ದಲಿತ ಸಾಹಿತಿ ಕಂಚ ಐಲಯ್ಯ ಕೃತಿ ನಿಷೇಧಕ್ಕೆ ಸುಪ್ರೀಂ ನಕಾರ

Update: 2017-10-15 13:38 GMT

ಹೊಸದಿಲ್ಲಿ, ಅ.15: ಪ್ರಸಿದ್ಧ ದಲಿತ ಸಾಹಿತಿ ಮತ್ತು ಚಿಂತಕ ಕಂಚ ಐಲಯ್ಯ ಬರೆದ ‘ಸಾಮಾಜಿಕ ಸ್ಮಗ್ಲರ್ಲು ಕೊಮಟೊಲ್ಲು’ ಎಂಬ ವಿವಾದಾಸ್ಪದ ಕೃತಿಯನ್ನು ನಿಷೇಧಿಸಬೇಕೆಂಬ ಕೋರಿಕೆಯನ್ನು ತಳ್ಳಿಹಾಕಿರುವ ಸುಪ್ರೀಂಕೋರ್ಟ್, ಲೇಖಕರ ವಾಕ್ ಸ್ವಾತಂತ್ರ ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ಅನವಶ್ಯಕವಾಗಿ ನಿಗ್ರಹಿಸುವುದು ಸಲ್ಲದು ಎಂದು ತಿಳಿಸಿದೆ.

   ಈ ಕೃತಿಯನ್ನು ನಿಷೇಧಿಸಬೇಕೆಂದು ವಕೀಲ ಹಾಗೂ ದಿಲ್ಲಿ ಮೂಲದ ‘ಆರ್ಯ ವೈಶ್ಯ ನೌಕರರ ಹಾಗೂ ವೃತ್ತಿನಿರತರ ಸಂಘಟನೆ’ಯ ಸದಸ್ಯ ಕೆ.ವಿ.ವೀರಾಂಜನೇಯಲು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದರು. ಈ ಕೃತಿಯಲ್ಲಿ ಲೇಖಕರು ಕೆಲವು ಜಾತಿಯ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡಿದ್ದು ಜಾತಿ ಆಧಾರದಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅಲ್ಲದೆ ಕಂಚ ಐಲಯ್ಯರ ‘ಪೋಸ್ಟ್-ಹಿಂದು ಇಂಡಿಯಾ’ ಕೃತಿಯ ಕೆಲವು ಭಾಗಗಳನ್ನು ನಿಷೇಧಿಸಬೇಕೆಂದೂ ಅರ್ಜಿಯಲ್ಲಿ ಕೋರಿದ್ದರು.

   ಕೆಲವು ಜಾತಿಯ ಜನರ ಭಾವನೆಗಳಿಗೆ ಘಾಸಿ ಮಾಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಆಂಧ್ರಪ್ರದೇಶದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಕಂಚ ಐಲಯ್ಯ ರ ಪುಸ್ತಕದಲ್ಲಿ, ಆರ್ಯ ವೈಶ್ಯ ಬನಿಯಾ ಜನರು ಪರಿಶಿಷ್ಟ ಜಾತಿ, ಜನಾಂಗ ಹಾಗೂ ಹಿಂದುಳಿದ ಸಮುದಾಯದವರನ್ನು ಇಷ್ಟಪಡುತ್ತಿರಲಿಲ್ಲ. ಅವರಿಗೆ ವ್ಯಾಪಾರ ವಹಿವಾಟು ಮಾತ್ರ ಮುಖ್ಯವಾಗಿದ್ದು ಅಕ್ರಮವಾಗಿ ಹಣ ಸಂಪಾದನೆ ಮಾಡುವುದು ಈ ಜಾತಿಯವರ ಗುಣವಾಗಿದೆ. ಸರಕಾರಿ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಾರೆ. ಅಕ್ರಮವಾಗಿ ಸಂಪಾದಿಸಿದ ಹಣವನ್ನು ಭೂಮಿಯೊಳಗೆ ಹುಗಿದಿಟ್ಟು ಸರಕಾರಕ್ಕೆ ತೆರಿಗೆ ತಪ್ಪಿಸುತ್ತಿದ್ದಾರೆ ಎಂದು ಹೇಳಲಾಗಿದೆ . ಈ ಹಿನ್ನೆಲೆಯಲ್ಲಿ ಅವರ ಕೃತಿಯನ್ನು ನಿಷೇಧಿಸಲು ಸರಕಾರಕ್ಕೆ ಸೂಚಿಸಬೇಕು ಎಂದು ಅರ್ಜಿದಾರರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ,ಎ.ಕೆ. ಖಾನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರಿದ್ದ ವಿಭಾಗೀಯ ಪೀಠವು ಈ ಕೋರಿಕೆಯನ್ನು ತಳ್ಳಿಹಾಕಿತು.

  ಲೇಖಕರು ಬರೆಯುವ ಪುಸ್ತಕವು ಅವರ ಅಭಿವ್ಯಕ್ತಿ ಸ್ವಾತಂತ್ರದ ಚಿಂತನೆಯಾಗಿದೆ. ಸಂವಿಧಾನದ 32ನೇ ಪರಿಚ್ಛೇದದಡಿ ಕೃತಿಯನ್ನು ನಿಷೇಧಿಸುವುದು ಸೂಕ್ತ ಕ್ರಮವಾಗದು ಎಂದು ವಿಭಾಗೀಯ ಪೀಠ ತಿಳಿಸಿದೆ. ಪ್ರತಿಯೊಬ್ಬ ಲೇಖಕ ಅಥವಾ ಸಾಹಿತಿ ತನ್ನ ಚಿಂತನೆಯನ್ನು ಮುಕ್ತವಾಗಿ ವ್ಯಕ್ತಪಡಿಸುವ ಮೂಲಭೂತ ಹಕ್ಕನ್ನು ಹೊಂದಿದ್ದಾನೆ. ಈ ಹಕ್ಕಿಗೆ ನ್ಯಾಯಾಲಯ ಅತ್ಯಂತ ಗೌರವಪೂರ್ಣ ಮಾನ್ಯತೆ ನೀಡಿದೆ. ಆದ್ದರಿಂದ ಅರ್ಜಿದಾರರ ಕೋರಿಕೆಯನ್ನು ತಳ್ಳಿಹಾಕಲಾಗಿದೆ ಎಂದು ವಿಭಾಗೀಯ ಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News