ಗುಜರಾತ್‌ನಲ್ಲಿ ಬಿಜೆಪಿ ಸೇರಲು 1 ಕೋಟಿ ರೂ. ಆಫರ್

Update: 2017-10-23 06:01 GMT

 ಹೊಸದಿಲ್ಲಿ, ಅ.23: ಬಿಜೆಪಿ ಪಕ್ಷ ಸೇರಲು ತನಗೆ 1 ಕೋ.ರೂ.ಕೊಡುಗೆ ನೀಡಲಾಗಿದೆ ಎಂದು ಗುಜರಾತ್‌ನ ಪಾಟಿದಾರ್‌ನ ಹಿರಿಯ ಮುಖಂಡ ನರೇಂದ್ರ ಪಟೇಲ್ ಸಾಕ್ಷಿ ಸಮೇತ ಗಂಭೀರ ಆರೋಪ ಮಾಡಿದ್ದಾರೆ.

ಗುಜರಾತ್‌ನಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಭಾರೀ ಹೋರಾಟ ಸಂಘಟಿಸಿರುವ ಹಾರ್ದಿಕ್ ಪಟೇಲ್‌ರ ಸಹವರ್ತಿ ವರುಣ್ ಪಟೇಲ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಕೆಲವೇ ಗಂಟೆಗಳ ಬಳಿಕ ರವಿವಾರ ತಡರಾತ್ರಿ ನಡೆದ ಅತ್ಯಂತ ನಾಟಕೀಯ ಬೆಳವಣಿಗೆೆಯಲ್ಲಿ ನರೇಂದ್ರ ಪಟೇಲ್ ಗುಜರಾತ್ ಬಿಜೆಪಿಯ ಭ್ರಷ್ಟಾಚಾರ ಮುಖವನ್ನು ಬಹಿರಂಗಪಡಿಸಿದ್ದಾರೆ.

 ಅಹ್ಮದಾಬಾದ್‌ನಲ್ಲಿ ತಡರಾತ್ರಿ ಪತ್ರಿಕಾಗೋಷ್ಠಿ ನಡೆಸಿದ ನರೇಂದ್ರ ಪಟೇಲ್ 500 ರೂ. ಮುಖಬೆಲೆಯ 10 ಲಕ್ಷ ರೂ. ನೋಟುಗಳ ಬಂಡಲ್‌ಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು. "ಇದು ತಾನು ಬಿಜೆಪಿಯಿಂದ ಸ್ವೀಕರಿಸಿರುವ ಮುಂಗಡ ಮೊತ್ತವಾಗಿದೆ. ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿರುವ ವರುಣ್ ಪಟೇಲ್ ತನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷ ಜೀತುಬಾಯ್ ವಘಾನಿ ಹಾಗೂ ಇತರ ಸಚಿವರ ಬಳಿ ಕರೆದುಕೊಂಡು ಹೋಗಿದ್ದರು. ಅಲ್ಲಿ ನನಗೆ ಬಿಜೆಪಿ ಸೇರ್ಪಡೆಗೆ 1 ಕೋ.ರೂ. ಕೊಡುಗೆ ನೀಡಲಾಗಿದ್ದು, ಟೋಕನ್ ಮೊತ್ತ 10 ಲಕ್ಷ ರೂ. ನೀಡಲಾಗಿದೆ. ಉಳಿದ 90 ಲಕ್ಷ ರೂ. ನಾಳೆ ಪಕ್ಷದ ಕಾರ್ಯಕ್ರಮದ ಬಳಿಕ ನೀಡುವುದಾಗಿ ಭರವಸೆ ನೀಡಲಾಗಿತ್ತು'' ಎಂದು ಪಟೇಲ್ ಬಹಿರಂಗಪಡಿಸಿದ್ದಾರೆ.

 ‘‘ನನಗೆ ಈ ಹಣದ ಅಗತ್ಯವಿಲ್ಲ. ನಾನು ಪಾಟಿದಾರ್ ಕಲ್ಯಾಣಕ್ಕಾಗಿ ನಡೆಯುವ ಹೋರಾಟದಲ್ಲಿ ಭಾಗಿಯಾಗುವೆ. ನಾನು ಇಲ್ಲಿ ರಾಜಕೀಯ ಲಾಭಕ್ಕಾಗಿ ಬಂದಿಲ್ಲ... ಈ ಹಣವನ್ನು ಬೆವರುಸುರಿಸಿ ಗಳಿಸಿದ್ದಲ್ಲ. ಇದು ಭ್ರಷ್ಟಾಚಾರದ ಹಣ’’ ಎಂದು ಪಟೇಲ್ ಹೇಳಿದ್ದಾರೆ.

ರವಿವಾರ ಬೆಳಗ್ಗೆ ನರೇಂದ್ರ ಪಟೇಲ್ ಮಾಧ್ಯಮಗಳ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಅವರನ್ನು ಕೇಸರಿ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಲಾಗಿತ್ತು.

ಇದೇ ವೇಳೆ, ಬಿಜೆಪಿಗೆ ಸೇರ್ಪಡೆಯಾಗಿದ್ದ ಇನ್ನೋರ್ವ ಪಾಟಿದಾರ್ ಮುಖಂಡ ನಿಖಿಲ್ ಸವಾನಿ ಅವರು ನರೇಂದ್ರ ಪಟೇಲ್‌ರ ಮಾಡಿರುವ ಆರೋಪದ ಬಳಿಕ ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ.

‘‘ನರೇಂದ್ರ ಪಟೇಲ್‌ಗೆ ಬಿಜೆಪಿಯು 1 ಕೋ.ರೂ. ಆಫರ್ ನೀಡಿರುವ ಸುದ್ದಿ ಕೇಳಿದೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ನಾನು ಇಂದು ಬಿಜೆಪಿ ತೊರೆಯುತ್ತಿರುವೆ. ಬಡತನದ ಹಿನ್ನೆಲೆಯಿಂದ ಬಂದಿರುವ ಪಟೇಲ್ ಹಣದ ಆಮಿಷಕ್ಕೆ ಒಳಗಾಗದೇ ಬಿಜೆಪಿಯ ಬಣ್ಣ ಬಯಲುಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸುವೆ’’ ಎಂದು ಸವಾನಿ ಹೇಳಿದ್ದಾರೆ.

 ನರೇಂದ್ರ ಪಟೇಲ್ ಆರೋಪವನ್ನು ನಿರಾಕರಿಸಿದ ಇತ್ತೀಚೆಗೆ ಬಿಜೆಪಿ ಸೇರಿರುವ ವರುಣ್ ಪಟೇಲ್,‘‘ ಆರೋಪದಲ್ಲಿ ಹುರುಳಿಲ್ಲ. ಇದು ಕಾಂಗ್ರೆಸ್ ಪಾರ್ಟಿಯ ಗೇಮ್ ಪ್ಲಾನ್. ಪಾಟಿದಾರ್ ಸಮುದಾಯ ಬಿಜೆಪಿಗೆ ಸೇರುತ್ತಿದ್ದಾರೆಂಬ ಭಯದಲ್ಲಿ ಕಾಂಗ್ರೆಸ್ ಇಂತಹ ಆರೋಪ ಸೃಷ್ಟಿ ಮಾಡುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News