ಜೀವ ಬೆದರಿಕೆ ಒಡ್ಡಿ ಹಣ, ಚಿನ್ನ ವಸೂಲಿ ಪ್ರಕರಣ: ಮೂವರ ಬಂಧನ

Update: 2017-10-19 12:31 GMT

ಕೊಳ್ಳೇಗಾಲ, ಅ.19: ಸ್ನೇಹಿತನಿಗೆ ಜೀವ ಬೆದರಿಕೆ ಹಾಕಿ ಹಣ, ಚಿನ್ನ ಹಾಗೂ ಮೊಬೈಲ್‍ನ್ನು ವಸೂಲಿ ಮಾಡುತ್ತಿದ್ದ ಪ್ರಕರಣ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವ ಘಟನೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದಿದೆ.

ಪಟ್ಟಣದ ದಕ್ಷಿಣ ಬಡಾವಣೆಯ ರೀತೇಶ್ ದತ್ತ ಹಣ ಕಳೆದುಕೊಂಡ ವಿದ್ಯಾರ್ಥಿಯಾಗಿದ್ದು, ರುಮಾನ್, ಮನೋಜ್ ಹಾಗೂ ಅರುಣ್ ಬಂಧಿತ ಆರೋಪಿಗಳು. ಇದರಲ್ಲಿ ಮತ್ತೊಬ್ಬ ಆರೋಪಿ ಹರೀಶ್‍ ತಲೆಮೆರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ತನ್ನ ಕಾಲೇಜಿನಲ್ಲಿ ಓದುತ್ತಿದ್ದ ಕೆಲ ಸ್ನೇಹಿತರು ತನ್ನನ್ನು ಬೇರೆ ಹುಡುಗಿಯ ಜೊತೆ ಸಂಬಂಧವಿರುವಂತೆ ಸೃಷ್ಟಿ ಮಾಡಿ ಫೋಟೊವನ್ನು ಫೇಸ್‍ ಬುಕ್ ಮತ್ತು ವಾಟ್ಸ್ ಆ್ಯಪ್‍ಗೆ  ಅಪ್ಲೋಡ್ ಮಾಡುವುದಾಗಿ ಕಳೆದ ಆರು ತಿಂಗಳಿಂದ ಬೆದರಿಕೆ ಹಾಕಿ ಸುಮಾರು 66 ಸಾವಿರ ರೂ. ಹಣ ಹಾಗೂ 35 ಗ್ರಾಂ ಚಿನ್ನದ ನೆಕ್ಲಸ್, 8 ಗ್ರಾಂ ಚಿನ್ನದ ಒಂದು ಓಲೆ ಹಾಗೂ ಮೊಬೈಲನ್ನು ಪಡೆದು ಜೀವ ಬೆದರಿಕೆ ನೀಡುತ್ತಿದ್ದಾರೆಂದು ರೀತೇಶ್‍ ದೂರು ನೀಡಿದ್ದ. ಈ ಹಿನ್ನಲೆ ಆರೋಪಿಗಳನ್ನು ಬಂಧಿಸಿ ಪೊಲೀಸ್‍ರು ಏಳೂವರೆ ಸಾವಿರ ರೂ. ಹಣ, ಒಂದು ನೆಕ್ಲೆಸ್ ಹಾಗೂ ಮೋಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯ ಬಂಧನಕ್ಕೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News