ಧನಬಲ, ಅಧಿಕಾರ ಬಲದಿಂದ ಬಿಜೆಪಿ ವಿಪಕ್ಷಗಳ ದನಿಯಡಗಿಸುತ್ತಿದೆ: ಶಿವಸೇನೆ

Update: 2017-10-14 12:44 GMT

ಮುಂಬೈ, ಅ.14 : ಭಾಂಡುಪ್ ಮುನಿಸಿಪಲ್ ಉಪಚುನಾವಣೆಯಲ್ಲಿ ಜಯ ಸಾಧಿಸಿದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ಆಡಳಿತ ಪಕ್ಷವು ಹಣಬಲ ಮತ್ತು ಅಧಿಕಾರ ಬಲ ಉಪಯೋಗಿಸಿ ವಿಪಕ್ಷಗಳ ಸದ್ದಡಗಿಸಲು ಯತ್ನಿಸುತ್ತಿದೆ ಹಾಗೂ ಚುನಾವಣೆಗಳನ್ನು ಭ್ರಷ್ಟ ಹಾದಿಯ ಮೂಲಕ ಗೆಲ್ಲಲಾಗುತ್ತಿದೆ ಎಂದು ಆರೋಪಿಸಿದೆ.

‘‘ಇಂತಹ ಒಂದು ವಾತಾವರಣ ನಮ್ಮ ದೇಶ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ಅಪಾಯಕಾರಿ,’’ ಎಂದು ಸಾಮ್ನಾದ ಸಂಪಾದಕೀಯವೊಂದರಲ್ಲಿ ಶಿವಸೇನೆ ಹೇಳಿಕೊಂಡಿದೆ. ಇತ್ತೀಚೆಗಿನ ನಂದೇಡ್-ವಘೇಲಾ ಮುನಿಸಿಪಲ್ ಚುನಾವಣೆ ನಡೆಯುವ ಮೊದಲು ವಿಪಕ್ಷಗಳನ್ನು ಚಿಂದಿಯಾಗಿಸಲು ಬಿಜೆಪಿಯು ಕಾಂಗ್ರೆಸ್ ಮತ್ತು ಶಿವಸೇನಾ ಕಾರ್ಪೊರೇಟರುಗಳನ್ನು ತನ್ನತ್ತ ಸೆಳೆದಿದೆ ಎಂದು ಅದು ಆರೋಪಿಸಿದೆ.

‘‘ಇತರ ಪಕ್ಷಗಳ ಜನರನ್ನು ಬಿಜೆಪಿಗೆ ಸೇರಿಸಲು ಅಧಿಕಾರ ದುರುಪಯೋಗಪಡಿಸಲಾಗುತ್ತಿದೆ. ಭಾಂಡುಪ್ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಶುದ್ಧ ಗೆಲುವೇನು ? ಎಂದು ಪ್ರಶ್ನಿಸಿದ ಶಿವಸೇನೆ ‘‘ಅಲ್ಲಿನ ಕಾಂಗ್ರೆಸ್ ಕಾರ್ಪೊರೇಟರ್ ಅವರು ಸಾವನ್ನಪ್ಪಿದ್ದರು, ಆದರೆ ಕಾಂಗ್ರೆಸ್ ಕುಟುಂಬವೊಂದನ್ನು ದತ್ತು ಪಡೆದು ಚುನಾವಣೆಗೆ ಈ ಕುಟುಂಬದ ಸದಸ್ಯರನ್ನೇ ನಿಲ್ಲಿಸಲಾಯಿತು,’’ ಎಂದು ಸೇನೆ ಆರೋಪಿಸಿದೆ.

‘‘‘ಸಿದ್ಧಾಂತಗಳಿರುವ ಹಾಗೂ ಹಲವು ಬುದ್ಧಿಜೀವಿಗಳಿರುವ ಪಕ್ಷವೊಂದು ಇತರ ಪಕ್ಷಗಳಿಂದ ಅಭ್ಯರ್ಥಿಗಳನ್ನು ಎರವಲು ಪಡೆಯುವುದು ಥರವಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಚೀನಾದ ಕಂಪೆನಿಯೊಂದು ಮಾಡುತ್ತಿದೆ. ಅಯ್ಯೋಧ್ಯೆಯಲ್ಲಿ ರಾಮ ಮಂದಿರದ ಬದಲು ರಾಮನ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಅಂತೆಯೇ ಬೇರೆ ಪಕ್ಷಗಳವರನ್ನು ಪಕ್ಷಕ್ಕೆ ಸೇರಿಸಿ ವಿಜಯವನ್ನು ಆಚರಿಸಲಾಗುತ್ತಿದೆ,’’ಎಂದು ಶಿವಸೇನೆ ಹೇಳಿದೆ.

ಕಾಂಗ್ರೆಸ್ ಪಕ್ಷ ನಂದೇಡ್ ಮುನಿಸಿಪಲ್ ಚುನಾವಣೆಯಲ್ಲಿ ಒಟ್ಟು 81 ಸೀಟುಗಳ ಪೈಕಿ 73ರಲ್ಲಿ ಜಯ ಸಾಧಿಸಿದ್ದರೆ ಬಿಜೆಪಿ ಕೇವಲ ಆರು ಸೀಟುಗಳನ್ನು ಗೆದ್ದಿತ್ತು. ಶಿವಸೇನೆ ಕೇವಲ ಒಂದು ಕ್ಷೇತ್ರದಲ್ಲಿ ವಿಜಯಿಯಾಗಿದೆ.ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೊರೇಶನ್ ಆಡಳಿತ ಹೊತ್ತಿರುವ ಶಿವಸೇನೆ, ಭಾಂಡುಪ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಾಗೃತಿ ಪಟೇಲ್ ವಿರುದ್ಧ ಸೋತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News