ಬರ್ತ್ ಡೇ ಬಾಯ್ ಕುಂಬ್ಳೆ: ಸ್ಪಿನ್ ಮಾಂತ್ರಿಕನ ಜೀವನದ 5 ಅವಿಸ್ಮರಣೀಯ ಕ್ಷಣಗಳು

Update: 2017-10-17 06:30 GMT

ಮುಂಬೈ, ಅ.17: ಟೀಮ್ ಇಂಡಿಯಾದ ಮಾಜಿ ಕಪ್ತಾನ ಹಾಗೂ ಮಾಜಿ ಕೋಚ್, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಇಂದು ತಮ್ಮ 47ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಗಳು ಹಾಗೂ ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಗಳನ್ನು ಪಡೆದಿರುವ ಅಪ್ರತಿಮ ಲೆಗ್ ಸ್ಪಿನ್ನರ್ ಆಗಿರುವ ಕುಂಬ್ಳೆ ಕ್ರಿಕೆಟ್ ಜೀವನದ ಐದು ಅವಿಸ್ಮರಣೀಯ ಘಟನೆಗಳನ್ನು ಇಲ್ಲಿ ಮೆಲುಕು ಹಾಕಲಾಗಿದೆ.

ಹತ್ತು ವಿಕೆಟ್ ಗಳ ಸರದಾರ

 ಫೆಬ್ರವರಿ 7, 1999ರಲ್ಲಿ ದಿಲ್ಲಿಯ ಫಿರೋಜ್ ಶಾ ಕೋಟ್ಲಾ ಅಂಗಣದಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಭಾರತಕ್ಕೆ 1-1 ಅಂತರದಲ್ಲಿ ಸರಣಿ ಮುಗಿಸಬೇಕಿದ್ದರೆ ಪಂದ್ಯ ಗೆಲ್ಲಲೇ ಬೇಕಿತ್ತು. ಪಾಕಿಸ್ತಾನಕ್ಕೆ ಈ ಪಂದ್ಯ ಗೆಲ್ಲಲು 420 ರನ್ನುಗಳ ಅಗತ್ಯವಿತ್ತು. ಅಂತಿಮ ದಿನದಲ್ಲಿ ಪಾಕಿಸ್ತಾನಕ್ಕೆ ಈ ಪಂದ್ಯ ಡ್ರಾ ಮಾಡುವ ಅವಕಾಶ ಕುಂಬ್ಳೆಯಿಂದ ತಪ್ಪಿ ಹೋಯಿತು. ಅವರು 74 ರನ್ನುಗಳಿಗೆ 10 ವಿಕೆಟುಗಳನ್ನೂ ಪಡೆದು ಭಾರತಕ್ಕೆ ಪಾಕಿಸ್ತಾನದ ವಿರುದ್ಧ 19 ವರ್ಷಗಳಲ್ಲಿ ಪ್ರಥಮ ಜಯ ತಂದು ಕೊಟ್ಟರು.


ಬ್ಯಾಂಡೇಜ್ ಹಾಕಿಯೇ ಅದ್ಭುತ ಪ್ರದರ್ಶನ

ಪ್ರಾಯಶಃ ಕುಂಬ್ಳೆ ಅವರ ಜೀವನದಲ್ಲಿನ ಅತ್ಯಂತ ಅವಿಸ್ಮರಣೀಯ ಪಂದ್ಯ ಇದಾಗಿರಬಹುದು. ಮೇ 2002ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಾಟ ಸೈಂಟ್ ಜಾನ್ಸ್ ಅಂಗಣದಲ್ಲಿ ನಡೆಯುತ್ತಿತ್ತು. ಪಂದ್ಯದ ಮೂರನೇ ದಿನದ ಆಟ ನಡೆದಾಗ ಕುಂಬ್ಳೆ ಅವರು ಬ್ಯಾಟಿಂಗ್ ಮಾಡುವಾಗ ಗಲ್ಲದ ಮೂಳೆ ಮುರಿತಕ್ಕೊಳಗಾಗಿದ್ದರಿಂದ ಬ್ಯಾಂಡೇಜ್ ಹಾಕಿಯೇ ಅಂಗಣಕ್ಕಿಳಿದಿದ್ದರು. ಬಳಿಕ 14 ಓವರ್ ಬೌಲ್ ಮಾಡಿದ್ದರಲ್ಲದೆ ಭಾರತಕ್ಕೆ ಅತ್ಯಮೂಲ್ಯವಾಗಿದ್ದ ಬ್ರಿಯಾನ್ ಲಾರಾ ಅವರ ವಿಕೆಟ್ ಅನ್ನೂ ಪಡೆದಿದ್ದರು.

ಸೂಪರ್ ಸಿಕ್ಸ್: ನವೆಂಬರ್ 27, 1993ರಂದು ಕುಂಬ್ಳೆ ಈಡನ್ ಗಾರ್ಡನ್ಸ್ ನಲ್ಲಿ ಹೀರೋ ಕಪ್ ಅಂತಿಮ ಹಣಾಹಣಿಯಲ್ಲಿ 12 ರನ್ನಿಗೆ 6 ವಿಕೆಟ್ ಪಡೆದು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಈ ದಾಖಲೆಯನ್ನು 2014ರಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬಿನ್ನಿ 4 ರನ್ನುಗಳಿಗೆ ಆರು ವಿಕೆಟ್ ಪಡೆಯುವ ಮೂಲಕ ಮುರಿದಿದ್ದರು.

ಚೊಚ್ಚಲ ಹಾಗೂ ಅಂತಿಮ ಶತಕ: ದಿ ಓವಲ್ ನಲ್ಲಿ 2007ರಲ್ಲಿ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕುಂಬ್ಳೆ ಅವರು ತಮ್ಮ ಚೊಚ್ಚಲ ಮತ್ತು ಅಂತಿಮ ಟೆಸ್ಟ್ ಶತಕ ಬಾರಿಸಿದ್ದರು. ಆಗ ಶ್ರೀಶಾಂತ್ ಜತೆ ಬ್ಯಾಟ್ ಮಾಡುತ್ತಿದ್ದ ಕುಂಬ್ಳೆ 97 ರನ್ ಗಳಿಸಿ ಕ್ರೀಸಿನಲ್ಲಿದ್ದರು. ಕೆವಿನ್ ಪೀಟರ್ಸನ್ ಅವರ ಯಾರ್ಕರ್ ಗೆ ಕುಂಬ್ಳೆ ಅರೆಕ್ಷಣ ಗಲಿಬಿಲಿಯಾದರೂ ಚೆಂಡು ವಿಕೆಟ್ ಕೀಪರ್ ಅನ್ನು ದಾಟಿ ಬೌಂಡರಿ ತಲುಪಿ ಅವರು ಶತಕ ಬಾರಿಸುವಂತಾಯಿತು.

ಲೀಡ್ಸ್ ಪ್ರದರ್ಶನ: 2002ರಲ್ಲಿ ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್ ಪಡೆದು ಕುಂಬ್ಳೆ ಭಾರತಕ್ಕೆ ಇನ್ನಿಂಗ್ಸ್ ಜಯ ಪಡೆದು ಸರಣಿ ಸಮಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News