲೋಕದೊಳಗೆ ಇದ್ದೂ ಏಕಾಂತವನ್ನು ಸಾಧಿಸಿದ್ದಾನೆಯೆ? ಎಂಬುವು ಮುಖ್ಯವಾಗಿದ್ದವು.

ಶರಣಧರ್ಮವು ಹೀಗೆ ಸಂಸಾರದಲ್ಲಿ ಸದ್ಗತಿ ಕಾಣುವ ಧರ್ಮವಾಗಿದೆ. ಜೀವನ್ಮುಖಿ ಧರ್ಮವಾಗಿದೆ. ಸಾಧು, ಸನ್ಯಾಸಿ, ವಿರಕ್ತರು ಮತ್ತು ಯತಿಗಳು ಯಾವ ಸಾಧನೆಗಾಗಿ ಸಂಸಾರ ತ್ಯಜಿಸಿ ಜೀವನ ಪರ್ಯಂತ ಧ್ಯಾನ ಮಾಡುವರೋ ಅಂಥ ಸಾಧನೆಯನ್ನು ಸಂಸಾರದಲ್ಲಿದ್ದುಕೊಂಡೇ ಮಾಡಬಹುದು ಎಂದು ವೀರ ವಿರಾಗಿಣಿ ಅಕ್ಕ ಮಹಾದೇವಿ ಇಷ್ಟೊಂದು ದೃಢನಿರ್ಧಾರದಿಂದ ಹೇಳಿದ್ದು ಲೋಕದ ಜನರಿಗೆಲ್ಲ ಹೊಸಬೆಳಕನ್ನು ಕೊಡುವಂಥದ್ದು. ಈ ಲೋಕವನ್ನೇ ಸದಾಚಾರದ ಬಲದಿಂದ ಸ್ವರ್ಗವಾಗಿಸುವಂಥದ್ದು.

ನಾವು ಬಸವಣ್ಣನವರಿಗೆ ಮಹಾನುಭಾವಿ, ಭಕ್ತಿಭಂಡಾರಿ, ವಿಶ್ವಗುರು ಮತ್ತು ಜಗಜ್ಯೋತಿ ಎಂದು ಕೊಂಡಾಡುತ್ತೇವೆ. ಏಕೆಂದರೆ ಬಸವಣ್ಣನವರು ಸಂಸಾರದಲ್ಲಿ ಇದ್ದುಕೊಂಡು ಇದನ್ನೆಲ್ಲ ಸಾಧಿಸಿದ್ದರು. ಅಂತೆಯೆ ಅಲ್ಲಮಪ್ರಭು, ಅಕ್ಕ ಮಹಾದೇವಿ, ಸಿದ್ದರಾಮ ಮತ್ತು ಚನ್ನಬಸವಣ್ಣ ಮುಂತಾದ ವಿರಕ್ತರು ಇತರ ಸಾಂಸಾರಿಕ ಶರಣರ ಹಾಗೆ ಬಸವಣ್ಣನವರನ್ನು ದೇವಸ್ವರೂಪವಾಗಿಯೇ ಕಂಡಿದ್ದಾರೆ.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News