ಜಂತರ್ ಮಂತರ್: ಪ್ರತಿಭಟನೆಗಳ ನಿಷೇಧ ಸರಿಯೇ?

Update: 2017-10-17 05:13 GMT

ಲಾಗಾಯ್ತಿಂದ ಜಂತರ್ ಮಂತರ್ ದಿಲ್ಲಿಯಲ್ಲಿ ಸಾರ್ವಜನಿಕ ಪ್ರತಿಭಟನೆಗಳಿಗೆ ಅನುಮತಿ ನೀಡಲಾಗಿರುವ ಒಂದು ನಿವೇಶನವಾಗಿದೆ ಹಾಗೂ ಸಾರ್ವಜನಿಕ ಸ್ಥಳವಾಗಿದೆ.

ಕಳೆದ ವಾರ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ‘‘ಈ ಸ್ಥಳವನ್ನು ಇನ್ನು ಮುಂದಕ್ಕೆ ಪ್ರತಿಭಟನೆಗಳಿಗಾಗಿ ಅಥವಾ ಸಾರ್ವಜನಿಕ ಸಭೆಗಳನ್ನು ನಡೆಸುವುದಕ್ಕಾಗಿ ಬಳಸುವಂತಿಲ್ಲ. ಈ ನಿವೇಶನದ ಸಮೀಪ ಸುತ್ತಮುತ್ತ ವಾಸಿಸುವವರು ಗದ್ದಲ ಮಾಲಿನ್ಯ ಮತ್ತು ನೈರ್ಮಲ್ಯ ಸಂಬಂಧಿ ಸಮಸ್ಯೆಗಳಿಂದ ಬಳಲಬೇಕಾಗಿಲ್ಲ. ಹೀಗೆ ಅವರು ಯಾಕೆ ಬಳಲಬೇಕು?’’ ಎಂದು ಅದು ಹೇಳಿತು. ಜಂತರ್‌ಮಂತರ್‌ನಲ್ಲಿ ಶಿಬಿರ ಹೂಡಿರುವ ಪ್ರತಿಭಟನಾಕಾರರು ರಾಮಲೀಲಾ ಮೈದಾನಕ್ಕೆ ಸ್ಥಳಾಂತರಿಸಬೇಕು ಎಂದು ಅದು ಆದೇಶಿಸಿತು. ರಾಮಲೀಲಾ ಮೈದಾನವು ಕೇಂದ್ರ ದಿಲ್ಲಿಯಲ್ಲಿರುವ ಮತ್ತು 5,000ಕ್ಕಿಂತ ಹೆಚ್ಚು ಮಂದಿ ಪ್ರತಿಭಟನಾಕಾರರು ಭಾಗವಹಿಸುವ ಪ್ರತಿಭಟನೆಗಳಿಗೆ ಅಧಿಕೃತ ಅನುಮತಿ ನೀಡಲಾಗಿರುವ ಒಂದು ಮೈದಾನ.

ನ್ಯಾಯ ಮಂಡಳಿಯ ಆಜ್ಞೆಯು ಸಾರ್ವಜನಿಕ ಸಭೆಗಳನ್ನು ಮತ್ತು ಪ್ರತಿಭಟನೆಗಳನ್ನು ಜನರಿಂದ ಇನ್ನಷ್ಟು ದೂರ ಕೊಂಡೊಯ್ಯಲಿದೆ. ಜಂತರ್‌ಮಂತರ್ ಭಾರತ ಸರಕಾರದ ಅಧಿಕಾರ ಸ್ಥಾನವಿರುವ ರೈಸಿನಾ ಹಿಲ್‌ನಿಂದ ಕೇವಲ ಮೂರು ಕಿ.ಮೀ. ದೂರದಲ್ಲಿದೆ. ಆದರೆ ರಾಮಲೀಲಾ ಮೈದಾನವು ರೈಸಿನಾ ಹಿಲ್‌ನಿಂದ ಆರು ಕಿ.ಮೀ. ದೂರದಲ್ಲಿದೆ.

ಒಂದು ಸಾರ್ವಜನಿಕ ಶಾಂತಿಯುತ ಪ್ರತಿಭಟನೆ ಎಂಬುವುದು ಕಾನೂನು ರಚಿಸುವವರು ನೀತಿ ನಿರೂಪಕರ ಮತ್ತು ಸಾರ್ವಜನಿಕರ ಗಮನವನ್ನು ಆಡಳಿತದ ಗಂಭೀರ ವಿಷಯಗಳ ಬಗ್ಗೆ ಸೆಳೆಯಲು ಮತ್ತು ಪರಿಹಾರ ಹಾಗೂ ಉತ್ತರದಾಯಿತ್ವಕ್ಕಾಗಿ ಆಗ್ರಹಿಸಲು ನಡೆಸುವ ಒಂದು ನಾಗರಿಕ ಚಟುವಟಿಕೆ. ಆದ್ದರಿಂದ ಪ್ರತಿಭಟನೆಗಳು ನಡೆಯುವ ಸ್ಥಳ ನಿವೇಶನ ತುಂಬ ಮುಖ್ಯವಾಗುತ್ತದೆ.

ಸರಕಾರದ ಸಚಿವರು ಮತ್ತು ಸರಕಾರಿ ಅಧಿಕಾರಿಗಳು ಕೆಲಸಕ್ಕೆ ಹೋಗುವ ಮಾರ್ಗದಲ್ಲೇ ಜಂತರ್‌ಮಂತರ್ ಇದೆ ಎಂಬ ಕಾರಣಕ್ಕಾಗಿ ಅಲ್ಲಿ ಪ್ರತಿಭಟನೆಗಳು ನಡೆಯಬೇಕೆಂದಲ್ಲ. ನಿಜವಾಗಿ ಇಂತಹ ಜನರಿಗೆ ಕೆಲಸಕ್ಕೆ ಹೋಗಲು ತೊಂದರೆಯಾಗಬಾರದೆಂಬ ಉದ್ದೇಶದಿಂದಲೇ ಅದನ್ನೊಂದು ಪ್ರತಿಭಟನಾ ಸ್ಥಳವೆಂದು ಗುರುತಿಸಿದ್ದು 1983ರಲ್ಲಿ ಭಾರತೀಯ ಕಿಸಾನ್ ಸಂಘದ ನಾಯಕ ಮಹೇಂದ್ರ ಸಿಂಗ್ ಟೀಕಾಯಿತ್. ಒಂದು ಭಾರೀ ದೊಡ್ಡ ರೈತರ ರ್ಯಾಲಿ ಸಂಘಟಿಸಿದ್ದಾಗ ಸಾವಿರಾರು ರೈತರು ಬೋಟ್ ಕ್ಲಬ್‌ನಲ್ಲಿ ಠಿಕಾಣಿ ಹೂಡಿದ್ದರು. ಇಂಡಿಯಾ ಗೇಟ್‌ಗೆ ತಾಗಿಕೊಂಡಿರುವ ಅಲ್ಲಿ ನಡೆದ ರ್ಯಾಲಿಯಿಂದ ಸರಕಾರದ ಮಂದಿಗೆ ತೊಂದರೆಯಾಗಿತ್ತು. ಆದರೆ ಟೀಕಾಯಿತ್‌ರ ಕ್ರಮ ಸರಕಾರದ ಗಮನ ಸೆಳೆಯದಿರಲಿಲ್ಲ. ರಾಜೀವ್ ಗಾಂಧಿ ಸರಕಾರ ರೈತರ ಬೇಡಿಕೆಗಳನ್ನು ಒಪ್ಪಿತು. ಆಮೇಲಷ್ಟೆ ರೈತರು ಹಾಕಿದ್ದ ‘ಮುತ್ತಿಗೆ’ ಕೊನೆಗೊಂಡಿತು.

ಈಗ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ 144ನೆ ಸೆಕ್ಷನ್‌ನ್ನು ರೈಸಿನಾಹಿಲ್ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳ ಹಾಗೂ ಪ್ರದೇಶಗಳ ಮೇಲೆ ಶಾಶ್ವತವಾಗಿ ಹೇರಲಾಗಿದೆ.

ಬೇಕಾಬಿಟ್ಟಿ ಕ್ರಮ

‘‘ತುರ್ತು ಉಪಟಳ ಪ್ರಕರಣಗಳಲ್ಲಿ ಅಥವಾ ಅಪಾಯ ಸಂಭವಿಸುವ ಸಾಧ್ಯತೆಯಿರುವ ಸಂದರ್ಭಗಳಲ್ಲಿ ಬಳಸಲು ಇರುವ ಒಂದು ಅಸ್ತ್ರ ಸೆಕ್ಷನ್ 144. ಅಂದರೆ ತಾತ್ಕಾಲಿಕವಾದ ಒಂದು ‘‘ತುರ್ತುಸ್ಥಿತಿಯಲ್ಲಿ ಮಾತ್ರ ಬಳಸಬೇಕಾದ’’ ಕಾನೂನಿನ ಅಸ್ತ್ರ ಇದು. ಅಲ್ಲದೇ ಈ ಸೆಕ್ಷನ್‌ನ ಯಾವುದೇ ಆಜ್ಞೆಯು ಎರಡು ತಿಂಗಳಿಗಿಂತ ಹೆಚ್ಚುಕಾಲ ಅಸ್ತಿತ್ವದಲ್ಲಿರುವಂತಿಲ್ಲ. ದಿಲ್ಲಿ ಪೊಲಿಸರು ಪ್ರತಿ ಎರಡು ತಿಂಗಳಿಗೊಮ್ಮೆ ಈ ಆಜ್ಞೆಯನ್ನು ಹೊರಡಿಸುವ ಮೂಲಕ ಕಾನೂನಿನಲ್ಲಿರುವ ‘ಎರಡು ತಿಂಗಳ’ ನಿಯಮವನ್ನು ಸುಲಭವಾಗಿ ಮುರಿದು ಸೆಕ್ಷನ್ 144 ಸದಾ ಜಾರಿಯಲ್ಲೇ ಇರುವಂತೆ ನೋಡಿಕೊಳ್ಳುತ್ತಾರೆ.

ಆದರೂ ಕೂಡ ಒಂದು ಅಪವಾದವೆಂಬಂತೆ 2012ರ ಡಿಸೆಂಬರ್ 22 ರಂದು ದಿಲ್ಲಿಯ ಒಬ್ಬಳು ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಪ್ರತಿಭಟಿಸಿ ಸಾವಿರಾರು ಮಂದಿ ಸೆಕ್ಷನ್ 144ರ ನಿಯಮವನ್ನು ಉಲ್ಲಂಘಿಸಿ ರೈಸಿನಾಹಿಲ್‌ನ ಬುಡಭಾಗದಲ್ಲಿ ಸಭೆ ಸೇರಿದರು. ಪರಿಣಾಮವಾಗಿ ಮರುದಿನ ಲೈಂಗಿಕ ಹಿಂಸೆಗೆ ಸಂಬಂಧಿಸಿದ ಕಾನೂನುಗಳಿಗೆ ತಿದ್ದುಪಡಿ ತಂದು ಕಾನೂನನ್ನು ಮತ್ತಷ್ಟು ಬಲಪಡಿಸಲು ನ್ಯಾಯಮೂರ್ತಿ ಜೆ.ಎಸ್ ವರ್ಮಾ ಸಮಿತಿಯನ್ನು ರಚಿಸಲಾಯಿತು.

ಮುಂಬೈಯಲ್ಲಿ ಪ್ರತಿಭಟನೆಗಳನ್ನು ನಡೆಸಲು ನಿಗದಿಪಡಿಸಲಾಗಿರುವ ಜಾಗ ಮಂತ್ರಾಲಯದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಆಝಾದ್ ಮೈದಾನ್. ‘‘ಇಲ್ಲಿ ಮತ ಪ್ರದರ್ಶನ ನಡೆಸಲು ಬಯಸುವವರು ಮೊದಲು ಪೊಲೀಸರಿಂದ ಅನುಮತಿ ಪಡೆಯಬೇಕು. ಆದರೆ ಅನುಮತಿ ಸಿಗುವುದು ಸುಲಭವಲ್ಲ’’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಸಂಧ್ಯಾಗೋಖಲೆ. ಆದರೂ ಇಲ್ಲಿ ಬೃಹತ್ ರ್ಯಾಲಿಗಳು ನಡೆದಿವೆ. 2015ರಲ್ಲಿ ವಿಚಾರವಾದಿ ಗೋವಿಂದ ಪನ್ಸಾರೆಯವರ ಹತ್ಯೆಯನ್ನು ಖಂಡಿಸಿ ಇಲ್ಲಿ ಒಂದು ಪ್ರತಿಭಟನಾ ರ್ಯಾಲಿ ನಡೆದಿತ್ತು. ಈ ವರ್ಷ ಆಗಸ್ಟ್‌ನಲ್ಲಿ ಮರಾಠಾ ಕ್ರಾಂತಿ ಮೋರ್ಚಾ ನಡೆಸಿದ ಒಂದು ರ್ಯಾಲಿಯಲ್ಲಿ 6 ಲಕ್ಷದಿಂದ 9 ಲಕ್ಷದಷ್ಟು ಪ್ರತಿಭಟನಾಕಾರರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಈ ಪ್ರಕರಣಗಳಲ್ಲಿ ರ್ಯಾಲಿ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಲ್ಲಿ ಕಾನೂನು ಮತ್ತು ವ್ಯವಸ್ಥೆಯ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇದ್ದುದರಿಂದ ಅವರು ಪ್ರಾಯಶಃ ಅನುಮತಿ ನಿರಾಕರಿಸಲಿಲ್ಲ.

ಸೂಚ್ಯ ಹಕ್ಕು
 ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು, ಪ್ರತಿಭಟಿಸುವ ಒಂದು ಹಕ್ಕನ್ನು ಮನ್ನಿಸುವುದಿಲ್ಲವಾದರೂ, ಈ ಹಕ್ಕು ನಾಗರಿಕ ಹಾಗೂ ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಸಮಾವೇಶದ 21ನೆಯ ಪರಿಚ್ಛೇದದಲ್ಲಿ ಮತ್ತು ರಾಜಕೀಯ ಕಲಾಪಗಳಲ್ಲಿ ಭಾಗವಹಿಸುವ ಹಕ್ಕಿಗೆ ಸಂಬಂಧಿಸಿದ ಹಕ್ಕು.

ಭಿನ್ನಮತದ ಅಭಿವ್ಯಕ್ತಿಗೆ ಸಾರ್ವಜನಿಕ ಸ್ಥಳಗಳು ಸಮಯ ಕಳೆದಂತೆ ಸಂಕೋಚಗೊಳ್ಳುತ್ತಿರುವುದು, ಅಲಭ್ಯವಾಗುತ್ತಿರುವುದು ಆತಂಕದ ವಿಷಯ. ಅವರು ಒಂದೆಡೆ ಸೇರುವುದನ್ನು, ಎಲ್ಲ ಪ್ರತಿಭಟನೆಗಳನ್ನು ಸರಕಾರಗಳು ಒಂದು ಉಪಟಳ ಅಥವಾ ರಾಷ್ಟ್ರೀಯ ಭದ್ರತೆಗೆ ಅಥವಾ ಸಾರ್ವಜನಿಕ ವ್ಯವಸ್ಥೆಗೆ ಬೆದರಿಕೆ ಎಂದು ತಿಳಿಯುವ ಹಾಗೆ ತೋರುತ್ತಿದೆ. ಕಳೆದ ವಾರ ಮುಂಬೈಯ ಮೆರೀನ್ ಡ್ರೈವ್‌ನಲ್ಲಿ ಗೌರಿ ಲಂಕೇಶ್ ಹತ್ಯೆಯ ವಿರುದ್ಧ ಪ್ರತಿಭಟಿಸಿ ವೌನ ಪ್ರತಿಭಟನೆ ನಡೆಸಿದ 17 ಮಂದಿಯನ್ನು ಪೊಲೀಸರು ಬಂಧಿಸಿದರು. ಚೆನ್ನೈಯಲ್ಲಿ ಕೂಡ 50 ಪ್ರತಿಭಟನಾಕಾರರು ಗೌರಿ ಹತ್ಯೆ ಪ್ರತಿಭಟಿಸಿ ಗಾಂಧಿಯ ಒಂದು ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೋಗಿ ಘೋಷಣೆಗಳನ್ನು ಕೂಗಿದಾಗ ಪೊಲೀಸರು ಅವರನ್ನು ಬಂಧಿಸಿದರು.

ಶಾಂತಿಯುತವಾಗಿ ಸಭೆ ಸೇರುವುದು ಒಂದು ಹಕ್ಕು. ಅದೊಂದು ಸವಲತ್ತಲ್ಲ. ಆದ್ದರಿಂದ ಸಾರ್ವಜನಿಕ ಸ್ಥಳಗಳನ್ನು ಮರಳಿ ಪಡೆದು ಅವುಗಳು ಪ್ರತಿಭಟನೆಗಳಿಗೆ ಲಭ್ಯವಾಗುವಂತೆ ಮಾಡುವುದು ಆವಶ್ಯಕವಾಗಿದೆ.

ಕೃಪೆ: scroll.in

Writer - ರಿನೀತಾ ನಾಯ್ಕ್

contributor

Editor - ರಿನೀತಾ ನಾಯ್ಕ್

contributor

Similar News