ಶೇಕ್ಸ್‌ಪಿಯರ್‌ಗೆ ನಮಸ್ಕಾರ

Update: 2017-10-06 18:45 GMT

ಈ ಜಗತ್ತು ಶೇಕ್ಸ್‌ಪಿಯರ್‌ನನ್ನು ಬರೆದಷ್ಟು ಇನ್ನಾವ ಲೇಖಕನನ್ನೂ ಬರೆಯಲಿಲ್ಲ. ಇಂದು ಜಗತ್ತಿನ ಎಲ್ಲ ಭಾಷೆಗಳಲ್ಲೂ ವಿಲಿಯಂ ಶೇಕ್ಸ್‌ಪಿಯರ್ ಜನಪ್ರಿಯ. ಕನ್ನಡದಲ್ಲೂ ಶೇಕ್ಸ್‌ಪಿಯರ್‌ನ ಬರಹಗಳು ಸಾಕಷ್ಟು ಬಂದಿವೆ. ಬೇರೆ ಬೇರೆ ಲೇಖಕರು ಶೇಕ್ಸ್‌ಪಿಯರ್‌ನನ್ನು ಮತ್ತೆ ಮತ್ತೆ ಬರೆದಿದ್ದಾರೆ. ಮೊಗೆದಷ್ಟೂ ನೀರು ಕೊಡುವ ಬಾವಿ ಅವನು. ಶೇಕ್ಸ್‌ಪಿಯರ್‌ನ ನಾನೂರನೆ ವರ್ಧಂತಿಯ ನೆನಪಾಗಿ ಕನ್ನಡ ಭಾರತಿಯು ‘ಶೇಕ್ಸ್‌ಪಿಯರಿಗೆ ನಮಸ್ಕಾರ’ ಬೃಹತ್ ಕೃತಿಯನ್ನು ಹೊರತಂದಿತ್ತು. ಖ್ಯಾತ ಕವಿ ಶಾ. ಬಾಲುರಾವ್ ಈ ಕೃತಿಯನ್ನು ಸಂಪಾದಿಸಿದ್ದರು. 1966ರಲ್ಲಿ ಹೊರಬಂದಿರುವ ಈ ಕೃತಿಯನ್ನು ಇದೀಗ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮರುಮುದ್ರಣಗೊಳಿಸಿದೆ.

ಕನ್ನಡ ನಾಡಿನ ಖ್ಯಾತ ಬರಹ ಗಾರರು ಈ ಕೃತಿಯಲ್ಲಿ ಶೇಕ್ಸ್‌ಪಿಯರ ನಿಗೆ ತಮ್ಮ ನುಡಿ ನಮನಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ ಮೂರು ಭಾಗಗಳಿವೆ. ಮೊದಲ ಲೇಖನ ವಿಭಾಗದಲ್ಲಿ ಶೇಕ್ಸ್‌ಪಿಯರನ ಸಾಹಿತ್ಯ ಸೃಷ್ಟಿಯ ಬೇರೆ ಬೇರೆ ಮುಖಗಳ ಮೇಲೆ ಬೆಳಕು ಚೆಲ್ಲುವ, ಕನ್ನಡ ಸಾಹಿತ್ಯ ರಂಗಭೂಮಿಗಳ ಮೇಲೆ ಅವನ ಪ್ರಭಾವ ಎಷ್ಟೆಂದು ಅಳೆದು ತೋರಿಸುವ ಹದಿನಾರು ಬರಹಗಳಿವೆ. ಎರಡನೆಯ ಭಾಷಾಂತರ ವಿಭಾಗದಲ್ಲಿ ಮುಖ್ಯವಾಗಿ ಈವರೆಗೆ ಹೊಸಗನ್ನಡದಲ್ಲಿ ಅನುವಾದವಾಗದೆ ಉಳಿದ ಕವನಗಳ, ಗೀತಗಳ, ನಾಟಕಗಳಿಂದ ಆರಿಸಿದ ರಸಭಾಗಗಳ ಮೂವತ್ತಕ್ಕೂ ಹೆಚ್ಚು ಭಾಷಾಂತರಗಳಿವೆ. ಕನ್ನಡ ದಲ್ಲೇ ಮೊತ್ತ ಮೊದಲ ಬಾರಿಗೆ ಕವಿಯ ಹದಿನಾರು ಸಾನೆಟ್ಟುಗಳು ಇಲ್ಲಿ ಅನುವಾದಿತವಾಗಿವೆ. ಈಗ ದುರ್ಲಭವಾದ ಹಿಂದಿನ ಒಂದೆರಡು ಕಾವ್ಯಾನುವಾದಗಳೂ ಇಲ್ಲಿವೆ. ಮೂರನೆಯದಾದ ‘ಕೃತಿ ಪರಿಚಯ’ ದಲ್ಲಿ ಶೇಕ್ಸ್‌ಪಿಯರನ ಒಂದೊಂದು ಕೃತಿಯನ್ನು ಪ್ರತ್ಯೇಕವಾಗಿ ಎತ್ತಿಕೊಂಡು ಸ್ಥೂಲವಾಗಿ ಪರಿಚಯ ಮಾಡಿಕೊಡಲಾಗಿದೆ. ಪ್ರಸ್ತಾವನೆಯಲ್ಲಿ ಕವಿಯ ಜೀವನ, ಕೃತಿ, ಸಾಧನೆಗಳ ಒಂದು ಹಕ್ಕಿ ನೋಟವಿದೆ. 394 ಪುಟಗಳ ಈ ಕೃತಿಯ ಮುಖಬೆಲೆ 200 ರೂಪಾಯಿ.
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News