ಕವಿತೆಗಳಲ್ಲಿ ತೆರೆದುಕೊಳ್ಳುವ ಆಕಾಶ

Update: 2017-10-10 18:42 GMT

ಲೇಖಕ ಶ್ರೀನಿವಾಸ ಜೋಕಟ್ಟೆ ವರ್ತಮಾನಕ್ಕೆ ಬಹುನೆಲೆಗಳಲ್ಲಿ ಸ್ಪಂದಿಸುತ್ತಾ ಬಂದವರು. ಪತ್ರಕರ್ತರಾಗಿ, ಲೇಖಕರಾಗಿ, ಕವಿಯಾಗಿ, ಕತೆಗಾರರಾಗಿ, ಪ್ರವಾಸಿಗರಾಗಿ...ತಮ್ಮ ಬರಹಗಳನ್ನು ಬೇರೆ ಬೇರೆ ರೀತಿಯ ಪ್ರಯೋಗಕ್ಕೆ ಒಡ್ಡಿಕೊಂಡವರು. ಪತ್ರಿಕಾರಂಗದ ಅವಸರದ ಬರಹಗಳಿಗೂ ಜೋಕಟ್ಟೆ ಪ್ರವೀಣರು. ಆದುದರಿಂದಲೇ, ಅನೇಕ ಲೇಖನಗಳು ಬೀಸಾಗಿರುತ್ತವೆ. ಹಾಗೆಯೇ ಗಂಭೀರ ಅಧ್ಯಯನ ನಡೆಸಿ ಬರೆದ ಕೃತಿಗಳೂ ಬಹಳಷ್ಟಿವೆ. ಅಪರಾಧ ಕ್ಷೇತ್ರಗಳನ್ನೂ ಬಿಡದೆ ತಮ್ಮ ಸೃಜನಶೀಲತೆಯನ್ನು ಒರೆಗೆ ಹಚ್ಚಿರುವ ಜೋಕಟ್ಟೆ ಒಳ್ಳೆಯ ಕವಿಯೂ ಹೌದು. ‘ಊರಿಗೊಂದು ಆಕಾಶ’ ಅವರೊಳಗಿನ ಸಂವೇದನಾಶೀಲ ಕವಿಯ ಮನಸ್ಸನ್ನು ತೆರೆದಿಡುತ್ತದೆ. ಬೆನ್ನುಡಿಯಲ್ಲಿ ಎ. ಆರ್. ನಾಗಭೂಷಣ್ ಅವರು ಹೇಳುವಂತೆ ‘‘ನೇತ್ಯಾತ್ಮಕ ಸನ್ನಿವೇಶಗಳಿಂದ ವ್ಯಗ್ರಗೊಳ್ಳುವ ಶ್ರೀನಿವಾಸ ಜೋಕಟ್ಟೆಯವರು ಸಹಜವಾಗಿ ಕಹಿಯಾದ ಟೀಕೆಗಳನ್ನು ಮಾಡುತ್ತಾರೆ. ಆದರೆ ಇದು ಆವೇಶದಲ್ಲಾಗಲಿ, ಸಿನಿಕತನದಲ್ಲಾಗಲಿ ಪರ್ಯವಸಾನಗೊಳ್ಳುವುದಿಲ್ಲ. ಬದುಕಿಗೆ ಮಾನವೀಯತೆಯೇ ಮೂಲಸೆಲೆ ಎಂಬ ನಂಬಿಕೆ ಇವರ ಕವಿತೆಗಳ ಆರೋಗ್ಯವನ್ನು ಕಾಪಾಡಿದೆ. ಚೆಲ್ಲಿ ಹೋದ ಅನೇಕ ವಿವರಗಳನ್ನು ಒಂದು ನಿರ್ದಿಷ್ಟ ದೃಷ್ಟಿಕೋನದಿಂದ ಒಂದು ಕೇಂದ್ರಕ್ಕೆ ತಂದು ಕವನಕ್ಕೆ ಗಹನತೆಯನ್ನು ನೀಡುವ ಶಕ್ತಿ ಇವರಿಗಿದೆ’’

ಈ ಕೃತಿಯಲ್ಲಿ ಒಟ್ಟು 41 ಕವಿತೆಗಳಿವೆ. ಮುಂಬೈ ನಗರಗಳ ಗಲ್ಲಿಗಳಲ್ಲಿ ಪದೇ ಪದೇ ಚಲಿಸುವ ಅವರ ಕವಿತೆಗಳು ಅಂತಿಮವಾಗಿ ತನ್ನ ತಾಯಿ ನೆಲದ ಬೇರಿಗಾಗಿ ಚಡಪಡಿಸುವುದನ್ನು ನಾವು ಕಾಣ ಬಹುದು. ಹಾಗೆಯೇ ಭಾರತವನ್ನು ಕಾಡುವ ಅಭದ್ರತೆ ವೈಯಕ್ತಿಕವಾಗಿ ಕವಿಯ ಆಳದಿಂದಲೇ ಹುಟ್ಟಿರುವುದು. ಪ್ರತೀ ಕವಿತೆಗಳಲ್ಲೂ ಕಂಡೂ ಕಾಣದಂತೆ ಈ ತೆಳು ಆತಂಕವನ್ನು ನಾವು ಕವಿತೆಗಳ ಸಾಲುಗಳಲ್ಲಿ ಕಾಣಬಹುದು. ಕಾಶ್ಮೀರದ ಆ್ಯಪಲ್‌ನ್ನು ರೂಪಕವಾಗಿಟ್ಟು ಭಾರತದ ಒಳಸಂಘರ್ಷವನ್ನು ಹೇಳುವ ‘ಅಖಂಡ ಭಾರತ’, ಗಣಪತಿಯ ಸಂದರ್ಭದಲ್ಲೇ ಹುಟ್ಟಿಕೊಳ್ಳುವ ಚಂದಾ ಕೇಳುವವರನ್ನು ವಸ್ತುವಾಗಿಟ್ಟು ಬರೆದ ‘ಗಣಪನ ಸದ್ದು’, ಮುಂಬೈಯ ಒಳ ನೋವುಗಳನ್ನು ಹೇಳುವ ‘ಮುಂಬಯಿ ಬಿಸಿ’, ಅಫ್ಘಾನಿಸ್ತಾನದ ದುರಂತವನ್ನು ಹೇಳುವ ‘ಬುದ್ಧ’, ಸುತ್ತಲ ಕ್ಷುದ್ರತೆಗಳಿಗೆ ದೇವರಲ್ಲಿ ಮೊರೆಯಿಡುವ ‘ನಾಸ್ತಿಕ’ನ ಅಸಹಾಯಕತೆಯನ್ನು ತೆರೆದಿಡುವ ‘ನಾಸ್ತಿಕನ ಸ್ವಗತ’...ಹೀಗೆ ಹಲವು ಉತ್ತಮ ಕವಿತೆಗಳನ್ನು ಒಳಗೊಂಡ, ಇಂದಿನ ರಾಜಕೀಯ ದುರಂತಗಳಿಗೆ ಸ್ಪಂದಿಸುವ ಕವನ ಸಂಕಲನ ಇದು. ಸುಂದರ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 80 ರೂ. ಆಸಕ್ತರು 9869394694 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News