ಮಹಿಳೆಯರು ಸ್ವಯಂ ಉದ್ಯೋಗ ಮಾಡಿ ಕೌಶಲ್ಯ ವೃದ್ಧಿಸಿಕೊಳ್ಳಬೇಕು: ಡೀನಾ ರೋಡ್ರಿಗಸ್

Update: 2017-10-20 11:27 GMT

ಬಣಕಲ್, ಅ.20: ಸರ್ಕಾರಿ ನೌಕರಿಯನ್ನು ಅರಸಿ ಅನೇಕರು ಉದ್ಯೋಗಗಳಿಗೆ ಹವಣಿಸುತ್ತಾ ಇರುತ್ತಾರೆ. ಸರ್ಕಾರಿ ಕೆಲಸ ಕೆಲವರಿಗೆ ಸಿಗಬಹುದು. ಆದರೆ ಉದ್ಯೋಗ ಸಿಗಲಿಲ್ಲ ಎಂದು ಮಹಿಳೆಯರು ಧೃತಿಗೆಡಬಾರದು ಎಂದು ಛಲಗಾತಿ ವಿಕಲಚೇತನೆ ಡೀನಾ ರೋಡ್ರಿಗಸ್ ಹೇಳಿದ್ದಾರೆ.

ಬಣಕಲ್ ಪಟ್ಟಣದ ವಿಮುಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ಸ್ವಂತ ಉದ್ಯೋಗದತ್ತ ಮುಖ ಮಾಡಬೇಕು. ಛಲ ಇದ್ದರೆ ಎಂತಹ ಕಾರ್ಯಗಳು ಯಶಸ್ಸು ಕಾಣುತ್ತವೆ. ಸ್ವಂತ ಉದ್ಯೋಗ ಮಾಡಿದ ಕೂಡಲೇ ನಾವು ಅಭಿವೃದ್ಧಿಯ ಪಥದಲ್ಲಿ ಸಾಗುವುದಿಲ್ಲ. ನಾನು ಉದ್ಯೋಗಕ್ಕಾಗಿ ಕಾದು ವಿಕಲಚೇತನೆಯಾದರೂ ಸ್ವಾವಲಂಬಿ ಬದುಕು ಸಾಗಿಸಿ ಇಂದು ಸ್ವಂತ ಉದ್ಯೋಗ ಮಾಡುತ್ತಿದ್ದೇನೆ ಎಂದರು.

ವಿಮುಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ನಿರ್ದೇಶಕ ರೆ.ಪಾ.ವಿನ್ಸೆಂಟ್ ಮಾತನಾಡಿ, ವಿಕಲಚೇತನೇ ಆದರೂ ಛಲವಂತಿಕೆ ನಮ್ಮ ಬದುಕನ್ನೆ ಬದಲಾಯಿಸುತ್ತದೆ. ಅದಕ್ಕೆ ಉದಾಹರಣೆಯೆಂದರೆ ಡೀನಾ. ಅಂಗವಿಕಲೆಯಾದರೂ ಧೃತಿಗೆಡದೆ ತಮ್ಮ ಬದುಕಿನಲ್ಲಿ ಛಲದ ಹಾದಿ ಹಿಡಿದು ಸ್ವಂತ ಉದ್ಯೋಗಕ್ಕೆ ಕೈ ಹಾಕಿದ್ದಾರೆ ಎಂದು ಸ್ಮರಿಸಿದರು.

ವಿಮುಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ್ಯೆ ಬೀನಾ ಮಾತನಾಡಿ, ಸಂಘ, ಸಂಸ್ಥೆಗಳಲ್ಲಿ ಸ್ವಂತ ಉದ್ಯೋಗಗಳಿಗೆ ಗುಡಿ ಕೈಗಾರಿಕೆಗಳಿಗೆ ನೆರವು ದೊರೆಯುತ್ತದೆ. ತರಬೇತಿಗಳಲ್ಲಿ ಭಾಗವಹಿಸಿ ಕೌಶಲ್ಯವನ್ನು ವೃದ್ಧಿಗೊಳಿಸಲು ಮಹಿಳೆಯರು ಪ್ರಯತ್ನಿಸಬೇಕು. ಉದ್ಯೋಗ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನಾವು ಉದ್ಯೋಗದ ಬೆನ್ನತ್ತಿ ಹೋಗಬೇಕು. ಆಗ ಮಾತ್ರ ಯಾವುದೇ ಸ್ವಂತ ಉದ್ಯೋಗ ನಮಗೆ ಒಲಿಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯಧರ್ಶಿ ಅನ್ನಪೂರ್ಣ, ನಿಡುವಾಳೆ ಘಟಕದ ರಾಜಮ್ಮ, ಹಾಗೂ ಬಣಕಲ್, ಮತ್ತಿಕಟ್ಟೆ, ಬಾನಹಳ್ಳಿ, ನಿಡುವಾಳೆ, ಸಬ್ಲಿ, ಫಲ್ಗುಣಿ, ಬಿ.ಹೊಸಹಳ್ಳಿ ವಿಮುಕ್ತಿ ಘಟಕದ ಸದಸ್ಯರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News