ಜನಪ್ರಿಯ ಧಾಟಿಯ ಅಪರಾಧ ಬರಹಗಳು

Update: 2017-10-08 18:35 GMT

ಅಪರಾಧ ಜಗತ್ತಿನ ಬರಹಗಳಿಗೆ ಅದರದೇ ಆದ ಜನಪ್ರಿಯ ಓದುಗ ಬಳಗವೊಂದಿದೆ. ಅಪರಾಧ ಜಗತ್ತನ್ನು ಬರೆಯುವ ಮೂಲಕವೇ ಖ್ಯಾತರಾದ ಪತ್ರಕರ್ತರು, ಲೇಖಕರು ನಮ್ಮ ನಡುವೆ ಇದ್ದಾರೆ. ಇಷ್ಟಕ್ಕೂ ಅಪರಾಧ ಜಗತ್ತಿನ ಬಗ್ಗೆ ಬರೆಯುವುದು ಸುಲಭ ಸಂಗತಿಯೇನೂ ಅಲ್ಲ. ನಗರ ಬದುಕಿನ ನರನಾಡಿಗಳನ್ನು ಅರ್ಥ ಮಾಡಿಕೊಂಡವರಿಗೆ ಮಾತ್ರ ಈ ಅಪರಾಧ ಜಗತ್ತು ಹೇಗೆ ನಮ್ಮ ನಗರವನ್ನು ಅನಿವಾರ್ಯ ಎನ್ನುವ ರೀತಿಯಲ್ಲಿ ಬೆಸೆದಿದೆ ಎನ್ನುವುದು ಮನವರಿಕೆಯಾಗಬಹುದು. ಮುಂಬೈಯ ಅಪರಾಧ ಜಗತ್ತನ್ನು ಅಧ್ಯಯನ ಮಾಡುವುದೆಂದರೆ, ಮುಂಬೈ ಶಹರದ ಇತಿಹಾಸವನ್ನು ಅಧ್ಯಯನ ಮಾಡಿದಂತೆಯೇ ಸರಿ. ಅಭಿವೃದ್ಧಿಯ ಜೊತೆ ಜೊತೆಗೇ ಬೆಳೆದ ಈ ಅಪರಾಧ ಜಗತ್ತು ಇದೀಗ ಹೇಗೆ ಇಡೀ ವ್ಯವಸ್ಥೆಯನ್ನು ಕಂಡೂ ಕಾಣದಂತೆ ನಿಯಂತ್ರಿಸುತ್ತಿದೆ ಎನ್ನುವುದನ್ನು ನೋಡುತ್ತಿದ್ದೇವೆ. ರಾಜಕೀಯ ಮತ್ತು ಅಪರಾಧ ಜಗತ್ತು ಪರಸ್ಪರ ಸಯಾಮಿಯ ರೂಪ ತಳೆದಿದೆ. ಇಂತಹ ಸಂದರ್ಭದಲ್ಲಿ, ಅಪರಾಧ ಜಗತ್ತನ್ನು ಶಾಸ್ತ್ರೀಯ ನೆಲೆಯಲ್ಲಿ ಅಧ್ಯಯನ ಮಾಡುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಇದೇ ಸಂದರ್ಭದಲ್ಲಿ ಮುಂಬೈಯಲ್ಲಿರುವ ಹಲವು ಕನ್ನಡ ಬರಹಗಾರರು ತಮ್ಮ ತಮ್ಮ ಮಿತಿಯಲ್ಲಿ ಈ ಅಪರಾಧ ಜಗತ್ತನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಕೆಲವರು ಅದನ್ನು ರೋಚಕವಾಗಿ ನಿರೂಪಿಸಿದರೆ, ಕೆಲವರು ಅದನ್ನು ವಿಶ್ಲೇಶನಾತ್ಮಕವಾಗಿಬರೆಯಲು ಪ್ರಯತ್ನಿಸಿದ್ದಾರೆ. ಅಂತಹ ಪ್ರಯತ್ನಗಳಲ್ಲಿ ಶ್ರೀನಿವಾಸ ಜೋಕಟ್ಟೆ ಅವರು ಬರೆದಿರುವ ‘ಒತ್ತಿ ಬರುವ ಕತ್ತಲ ದೊರೆಗಳು’ ಒಂದು.
ಮುಂಬೈಯಲ್ಲಿ ಬಹುಸಮಯದಿಂದ ಬದುಕುತ್ತಿರುವ ಜೋಕಟ್ಟೆ, ಅಲ್ಲಿನ ಅಪರಾಧ ಬೆಳವಣಿಗೆಗಳನ್ನು ಬೇರೆ ಬೇರೆ ಮಾಧ್ಯಮಗಳ ಮೂಲಕ ತಮ್ಮದಾಗಿಸಿಕೊಂಡವರು. ಈ ಕೃತಿಯಲ್ಲಿ ಕೇವಲ ಮುಂಬೈಗಷ್ಟೇ ಸೀಮಿತವಾಗದೆ, ದೇಶದ ಅಪರಾಧ ಜಗತ್ತಿನ ಬೇರೆ ಬೇರೆ ನೆಲೆಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಭೂಗತ ಜಗತ್ತಿನ ಗ್ಲಾಮರ್, ನಕ್ಸಲೈಟ್ ಕ್ರಾಂತಿಯ ಉಗ ಮಸ್ಥಾನ, ಅಕ್ರಮ ಗಡಿ ಪ್ರವೇಶ, ಅಫೀಮು ಅಮಲು, ಇಸ್ಲಾಮಿಕ್ ಸ್ಟೇಟ್, ಚೋರ್ ಬಜಾರ್, ಎನ್‌ಕೌಂಟರ್...ಹೀಗೆ ಅವರು ಇಲ್ಲಿ ಮುಟ್ಟದ ವಿಷಯಗಳಿಲ್ಲ. ಎಲ್ಲವೂ ಜಗತ್ತನ್ನು ಕಾಡುತ್ತಿರುವ ಸಂಗತಿಗಳೇ ಆಗಿವೆ. ಆದರೆ ಹೆಚ್ಚಿನ ಲೇಖನಗಳು ವಿಶ್ಲೇಷಣಾತ್ಮಕ ದಾಟಿಯಲ್ಲಿರದೆ, ವಿವರಗಳನ್ನು ಹೊಂದಿರುವುದರಿಂದ ಸಮಸ್ಯೆಯ ಮೂಲವನ್ನು ಅದು ತಲುಪುವುದಿಲ್ಲ. ಬಹುತೇಕ ಲೇಖನಗಳು ಮಾಧ್ಯಮಗಳ ವರದಿಗಳನ್ನು ಆಧರಿಸಿರುವುದರಿಂದ, ಅಪರಾಧವನ್ನು ಜನಪ್ರಿಯ ಕಣ್ಣಿನಲ್ಲೇ ಅವರು ನೋಡಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಅದಕ್ಕಿರುವ ಬೇರೆ ಬೇರೆ ಸಾಮಾಜಿಕ, ಆರ್ಥಿಕ, ಧಾರ್ಮಿಕ ಆಯಾಮಗಳನ್ನಿಟ್ಟು ಅವರು ಬರೆಯುವ ಪ್ರಯತ್ನ ಮಾಡಿದ್ದು ಕಡಿಮೆ. ಆದರೂ, ಇಲ್ಲಿರುವ ದಟ್ಟ ವಿವರಗಳು ಅಪರಾಧ ಜಗತ್ತಿನ ಮೇಲ್ಮೈಯನ್ನು ಸ್ಪರ್ಶಿಸಲು ಸಹಾಯ ಮಾಡುತ್ತದೆ. ಸಾಧನಾ ಪಬ್ಲಿಕೇಶನ್ಸ್ ಹೊರತಂದಿರುವ ಈ ಕೃತಿಯಮುಖಬೆಲೆ 200 ರೂ. ಆಸಕ್ತರು 9480088960 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News