ಶಾಸಕ ಯೋಗೇಶ್ವರ್ ಕಾಂಗ್ರೆಸ್ ಗೆ ಗುಡ್ ಬೈ

Update: 2017-10-14 14:53 GMT

ಬೆಂಗಳೂರು, ಅ.22: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ  ಚನ್ನಪಟ್ಟಣ ಶಾಸಕ  ಸಿ.ಪಿ. ಯೋಗೆಶ್ವರ ಇಂದು ರಾಜೀನಾಮೆ ನೀಡಿದ್ದಾರೆ.
ಚನ್ನಪಟ್ಣಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷದ ನಾಯಕರುಗಳ ನಡವಳಿಕೆಯಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.

ಮುಂದಿನ ನಿರ್ಧಾರವನ್ನು ಅ.22ರಂದು ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ತಮಗೆ ಹಿಂದೆ ಕಾಂಗ್ರೆಸ್ ಟಿಕೆಟ್ ಕೈತಪ್ಪಲು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಕಾರಣ ಎಂದು ಯೋಗೇಶ್ವರ್ ಆರೋಪಿಸಿದರು.

‘ನನ್ನ ವೈಯಕ್ತಿಕ ಕಾರಣಗಳಿಂದ ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಆದುದರಿಂದ ನನ್ನ ಶಾಸಕಾಂಗ ಪಕ್ಷದ ಸದಸ್ಯತ್ವ ಸ್ಥಾನದಿಂದ ಬಿಡುಗಡೆಗೊಳಿಸಬೇಕು. ನನಗೆ ಸಹಕಾರ ನೀಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಎಲ್ಲ ನಾಯಕರಿಗೆ ಧನ್ಯವಾದಗಳು’ ಎಂಬ ಒಕ್ಕಣೆಯ ರಾಜೀನಾಮೆ ಪತ್ರವನ್ನು ಯೋಗೇಶ್ವರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಶನಿವಾರ ತಮ್ಮ ರಾಜೀನಾಮೆ ಸಲ್ಲಿಕೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯೋಗೇಶ್ವರ್, ಪಕ್ಷದ ವರಿಷ್ಠರ ನಿರ್ಲಕ್ಷದಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದೇನೆ. ಅ.22ರಂದು ಚನ್ನಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ನನ್ನ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಚರ್ಚಿಸಿ ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಎರಡು ದಶಕಗಳಿಂದ ನನ್ನ ವಿರುದ್ಧ ಸಂಚು ರೂಪಿಸುತ್ತಲೇ ಬರುತ್ತಿದ್ದಾರೆ. ಎರಡು ಚುನವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ಕೈ ತಪ್ಪಲು ಶಿವಕುಮಾರ್ ಅವರೇ ಕಾರಣ. ಕಾಂಗ್ರೆಸ್‌ನಲ್ಲಿ ನನ್ನ ಬೆಳವಣಿಗೆ ಸಹಿಸದೆ ಈ ರೀತಿ ಮಾಡುತಿದ್ದು, ಇದರಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ಯೋಗೇಶ್ವರ್ ಹೇಳಿದರು.

ಸಿ.ಪಿ.ಯೋಗೇಶ್ವರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ನೀಡಿದಷ್ಟು ಬೆಂಬಲ-ಸ್ವಾತಂತ್ರವನ್ನು ಯಾರೂ ನೀಡಿಲ್ಲ. ಅವರು ಸೂಚಿಸಿದವರಿಗೆ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಸ್ಥಾನ ನೀಡಲಾಗಿದೆ. ಆದರೂ, ಅವರು ಪಕ್ಷ ತೊರೆದಿದ್ದು, ಇದರಿಂದ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ.

-ಡಿ.ಕೆ.ಶಿವಕುಮಾರ್, ಇಂಧನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News