ಹ್ಯೂಸ್ಟನ್‌: ನಾಪತ್ತೆಯಾಗಿದ್ದ 3 ವರ್ಷದ ಭಾರತೀಯ ಬಾಲಕಿಯ ಮೃತದೇಹ ಪತ್ತೆ ?

Update: 2017-10-23 06:22 GMT

ಹ್ಯೂಸ್ಟನ್‌,ಅ.23 :  ಎರಡು ವಾರಗಳ ಹಿಂದೆ ಕಾಣೆಯಾಗಿದ್ದ ಮೂರು ವರ್ಷದ ಭಾರತೀಯ ಬಾಲಕಿಯದ್ದೆಂದು ಶಂಕಿಸಲಾಗಿರುವ  ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಭಿನ್ನ ಸಾಮರ್ಥ್ಯದ  ಬಾಲಕಿಯಾಗಿದ್ದ ಶೆರಿನ್ ಮ್ಯಾಥ್ಯೂಸ್ ಅಕ್ಟೋಬರ್ 7ರಿಂದ ನಾಪತ್ತೆಯಾಗಿದ್ದಳು. ಆಕೆಯ ಸಾಕು ತಂದೆ ವೆಸ್ಲೀ ಮ್ಯಾಥ್ಯೂಸ್ ಆ ದಿನ ಮುಂಜಾವು ಸುಮಾರು 3 ಗಂಟೆಗೆ ಆಕೆ ಹಾಲು ಕುಡಿದಿಲ್ಲವೆಂಬ ಸಿಟ್ಟಿನಲ್ಲಿ ಕತ್ತಲಲ್ಲಿ ಆಕೆಯನ್ನು ಡಲ್ಲಾಸ್ ನ ರಿಚರ್ಡ್ ಸನ್ ಪ್ರದೇಶದಲ್ಲಿನ ಮನೆಯಿಂದ ಹೊರಗೆ ನಿಲ್ಲಿಸಿದ ನಂತರ ಬಾಲಕಿ  ಕಾಣೆಯಾಗಿದ್ದಳು.

ಬಾಲಕಿಯದ್ದೆಂದು ಹೇಳಲಾದ ಮೃತದೇಹ ಆಕೆಯ ಮನೆಯಿಂದ ಸುಮಾರು ಅರ್ಧ ಮೈಲು ದೂರದ  ರಸ್ತೆಯ ಕೆಳಗಿನ ತೋಡೊಂದರಲ್ಲಿ ಪತ್ತೆಯಾಗಿತ್ತು. ಆದರೆ ಆ ಅವಶೇಷಗಳು ಶೆರಿನ್ ಳದ್ದೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಬಾಲಕಿ ನಾಪತ್ತೆಯಾಗಿದ್ದಾಳೆಂದು ತಿಳಿದ ನಂತರ ಆಕೆಯ 37 ವರ್ಷದ ಸಾಕು ತಂದೆ ವೆಸ್ಲೀಯು  ಆಕೆಯನ್ನು ಅಪಾಯಕ್ಕೊಡ್ಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಆದರೆ ಆತ 2.50 ಲಕ್ಷ ಡಾಲರ್  ಬಾಂಡಿಗೆ ಸಹಿ ಹಾಕಿದ ನಂತರ ಆತನನ್ನು ಮರುದಿನ ಬಿಡುಗಡೆಗೊಳಿಸಲಾಗಿತ್ತು.

ವೆಸ್ಲಿ ಕೇರಳ ಮೂಲದವನಾಗಿದ್ದು ಎರಡು ವರ್ಷಗಳ ಹಿಂದೆ ಭಾರತದ ಅನಾಥಾಲಯವೊಂದರಿಂದ ಆಕೆಯನ್ನು ದತ್ತು ಪಡೆದಿದ್ದ. ಪೊಲೀಸರಿಗೆ  ನೀಡಿದ ಹೇಳಿಕೆಯಂತೆ ಆತ ಅಕ್ಟೋಬರ್ 7ರಂದು ಬೆಳಗಿನ ಜಾವ ಮೂರು ಗಂಟೆಗೆ ಬಾಲಕಿಯನ್ನು ಮನೆಯ ಹೊರಗಿನ ದೊಡ್ಡ ಮರದಡಿಯಲ್ಲಿ ನಿಲ್ಲಿಸಿದ್ದ. ಆದರೆ 15 ನಿಮಿಷಗಳ ನಂತರ ಮತ್ತೆ  ನೋಡಿದಾಗ ಆಕೆ ಅಲ್ಲಿರಲಿಲ್ಲ. ಆಕೆಗಾಗಿ ಸುತ್ತಮುತ್ತ ಹುಡುಕಾಡಿ, ಜೊನೆಗೆ ಆಕೆ ತಾನಾಗಿಯೇ ಹಿಂದೆ ಬರಬಹುದೆಂದು ತಿಳಿದು ಬೆಳಗ್ಗಿನ ತನಕ ಕಾಯಲು ನಿರ್ಧರಿಸಿದ್ದ. ಆದರೆ ಆಕೆ ಬಾರದೇ ಇದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News