ಲಿಂಗ ತಾರತಮ್ಯದಿಂದ ಮಹಿಳೆಯ ಮೇಲೆ ಹಿಂಸೆ ಹೆಚ್ಚಾಗುತ್ತಿದೆ: ವೆಂಕಟಾಚಲ

Update: 2017-10-12 18:07 GMT

ಕೊಳ್ಳೇಗಾಲ, ಅ.12: ಸ್ವಾತಂತ್ರ್ಯ ಹಕ್ಕು, ಅವಕಾಶಗಳಿಗಾಗಿ ಮಹಿಳೆ ನಿರಂತರ ಹೋರಾಟ ಮಾಡಿಕೊಂಡೇ ಬಂದಿದ್ದಾಳೆ. ಲಿಂಗ ತಾರತಮ್ಯ ಹೋಗಲಾಡಿಸಲು ಹೆಣ್ಣಿಗೆ ಶಿಕ್ಷಣ ನೀಡುವ ಮೂಲಕ ಜೀವನ ವಿಧಾನವನ್ನು ಪುನರ್ ರಚಿಸುವ ಅಗತ್ಯವಿದೆ ಎಂದು ಹಿರಿಯ ವಕೀಲ ಡಿ. ವೆಂಕಟಾಚಲ ತಿಳಿಸಿದರು.

ಕೊಳ್ಳೇಗಾಲ ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಗು ಉಳಿಸಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಿಂಗ ವ್ಯವಸ್ಥೆಯ ತಾರತಮ್ಯದಿಂದಾಗಿ ಮಹಿಳೆಯ ಮೇಲಿನ ಹಿಂಸೆ ಹೆಚ್ಚಾಗುತ್ತಿದೆ, ಸಮಾಜ ಬದಲಾದಂತೆ ಅವುಗಳ ಸ್ವರೂಪವೂ ಬದಲಾವಣೆಯಾಗಿ ಲಿಂಗ ಅಸಮಾನತೆ ಪ್ರಕ್ರಿಯೆ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕ ಎಂ. ನಾಗೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ದೇಶದ ಪೂರ್ಣ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಮತ್ತು ವಿಶ್ವದ ಕ್ಷೇಮ ಹಾಗೂ ಶಾಂತಿ ಸಾಧಿಸಬೇಕಾದರೆ, ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ತ್ರೀಯರ ಬಹುಪಾಲು ಪಾತ್ರವು ಪುರುಷರಿಗೆ ಸಮಾನವಾಗಿ ಇದ್ದಲ್ಲಿ ಮಾತ್ರ ಸಾಧ್ಯ ಎಂದರು.

ಜಾಗತೀಕರಣದ ಪರಿಣಾಮದಿಂದಾಗಿ ಹೊಸ ಆರ್ಥಿಕ ನೀತಿಯು ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರಿದೆ. ಮಹಿಳೆಯ ಕೌಟುಂಬಿಕ ಜೀವನ, ಆರ್ಥಿಕ, ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರಗಳಲ್ಲೂ ಪತ್ಯಕ್ಷ ಹಾಗೂ ಪರೋಕ್ಷ ಬದಲಾವಣೆ ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲೂ ಹೆಣ್ಣು ಭ್ರೂಣ ಹತ್ಯೆ ಅಮಾನವೀಯ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ. ನಾಗೇಶ್ ಮಾತನಾಡಿ, ಭಾಗ್ಯಲಕ್ಷ್ಮೀ ಯೋಜನೆ ಸೇರಿದಂತೆ ಹೆಣ್ಣುಮಕ್ಕಳ ಪ್ರೋತ್ಸಾಹ ಯೋಜನೆಗಳ ಸಮರ್ಪಕ ಜಾರಿ ಹಿನ್ನೆಲೆಯಲ್ಲಿ ಭ್ರೂಣಹತ್ಯೆ ಕಡಿಮೆ ಯಾಗಿದೆ. ಅಂಗವಾಡಿ ಕಾರ್ಯಕರ್ತೆಯರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ಸಮರ್ಪಕ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಹೆಣ್ಣಿನ ರಕ್ಷಣೆ ಕುರಿತಂತೆ ಗ್ರಾಮೀಣ ಜನತೆಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಹೆಣ್ಣು ಮಗು ಉಳಿಸುವ ಪ್ರಯತ್ನ ಮಾಡಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮೈರಾಡ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಕುಮಾರ್, ಸುಬ್ರಹ್ಮಣ್ಯಂ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News