ಮೋದಿ ಗುಜರಾತ್ ಸಿಎಂ ಆಗಿದ್ದಾಗ ಅವರ ವಿಮಾನ ಪ್ರಯಾಣ ವೆಚ್ಚ 16.50 ಕೋ.ರೂ. ಭರಿಸಿದವರ್ಯಾರು?: ಅಭಿಷೇಕ್ ಸಿಂಘ್ವಿ

Update: 2017-10-19 06:24 GMT

ಹೊಸದಿಲ್ಲಿ,ಅ.19 : ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2003 ಹಾಗೂ 2007ರ ನಡುವಿನ  ಅವಧಿಯಲ್ಲಿ  ಭಾರತದ ವಿವಿಧೆಡೆಗೆ ಹಾಗೂ ವಿದೇಶಗಳಿಗೆ  ಸುಮಾರು 100ಕ್ಕೂ ಹೆಚ್ಚು ಬಾರಿ ಚಾರ್ಟರ್ಡ್ ವಿಮಾನಗಳಲ್ಲಿ ಪ್ರಯಾಣಿಸಿದ್ದರ ಸುಮಾರು 16.50 ಕೋಟಿ ರೂ. ವೆಚ್ಚವನ್ನು ಯಾರು ಭರಿಸಿದ್ದಾರೆಂಬ ಪ್ರಶ್ನೆಯನ್ನು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಎತ್ತಿದ್ದಾರೆ.

"ಈ ಬಗ್ಗೆ ಮಾಹಿತಿಯು ನಮಗೆ ಹಾಗೂ ದೇಶಕ್ಕೆ ಗೊತ್ತಾಗಬೇಕು. 2007ರಲ್ಲಿಯೇ ಈ ಬಗ್ಗೆ  ಆರ್‍ಟಿಐ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದರೂ ಮಾಹಿತಿ ನೀಡಲಾಗಿಲ್ಲ ಎಂದು ಅವರು ತಿಳಿಸಿದರು. ಆರ್‍ಟಿಐದಿಂದ ದೊರೆತ ಮಾಹಿತಿಯಂತೆ ಮೋದಿ ಜುಲೈ 1, 2007ರಂದು ಸ್ವಿಜರ್ಲೆಂಡ್, ಜೂನ್ 16, 2007ರಂದು ದಕ್ಷಿಣ ಕೊರಿಯಾ, ಎಪ್ರಿಲ್ 15, 2007ರಂದು ಜಪಾನ್ ಹಾಗೂ ನವೆಂಬರ್ 1, 2006ರಂದು ಚೀನಾಗೆ ಕೆಲವೊಂದು ಖ್ಯಾತ ಕೈಗಾರಿಕೋದ್ಯಮಗಿಗಳು ಹಾಗೂ ಉದ್ಯಮಿಗಳೊಂದಿಗೆ  ಪ್ರಯಾಣಿಸಿದ್ದರು ಎಂದು ಸಿಂಘ್ವಿ ಹೇಳಿದ್ದಾರೆ.

ಶಸ್ತಾಸ್ತ್ರ ಮಾರಾಟಗಾರ ಸಂಜಯ್ ಭಂಡಾರಿಯಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಪಡೆದುಕೊಂಡಿದ್ದಾರೆಂದು ಹೇಳಲಾದ ಸಹಾಯದ ವಿಚಾರದಲ್ಲಿ  ವಾದ್ರಾರನ್ನು ಸಮರ್ಥಿಸಿದ ಸಿಂಘ್ವಿ ಕೆಲವು ನಿರ್ದಿಷ್ಟ  ಇಮೇಲುಗಳನ್ನು ಸೋರಿಕೆ ಮಾಡಿದ್ದು ಇವುಗಳು ವಾದ್ರಾ ವಿರುದ್ಧದ ಆರೋಪಗಳನ್ನು ಸಾಬೀತು ಪಡಿಸುವುದಿಲ್ಲ ಎಂದಿದ್ದಾರೆ. ಭಂಡಾರಿ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಜತೆಗಿರುವ ಚಿತ್ರವೊಂದನ್ನೂ ಈ ಸಂದರ್ಭ ಸಿಂಘ್ವಿ ಪ್ರಸ್ತುತ ಪಡಿಸಿದರು. ಜೂನ್ 2016ರಲ್ಲೇ ಭಂಡಾರಿ ಪಾಸ್ ಪೋರ್ಟನ್ನು ವಶಪಡಿಸಿಕೊಳ್ಳಲಾಗಿದ್ದರೂ  ಆತನಿಗೆ ಅದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ದೇಶ ಬಿಟ್ಟು ತೆರಳಲು ಹೇಗೆ ಅನುಮತಿಸಲಾಯಿತು ಎಂದು ಸಿಂಘ್ವಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News