50 ಸಾವಿರ ರೂ.ಗಿಂತ ಹೆಚ್ಚಿನ ನಗದು ವ್ಯವಹಾರಗಳಿಗೆ ಐಡಿ ಪರಿಶೀಲನೆ ಕಡ್ಡಾಯ

Update: 2017-10-23 09:50 GMT

ಹೊಸದಿಲ್ಲಿ,ಅ.23 : ಐವತ್ತು ಸಾವಿರ ರೂಪಾಯಿಗಿಂತ ಹೆಚ್ಚಿನ ನಗದು ವ್ಯವಹಾರಗಳನ್ನು ಮಾಡುವ ವ್ಯಕ್ತಿಗಳ ಮೂಲ ಗುರುತುಪತ್ರ ದಾಖಲೆಗಳನ್ನು ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಪರಿಶೀಲಿಸುವುದನ್ನು  ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಕಾಳಧನ ನಿಯಂತ್ರಿಸುವ ಉದ್ದೇಶದಿಂದ ಇಂತಹ ಒಂದು ಕ್ರಮ ಕೈಗೊಳ್ಳಲಾಗಿದೆ.

ಕಂದಾಯ ಇಲಾಖೆಯು  ವಿತ್ತ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಅಧಿಸೂಚನೆಯೊಂದನ್ನು ಜಾರಿಗೊಳಿಸಿ ಅಕ್ರಮ ಹಣ ವರ್ಗಾವಣೆ (ದಾಖಲಾತಿ ನಿರ್ವಹಣೆ)ನಿಯಮಾವಳಿಗಳಲ್ಲಿ ತಿದ್ದುಪಡಿ ತಂದಿದೆ. ಹೊಸ ನಿಯಮಾವಳಿಗಳಂತೆ  ಬ್ಯಾಂಕುಗಳಲ್ಲಿ ರೂ.50,000ಕ್ಕಿಂತ ಹೆಚ್ಚಿನ ವ್ಯವಹಾರಗಳನ್ನು ಮಾಡುವವರ ಮೂಲ ಗುರುತು ಪತ್ರಗಳನ್ನು ತಮ್ಮಲ್ಲಿರುವ ಗುರುತುಪತ್ರಗಳ ಪ್ರತಿಯೊಂದಿಗೆ ತಾಳೆ ಮಾಡಿ ನೋಡಿ ನಂತರ ಅದನ್ನು ದಾಖಲಿಸಬೇಕಿದೆ.

ಬ್ಯಾಂಕುಗಳು ಹಾಗೂ ವಿತ್ತ ಸಂಸ್ಥೆಗಳ ಹೊರತಾಗಿ  ಸ್ಟಾಕ್ ಬ್ರೋಕರುಗಳು, ಚಿಟ್ ಫಂಡ್ ಕಂಪೆನಿಗಳು, ಸಹಕಾರಿ ಬ್ಯಾಂಕುಗಳು, ಗೃಹ ಸಾಲ ಸಂಸ್ಥೆಗಳು ಹಾಗೂ ಬ್ಯಾಂಕೇತರ ವಿತ್ತ ಸಂಸ್ಥೆಗಳು ಕೂಡ ಈ ನಿಯಮಗಳನ್ನು ಪಾಲಿಸಿ ಸೂಕ್ತ ಮಾಹಿತಿಯನ್ನು ಫೈನಾನ್ಶಿಯಲ್ ಇಂಟಲಿಜೆನ್ಸ್ ಯುನಿಟ್ ಆಫ್ ಇಂಡಿಯಾಗೆ ಸಲ್ಲಿಸಬೇಕಿದೆ. ಈ ಸಂಸ್ಥೆಗಳು ಆಧಾರ್ ಸಂಖ್ಯೆ ಮತ್ತಿತರ  ಅಧಿಕೃತ ದಾಖಲೆಗಳನ್ನು ಬ್ಯಾಂಕ್ ಖಾತೆಗಳನ್ನು ತೆರೆಯುವವರಿಂದ ಹಾಗೂ ರೂ 50,000ಕ್ಕಿಂತ ಮೇಲ್ಪಟ್ಟು ಹಣಕಾಸು ವ್ಯವಹಾರಗಳನ್ನು ನಡೆಸುವವರಿಂದ ಪಡೆಯಬೇಕಿದೆ.

ವಿದೇಶಿ ಕರೆನ್ಸಿಯಲ್ಲಿ ರೂ. 5 ಲಕ್ಷಕ್ಕಿಂತ ಹೆಚ್ಚಿನ ವೈರ್ ಟ್ರಾನ್ಸ್ ಫರ್, ರೂ.50 ಲಕ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಸ್ಥಿರಾಸ್ತಿ ಖರೀದಿ ಮತ್ತು ಮಾರಾಟ ಸಂದರ್ಭವೂ ಈ ದಾಖಲೆಗಳನ್ನು ಸಲ್ಲಿಸಬೇಕಿದೆ. ಹೀಗೆ ಸಲ್ಲಿಸಲಾಗುವ ಮಾಹಿತಿಗಳಲ್ಲಿ ಸಂಬಂಧಿತ ವ್ಯಕ್ತಿಯ ಈಗಿರುವ ವಿಳಾಸದ ಬಗ್ಗೆ ಉಲ್ಲೇಖವಿಲ್ಲದೇ ಇದ್ದಲ್ಲಿ ಅದಕ್ಕಾಗಿ ಎರಡು ತಿಂಗಳಿಗಿಂತ ಹೆಚ್ಚು ಹಳೆಯದಲ್ಲದ ವಿದ್ಯುತ್, ದೂರವಾಣಿ, ಮೊಬೈಲ್ ಫೋನ್ ಪೋಸ್ಟ್ ಪೇಯ್ಡ್ ಬಿಲ್ ಇಲ್ಲವೇ ನೀರಿನ ಬಿಲ್ಲಿನ ಪ್ರತಿಯನ್ನು ಸಲ್ಲಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News