ಸ್ಮಾರ್ಟ್ ಫೋನ್ ಆರ್ಡರ್ ಮಾಡುವ ಮೂಲಕ ಅಮೆಝಾನ್‌ಗೆ 50 ಲ.ರೂ.ಗಳ ಟೋಪಿ ಹಾಕಿದ!

Update: 2017-10-11 10:18 GMT

ಹೊಸದಿಲ್ಲಿ,ಅ.11: ಆನ್‌ಲೈನ್ ಮಾರಾಟ ಮಳಿಗೆಗಳಿಂದ ವಸ್ತುಗಳನ್ನು ಖರೀದಿಸುವ ವರು ತಮಗೆ ಬಂದ ಬಾಕ್ಸ್‌ಗಳಲ್ಲಿ ತಾವು ಬೇಡಿಕೆಯಿಟ್ಟಿದ್ದ ವಸ್ತುಗಳ ಬದಲಿಗೆ ಕಲ್ಲು,ಮಣ್ಣು ಇತ್ಯಾದಿ ಕೆಲಸಕ್ಕೆ ಬಾರದವುಗಳೇ ತುಂಬಿವೆ ಎಂದು ಆಗಾಗ್ಗೆ ದೂರಿಕೊಳ್ಳುವುದುಂಟು. ಇಂತಹ ನಿಜವಾದ ಪ್ರಕರಣಗಳಲ್ಲಿ ಮಾರಾಟಗಾರರು ಖರೀದಿದಾರನ ಹಣವನ್ನು ಮರಳಿಸುತ್ತಾರೆ. ದಿಲ್ಲಿಯ 21ರ ಹರೆಯದ ಯುವಕನೋರ್ವ ಈ ನೀತಿಯನ್ನೇ ತನ್ನ ವಂಚನೆಯ ದಂಧೆಗೆ ಬಳಸಿಕೊಂಡಿದ್ದು ಬೆಳಕಿಗೆ ಬಂದಿದೆ.

ಶಿವಂ ಚೋಪ್ರಾ ಬೇರೆ ಬೇರೆ ಫೋನ್ ನಂಬರ್‌ಗಳಿಂದ ನಕಲಿ ವಿಳಾಸಗಳನ್ನು ನೀಡಿ ಅಮೆಝಾನ್‌ನಿಂದ 166 ಪ್ರೀಮಿಯಂ ಸ್ಮಾರ್ಟ್ ಫೋನ್‌ಗಳಿಗೆ ಆರ್ಡರ್ ಮಾಡಿದ್ದ. ಈ ಫೋನ್‌ಗಳನ್ನು ವಿತರಿಸಲು ವಿಳಾಸವನ್ನು ಪತ್ತೆ ಹಚ್ಚಲು ಡೆಲಿವರಿ ಬಾಯ್‌ಗಳು ವಿಫಲರಾದಾಗ ಬೇರೆ ಸ್ಥಳಕ್ಕೆ ಅವರನ್ನು ಕರೆಸಿಕೊಂಡು ಡೆಲಿವರಿ ಪಡೆಯುತ್ತಿದ್ದ. ನಂತರ ತನಗೆ ಖಾಲಿ ಬಾಕ್ಸ್ ಬಂದಿದೆ ಎಂದು ಅಮೆಝಾನ್‌ಗೆ ದೂರು ನೀಡಿ ಹಣವನ್ನು ವಾಪಸ್ ಪಡೆಯುತ್ತಿದ್ದ. ಫೋನ್‌ಗಳನ್ನು ಒಎಲ್‌ಎಕ್ಸ್ ಅಥವಾ ಗಫಾರ್ ಫ್ಲೀ ಮಾರ್ಕೆಟ್‌ನಲ್ಲಿ ಮಾರಾಟ ಮಾಡುತ್ತಿದ್ದ.

ಈ ವರ್ಷದ ಎಪ್ರಿಲ್ ಮತ್ತು ಮೇ ನಡುವೆ ಈ ಚೋಪ್ರಾ ಅಮೆಝಾನ್‌ಗೆ ವಂಚಿಸಿರುವ ಹಣ ಬರೋಬ್ಬರಿ 50 ಲಕ್ಷ ರೂ.ಗಳು!

        (ಶಿವಂ ಚೋಪ್ರಾ)

ಕೊನೆಗೂ ತನಗೆ ಪಂಗನಾಮ ಹಾಕಲಾಗುತ್ತಿದೆ ಎಂದು ಅರಿತುಕೊಂಡ ಅಮೆಝಾನ್ ದಿಲ್ಲಿ ಪೊಲೀಸರಿಗೆ ದೂರು ಸಲ್ಲಿಸಿತ್ತು. ಕೆಲವು ತಿಂಗಳುಗಳ ಕಾಲ ತನಿಖೆ ನಡೆದು ಅಂತಿಮವಾಗಿ ಚೋಪ್ರಾ ಪೊಲೀಸರ ಬಲೆಯಲ್ಲಿ ಬಿದ್ದಿದ್ದಾನೆ. ಆತನ ಬಳಿಯಿಂದ 19 ಮೊಬೈಲ್ ಫೋನ್‌ಗಳು, 12 ಲ.ರೂ.ನಗದು, 40 ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಚೆಕ್‌ಬುಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚೋಪ್ರಾಗೆ ತಲಾ 150 ರೂ.ಗೆ ಪ್ರಿಆ್ಯಕ್ಟಿವೇಟ್ ಆಗಿದ್ದ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯಾತ ನನ್ನೂ ಪೊಲೀಸರು ಬಂಧಿಸಿದ್ದಾರೆ.

ಅಂದ ಹಾಗೆ ಚೋಪ್ರಾ ದಿಲ್ಲಿಯ ಶಿಕ್ಷಣ ಸಂಸ್ಥೆಯೊಂದರಿಂದ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News