ಆಧಾರ್ ಇಲ್ಲದ್ದಕ್ಕೆ ಆಹಾರ ಪಡಿತರ ನಿರಾಕರಣೆ : ಮೂವರು ದಲಿತ ಸಹೋದರರು ಹಸಿವಿಗೆ ಬಲಿ

Update: 2017-10-20 06:15 GMT

ಬೆಂಗಳೂರು,ಅ.19: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ಗ್ರಾಮವೊಂದರಲ್ಲಿ ಆಧಾರ್‌ಕಾರ್ಡ್ ಹೊಂದಿಲ್ಲ ವೆಂಬ ಕಾರಣಕ್ಕಾಗಿ ಆರು ತಿಂಗಳುಗಳಿಂದ ಪಡಿತರ ನಿರಾಕರಿಸಲ್ಪಟ್ಟ ಮೂವರು ದಲಿತ ಸಹೋದರರು ಕಳೆದ ಜುಲೈನಲ್ಲಿ ಹಸಿವಿನಿಂದ ಮೃತಪಟ್ಟಿದ್ದಾರೆಂಬ ನಾಗರಿಕ ಹಕ್ಕುಗಳ ಗುಂಪೊಂದರ ಸತ್ಯಶೋಧನಾ ವರದಿ ಆಪಾದಿಸಿದೆ.

ನಾಗರಿಕ ಹಕ್ಕುಗಳ ಜನತಾ ಒಕ್ಕೂಟ (ಪಿಯುಸಿಎಲ್) ದ ಕಾರ್ಯಕರ್ತರು ಅಕ್ಟೋಬರ್ 13ರಂದು ರಾಜ್ಯ ಸರಕಾರಕ್ಕೆ ಸಲ್ಲಿಸಿದ ವರದಿಯೊಂದರಲ್ಲಿ ಈ ಆಘಾತಕಾರಿ ಘಟನೆಯನ್ನು ಗಮನಕ್ಕೆ ತಂದಿದ್ದಾರೆ. ಜಾರ್ಖಂಡ್ ರಾಜ್ಯದಲ್ಲಿ ಆಧಾರ್ ಜೊತೆ ರೇಶನ್‌ಕಾರ್ಡ್ ಲಿಂಕ್ ಆಗಿಲ್ಲವೆಂದು ಕಾರಣ ನೀಡಿ, ಬಡಕುಟುಂಬವೊಂದಕ್ಕೆ ಪಡಿತರ ಆಹಾರ ನಿರಾಕರಿಸಿದ್ದರಿಂದ, ಆ ಕುಟುಂಬದ 11 ವರ್ಷದ ಬಡಬಾಲಕಿಯೊಬ್ಬಳು ಹಸಿವಿನಿಂದ ಮೃತಪಟ್ಟ ಘಟನೆ ವರದಿಯಾದ ಮೂರು ದಿನಗಳ ಮೊದಲೇ ಪಿಯುಸಿಎಲ್ ರಾಜ್ಯ ಸರಕಾರಕ್ಕೆ ಈ ವರದಿಯನ್ನು ಸಲ್ಲಿಸಿದೆ.

ಗೋಕರ್ಣ ಸಮೀಪದ ಬೆಳೆಹಿತ್ತಲ ಗ್ರಾಮದಲ್ಲಿ ದಲಿತ ಸಹೋದರರಾದ ನಾರಾಯಣ, ವೆಂಕಟರಮಣ ಹಾಗೂ ಸುಬ್ಬುಮಾರು ಮುಖ್ರಿ ಜುಲೈ 2ರಿಂದ ಜುಲೈ 13ರ ನಡುವೆ ಸಾವನ್ನಪ್ಪಿದ್ದರು.

ಬಿಪಿಎಲ್‌ನಡಿ ಮಾಸಿಕವಾಗಿ ಪಡಿತರ ಆಹಾರವನ್ನು ಪಡೆಯಲು ಅರ್ಹರಾಗಿದ್ದ ಮಾರು ಮುಕ್ರಿಯ ಕುಟುಂಬಕ್ಕೆ 2016ರ ಡಿಸೆಂಬರ್‌ನಿಂದ ಪಡಿತರವನ್ನು ನೀಡಲಾಗುತ್ತಿರಲಿಲ್ಲ.ಅವರು ಆಧಾರ್ ಕಾರ್ಡ್ ಹೊಂದಿಲ್ಲವೆಂಬ ಕಾರಣಕ್ಕಾಗಿ ಅವರಿಗೆ ಪಡಿತರವನ್ನು ನಿರಾಕರಿಸಲಾಗಿತ್ತೆಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಮೂವರು ಹಸಿವಿನಿಂದ ಸಾವನ್ನಪ್ಪಿರುವುದಾಗಿ ಅವರು ದೂರಿದ್ದಾರೆ. ಆದಾಗ್ಯೂ, ಜಿಲ್ಲಾಡಳಿತವು ಇದನ್ನು ನಿರಾಕರಿಸಿದೆ.ವಿಪರೀತವಾದ ಮದ್ಯ ಸೇವನೆಯಿಂದ ಅವರು ಸಾವನ್ನಪ್ಪಿರುವುದಾಗಿ ಅದು ಹೇಳಿಕೊಂಡಿದೆ.

ಮೃತಸಹೋದರ ಮರಣೋತ್ತರ ಪರೀಕ್ಷೆಯನ್ನು ನಡೆಸದಿರುವುದರಿಂದ, ಅವರ ಸಾವಿಗೆ ನಿಖರವಾದ ಕಾರಣವಿನ್ನೂ ತಿಳಿದುಬಂದಿಲ್ಲ. ಆದಾಗ್ಯೂ ಸತ್ಯಶೋಧನಾ ತನಿಖೆಯನ್ನು ನಡೆಸಿದ ಪಿಯುಸಿಎಲ್ ಕಾರ್ಯಕರ್ತರು, ಈ ಸಹೋದರರು ಜುಲೈನಲ್ಲಿ ಸಾವನ್ನಪ್ಪಿದ ಸಂದರ್ಭದಲ್ಲಿ ಅವರ ಮನೆಯಲ್ಲಿ ಆಹಾರಧಾನ್ಯಗಳಿಲ್ಲದಿರುವುದನ್ನು ದೃಢಪಡಿಸಿದ್ದಾರೆ. ಆಧಾರ್ ಹೊಂದಿಲ್ಲವೆಂಬ ಕಾರಣಕ್ಕಾಗಿ ಈ ಕುಟುಂಬದ ರೇಶನ್‌ಕಾರ್ಡನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ತೆಗೆದುಹಾಕಿರುವುದನ್ನು ಸ್ಥಳೀಯ ಪಡಿತರ ಅಂಗಡಿ ಮಾಲಕ ಹಾಗೂ ಬ್ಲಾಕ್ ಮಟ್ಟದ ಆಹಾರ ನಿರೀಕ್ಷಕ ಇಬ್ಬರೂ, ಒಪ್ಪಿಕೊಂಡಿದ್ದಾರೆಂದು ಸತ್ಯಶೋಧನಾ ವರದಿ ತಿಳಿಸಿದೆ.

2013ರಿಂದೀಚೆಗೆ ಸುಪ್ರೀಂಕೋರ್ಟ್ ಪುನರಾವರ್ತಿಯಾಗಿ ನೀಡಿದ ಆದೇಶಗಳಲ್ಲಿ ಸರಕಾರದ ಯಾವುದೇ ಕಲ್ಯಾಣ ಕಾರ್ಯಕ್ರಮ ಸೌಲಭ್ಯಗಳನ್ನು ಪಡೆಯಲು ಅದರಲ್ಲೂ ನಿರ್ದಿಷ್ಟವಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕಡಿಮೆ ದರಗಳಲ್ಲಿ ಆಹಾರ ಧಾನ್ಯಗಳ ಸೌಲಭ್ಯಗಳನ್ನು ಪಡೆಯಲು ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಬಾರದೆಂದು ಸ್ಪಷ್ಟವಾಗಿ ತಿಳಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿತ ದೇಶದ ಮೂರನೆ ಎರಡರಷ್ಟಿರುವ ಬಿಪಿಎಲ್ ಪಡಿತರದಾರರಿಗೆ ತಿಂಗಳಿಗೆ ಕನಿಷ್ಠ ಐದು ಕಿಲೋ ಆಹಾರಧಾನ್ಯಗಳನ್ನು ಸಬ್ಸಿಡಿದರದಲ್ಲಿ ಒದಗಿಸಲಾಗುತ್ತಿದೆ.

ಮೃತರ ಒಟ್ಟು ವಾರ್ಷಿಕ ಆದಾಯ 11 ಸಾವಿರ ರೂ.: ಮೃತಸಹೋದರರಾದ ನಾರಾಯಣ, ವೆಂಕಟರಮಣ ಹಾಗೂ ಸುಬ್ಬುಮಾರು ಮುಖ್ರಿ ಗೋಕರ್ಣದ ಬೆಳೆಹಿತ್ತಲ ಗ್ರಾಮದ ನಿವಾಸಿಗಳು. ದಲಿತ ಸಮುದಾಯಕ್ಕೆ ಸೇರಿದ ಇವರು ಕೃಷಿ ಹಾಗೂ ಮೀನುಗಾರಿಕೆಯ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. 85 ವರ್ಷ ವಯಸ್ಸಿನ ನಾಗಮ್ಮ ಮಾರು ಮುಖ್ರಿ ಜೊತೆ ವಾಸವಾಗಿದ್ದ ಈ ಸಹೋದರರು ತಮ್ಮ ಹಳ್ಳಿಯ ಆಸುಪಾಸಿನಲ್ಲಿ ಸೀಮಿತವಾಗಿ ದೊರೆಯುತ್ತಿದ್ದ ಕೂಲಿಕೆಲಸಗಳನ್ನು ಮಾಡಿ ಜೀವನಸಾಗಿಸುತ್ತಿದ್ದರು. ವರ್ಷಕ್ಕೆ ಈ ಮೂವರು ಸಹೋದರರ ಒಟ್ಟು ಆದಾಯ ಸುಮಾರು 11 ಸಾವಿರ ರೂ. ಆಗಿತ್ತೆಂದು ಪಿಯುಸಿಎಲ್ ಕಾರ್ಯಕರ್ತರು ಹೇಳಿದ್ದಾರೆ.

ಸತ್ಯಶೋಧನಾ ಸಮಿತಿಯ ವರದಿಯ ಪ್ರಕಾರ ಈ ಕುಟುಂಬವು ಎರಡು ಪಡಿತರ ಕಾರ್ಡ್‌ಗಳನ್ನು ಹೊಂದಿತ್ತು. ಒಂದು ಅವರ ತಾಯಿ ನಾಗಮ್ಮನ ಹೆಸರಿನಲ್ಲಿ, ಇನ್ನೊಂದು ಆಕೆಯ ನಾಲ್ಕನೆಯ ಪುತ್ರನ ಹೆಸರಿನಲ್ಲಿತ್ತು. ಆತ ತನ್ನ ಪತ್ನಿ, ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದ. ನಾಗಮ್ಮ ಹಾಗೂ ಆಕೆಯ ಮೂವರು ಮಕ್ಕಳಿಗೆ ಡಿಸೆಂಬರ್ 2016ರವರೆಗೆ ಪಡಿತರ ಮೂಲಕ ಅಕ್ಕಿ, ಗೋಧಿ ಹಾಗೂ ಸಕ್ಕರೆ ದೊರೆಯುತ್ತಿತ್ತು. ಆನಂತರ ಅವರಿಗೆ ಆಧಾರ್ ಇಲ್ಲದಿದ್ದುಕ್ಕಾಗಿ ಅಧಿಕೃತವಾಗಿ ಯಾವುದೇ ಪಡಿತರ ದೊರೆತಿಲಿಲ್ಲ. ಮಾರ್ಚ್‌ನಲ್ಲಿ ಮಾತ್ರ ರೇಶನ್ ಅಂಗಡಿ ಮಾಲಕ ಸ್ವ ಇಚ್ಛೆಯಿಂದ ಸ್ವಲ್ಪ ಅಕ್ಕಿಯನ್ನು ಉಚಿತವಾಗಿ ನೀಡಿದ್ದ.

ಪಡಿತರ ರದ್ದುಗೊಂಡ ಬಳಿಕ ಹಸಿವು ಅನುಭವಿಸಿದೆವು

ರೇಶನ್ ಕಾರ್ಡ್ ಜೊತೆ ಆಧಾರ್‌ನ್ನು ಲಿಂಕ್ ಮಾಡಬೇಕೆಂದು ಸ್ಥಳೀಯಾಡಳಿತದ ಅಧಿಕಾರಿಗಳು ಆಗ್ರಹಿಸಿದ ಬಳಿಕ ನಾವು ಹಸಿವನ್ನು ಎದುರಿಸಬೇಕಾಯಿತು. ಮೃತರ ತಾಯಿ ನಾಗಮ್ಮ ಹೇಳಿರುವುದಾಗಿ ಪಿಯುಸಿಎಲ್ ಸತ್ಯಶೋಧನಾ ಸಮಿತಿಯ ಸದಸ್ಯ ನರಸಿಂಹ ಟಿವಿ ಹೇಳಿದ್ದಾರೆ.

 ವಿಪರೀತ ಮದ್ಯಪಾನದ ಚಟವೇ ಮೂವರು ದಲಿತ ಸಹೋದರರ ಸಾವಿಗೆ ಕಾರಣವೆಂದು ಜಿಲ್ಲಾಡಳಿತ ಹೇಳಿದೆ. ಆದರೆ ಈ ಕುಟುಂಬಕ್ಕೆ ಕಳೆದ ಆರು ತಿಂಗಳುಗಳಿಂದ ಪಡಿತರ ಆಹಾರ ದೊರೆಯುತ್ತಿರಲಿಲ್ಲವೆಂಬುದನ್ನು ಅದು ಒಪ್ಪಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News