ಸುಂಟಿಕೊಪ್ಪ: ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಧರಣಿ

Update: 2017-10-19 12:06 GMT

ಸುಂಟಿಕೊಪ್ಪ, ಅ.19: ಕಾವೇರಿ ತಾಲೂಕು ರಚನೆ ಒತ್ತಾಯಿಸಿ ಕಾವೇರಿ ತಾಲೂಕು ರಚನಾ ಹೋರಾಟ ಸ್ಥಾನೀಯ ಸಮಿತಿ ವತಿಯಿಂದ ಬುಧವಾರ ಕನ್ನಡ ವೃತ್ತದಲ್ಲಿ ಮಾನವ ಸರಪಳಿ, ರಸ್ತೆ ತಡೆ ಹಾಗೂ ಅಂಚೆ ಕಾರ್ಡು ಚಳವಳಿ ಮಾಡುವ ಮೂಲಕ ಧರಣಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ತಾಲೂಕು ಹೋರಾಟ ಕೇಂದ್ರೀಯ ಸಮಿತಿಯ ಸದಸ್ಯ ಡಿ.ನರಸಿಂಹ, ತಾಲೂಕು ಯಾವ ಕಾರಣಕ್ಕೆ ಬೇಕು ಎಂಬುದನ್ನು ನಾವೆಲ್ಲರೂ ಸೂಕ್ಷ್ಮವಾಗಿ ತಿಳಿದು ಕೊಳ್ಳಬೇಕು. ಸಾರ್ವಜನಿಕರ ಸಣ್ಣಪುಟ್ಟ ಕೆಲಸಗಳಿಗೂ ದೂರದ ಸೋಮವಾರಪೇಟೆಗೆ ತೆರಳಬೇಕಾಗಿದೆ. ಇದು ಜನಸಾಮಾನ್ಯರಿಗೆ ತ್ರಾಸದಾಯಕ, ವೆಚ್ಚದಾಯಕವೂ ಆಗಿದೆ. ಎಲ್ಲ ಸೌಲಭ್ಯಗಳನ್ನು ಹೊಂದಿರುವ ಕುಶಾಲನಗರ ತಾಲೂಕು ಆಗಲೇಬೇಕು ಎನ್ನುವ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡಲಾಗುತ್ತಿದೆ ಎಂದರು.

ಕೇಂದ್ರೀಯ ಸಮಿತಿಯ ಸದಸ್ಯ ಕೆ ಉಸ್ಮಾನ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರು ಕುಶಾಲನಗರವನ್ನು ತಾಲೂಕು ಮಾಡಬೇಕೆಂಬ ಕನಸು ಹೊತ್ತುಕೊಂಡಿದ್ದವರು. ಆದರೆ ಅವರಿಗೆ ಯಾವುದೇ ಬೆಂಬಲ ಇಲ್ಲದಿದ್ದರಿಂದ ಈ ಹೋರಾಟದಲ್ಲಿ ಹಿನ್ನಡೆ ಉಂಟಾಗಿತ್ತು. ಆದರೆ ಅವರ ಕನಸನ್ನು ನನಸಾಗಿಸಲು ಈಗಾಗಲೇ ಎಲ್ಲ ರೀತಿಯ ಹೋರಾಟಕ್ಕೂ ನಾವೂ ಸಿದ್ಧರಾಗಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರ ಘೋಷಣೆ ಮಾಡಲಿರುವ ಸಂದರ್ಭ ಕುಶಾಲನಗರವನ್ನು ಘೋಷಣೆ ಮಾಡಬೇಕು. ಇಲ್ಲದಿದ್ದರೆ ಬೆಂಗಳೂರಿಗೆ ತೆರಳಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕು ಹೋರಾಟ ಕೇಂದ್ರೀಯ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಈಗಾಗಲೇ ತಾಲೂಕು ವಿಚಾರವಾಗಿ ಸಮನ್ವಯತೆ ಸೃಷ್ಟಿಯಾಗಿದೆ. ಈ ವ್ಯಾಪ್ತಿಯ ವಿವಿಧ ಸಂಘಟನೆಗಳು, ಸರ್ವ ಜನಾಂಗ, ಸರ್ವ ಧರ್ಮಿಯರು, ಜನಪ್ರತಿನಿಧಿಗಳು, ಸರ್ವ ಪ್ರಾಂತ್ಯ, ಮನೆ ಮನೆಗಳ ಜನ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಕುಶಾಲನಗರ ವ್ಯಾಪ್ತಿಯಲ್ಲಿ ಸುಮಾರು 77 ಸಾವಿರದಷ್ಟು ಜನಸಂಖ್ಯೆಯಿದ್ದು, ಗಡಿ ಭಾಗವನ್ನು ಗುರುತಿಸಲಾಗಿದೆ ಎಂದರು.

ಕೂಡಲೇ ಸರ್ಕಾರ ಗಮನಹರಿಸಿ ಕುಶಾಲನಗರವನ್ನು ಕಾವೇರಿ ತಾಲೂಕು ಎಂದು ಘೋಷಣೆ ಮಾಡಬೇಕು ಇಲ್ಲದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಮತ್ತು ಈ ಹೋರಾಟ ಜನಾಂದೋಲನ ಹೋರಾಟವಾಗಿ ಪರಿವರ್ತನೆಗೊಳ್ಳಲಿದೆ ಎಂದರು.

ಧರಣಿಯಲ್ಲಿ  ಕುಶಾಲನಗರ ಜಿ.ಪಂ.ಸದಸ್ಯ ಪಿ.ಎಂ.ಲತೀಫ್, ಸಮಿತಿಯ ಗೌರವಾಧ್ಯಕ್ಷ  ಯಂಕನ ಎಂ.ಕರುಂಬಯ್ಯ ಮಾತನಾಡಿದರು.ತಾಲೂಕು ರಚನಾ ಸಮಿತಿಯ ಸುಂಟಿಕೊಪ್ಪ ಘಟಕದ ಅಧ್ಯಕ್ಷ ಪಿ.ಎಫ್. ಸಬಾಸ್ಟಿನ್, ಕಾರ್ಯದರ್ಶಿ ಪಿ.ಆರ್. ಸುನೀಲ್ ಕುಮಾರ್, ತಾ.ಪಂ ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರಾದ ಕೆ.ಇ.ಕರೀಂ, ಬಿ.ಎಂ.ಸುರೇಶ್, ರಝಾಕ್, ನಾಗರತ್ನ, ಚಂದ್ರ, ಕರವೇ ಅಧ್ಯಕ್ಷ ನಾಗೇಶ್ ಪೂಜಾರಿ, ಗ್ರಾ.ಪಂ ಮಾಜಿ ಅಧ್ಯಕ್ಷೆ ಬಿ.ಐ.ಭವಾನಿ, ತಾಲ್ಲೂಕು ಹೋರಾಟ ಸಮಿತಿಯ ಅಣ್ಣಾ ಶೇರಿಪ್, ಸುರೇಶ್ ಗೋಪಿ, ಸ್ಪೂರ್ತಿ ಶೇರಿಪ್, ಅಶೋಕ್ ಶೇಟ್, ಸೌಕತ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News