ತುಮಕೂರು: ಅಂಡರ್‍ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಧರಣಿ

Update: 2017-10-12 11:47 GMT

ತುಮಕೂರು, ಅ.12: ಶಾಂತಿನಗರ-ಗಾಂಧಿನಗರಕ್ಕೆ ಸಂಪರ್ಕ ಕಲ್ಪಿಸುವ ಶಾಂತಿನಗರ ರೈಲ್ವೆ ಗೇಟ್ ಬಳಿ ಅಂಡರ್‍ಪಾಸ್ ನಿರ್ಮಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಬಾಬಾ ನೇತೃತ್ವದಲ್ಲಿ ಬಡಾವಣೆಯ ನಾಗರಿಕರು ಗಾಂಧಿನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿ, ನಗರಪಾಲಿಕೆ ಆಯುಕ್ತರು,ರೈಲ್ವೆ ಪೊಲೀಸರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಾಬಾ, ಅತ್ಯಂತ ಕಡು ಬಡವರು, ಕೂಲಿ ಕಾರ್ಮಿಕರು, ಪೌರಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು ಹಾಗೂ ಶ್ರೀಸಾಮಾನ್ಯರು ವಾಸವಾಗಿರುವ ಶಾಂತಿನಗರ, ಗೂಡ್‍ ಷೆಡ್ ಕಾಲನಿ, ಬನಶಂಕರಿ, ಸರಸ್ವತಿಪುರಂ ಹೀಗೆ ಹಲವು ಬಡಾವಣೆಗಳ ಜನರು ತಮ್ಮ ದಿನನಿತ್ಯದ ಕಾರ್ಯಕ್ಕೆ ರೈಲ್ವೆ ಹಳಿ ದಾಟಿ ಗಾಂಧಿನಗರ, ನಗರಪಾಲಿಕೆ ಮತ್ತಿತರರ ಕಡೆಗಳಿಗೆ ಬರಬೇಕಾಗಿದೆ. ಅಲ್ಲದೆ, ಸೈಂಟ್‍ ಮೇರಿಸ್, ಗಾಂಧಿನಗರ ಸರಕಾರಿ ಶಾಲೆ, ಎಂಪ್ರೆಸ್, ವಿದ್ಯಾನಿಕೇತನ ಶಾಲೆಗಳಿಗೆ ಪ್ರತಿದಿನ ಸಾವಿರಾರು ಮಕ್ಕಳು ರೈಲ್ವೆ ಹಳಿ ದಾಟಿ ಬರಬೇಕಾಗಿದೆ. ರೈಲ್ವೆ ಹಳಿಗಳ ಡಬ್ಲಿಂಗ್, ವಿದ್ಯುತ್ತೀಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಂದ ರೈಲ್ವೆ ಹಳಿ ದಾಟಲು ಅವಕಾಶ ನೀಡುತ್ತಿಲ್ಲ. ಅಲ್ಲದೆ ದಿನದಲ್ಲಿ ಸುಮಾರು 25-30 ರೈಲುಗಳು ಓಡಾಡುವುದರಿಂದ ಸಣ್ಣ ವೆತ್ಯಾಸವಾದರೂ ದೊಡ್ಡ ಅನಾಹುತವಾಗುವ ಸಂಭವವಿದೆ. ಜನರು ಜೀವ ಭಯದಿಂದ ಓಡಾಡುವಂತಹ ಸ್ಥಿತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆರಂಭದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಬೆಂಬಲವಾಗಿ ನಿಂತ ಸಂಸದ ಎಸ್.ಪಿ.ಮುದ್ದಹನುಮೇಗೌಡ ,ಶಾಸಕ ಡಾ.ರಫೀಕ್ ಅಹ್ಮದ್ ಅವರು ಅಂಡರ್‍ ಪಾಸ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುವ ನಾಟಕವಾಡಿ ಕೈತೊಳೆದುಕೊಂಡಿದ್ದಾರೆ ಎಂದು ದೂರಿದ ಅವರು, ಅಂಡರ್‍ ಪಾಸ್ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಕೂಡಲೇ ಅಂಡರ್‍ಪಾಸ್ ಜತೆಗೆ, ಶಾಲಾ ಕಾಲೇಜು ಮಕ್ಕಳು ಓಡಾಡಲು ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದೆ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಗರಸಭೆಯ ಮಾಜಿ ಸದಸ್ಯ ಕೆ.ಪಿ.ಮಹೇಶ್ ಮಾತನಾಡಿ, ಶಾಂತಿನಗರ ರೈಲ್ವೆ ಅಂಡರ್‍ಪಾಸ್ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವುದರಿಂದ ಗಾಂಧಿ ನಗರ ಮತ್ತು ಶಾಂತಿನಗರಕ್ಕೆ ಸಂಪರ್ಕ ಇಲ್ಲದಂತಾಗಿದೆ. ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಧರಣಿಯಲ್ಲಿ ಶಾಂತಿನಗರ, ಗೂಡ್‍ಷೆಡ್ ಕಾಲನಿ, ಬನಶಂಕರಿ, ಸರಸ್ವತಿಪುರಂ ಹಾಗೂ ಸುತ್ತಮುತ್ತ ನಾಗರಿಕರಾದ ಸೈಯದ್‍ನೂರ್, ಮೊಹಮ್ಮದ್‍ ರಫಿ, ಮುಜ್ಹಮ್ಮಿಲ್,ನವಾಝ್ ಪಾಷ, ಶಮೀರ್, ಎಚ್ ಅಬ್ದುಲ್ ವಾಜೀದ್,ಸಂಪತ್ ಕುಮಾರ್, ಕುಮಾರ್, ದೇವರಾಜು, ಕೆ.ಪಿ.ಮೋಹನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News