ಚಾರ್ಜ್ ಗೆ ಇಟ್ಟಿದ್ದ ರಿಲಾಯನ್ಸ್ ಜಿಯೋ ಫೋನ್ ಸ್ಫೋಟ

Update: 2017-10-23 10:22 GMT

ಹೊಸದಿಲ್ಲಿ, ಅ.23: ಸ್ಯಾಮ್ ಸಂಗ್, ಕ್ಸಿಯಾಮಿ ಹಾಗು ಆ್ಯಪಲ್ ನಂತಹ ಕಂಪೆನಿಗಳ ಮೊಬೈಲ್ ಫೋನ್ ಗಳು ಸ್ಫೋಟಗೊಂಡಿದ್ದ ಘಟನೆ ಈ ಹಿಂದೆ ವರದಿಯಾಗಿತ್ತು. ಆದರೆ ಇತ್ತೀಚೆಗಷ್ಟೇ ಕಾಶ್ಮೀರದಲ್ಲಿ ನೂತನ ಜಿಯೋಫೋನ್ ಒಂದು ಸ್ಪೋಟಗೊಂಡಿದೆ ಎನ್ನಲಾಗಿದೆ.

ಈ ಬಗ್ಗೆ 'ಫೋನ್ ರಾಡಾರ್' ವರದಿ ಮಾಡಿದ್ದು, ಚಾರ್ಜ್ ಗೆ ಇಟ್ಟಿದ್ದ ವೇಳೆ ಜಿಯೋ ಫೋನ್ ಸ್ಫೋಟಗೊಂಡಿತ್ತು. ಪರಿಣಾಮ ಹ್ಯಾಂಡ್ ಸೆಟ್ ನ ಹಿಂಭಾಗ ಸಂಪೂರ್ಣ ಸುಟ್ಟು ಕರಗಿಹೋಗಿದೆ. ಆದರೆ ಈ ಜಿಯೋ ಫೋನ್ ಬಳಸುತ್ತಿದ್ದವರ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ ಎನ್ನಲಾಗಿದೆ.

ಇದು ಬ್ಯಾಟರಿ ವೈಫಲ್ಯದಿಂದ ಸಂಭವಿಸಿದ ಅವಘಡ ಎನ್ನಲಾಗಿದೆ. ಸ್ಫೋಟಗೊಂಡ ನಂತರವೂ ಹ್ಯಾಂಡ್ ಸೆಟ್ ನ ಬ್ಯಾಟರಿ ಈಗಲೂ ಕೆಲಸ ಮಾಡುತ್ತಿದೆ ಎಂದು ಡಿಸ್ಟ್ರಿಬ್ಯೂಟರ್ ಒಬ್ಬರು ಮಾಹಿತಿ ನೀಡಿದ್ದಾರೆ. ಚಾರ್ಜಿಂಗ್ ಕೇಬಲ್ ಕೂಡ ಸುಟ್ಟುಹೋಗಿದ್ದು, ಚಾರ್ಜರ್ ಸಮಸ್ಯೆಯಿಂದ ಮೊಬೈಲ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

“ಜಿಯೋ ಫೋನ್ ಅನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಈ ಘಟನೆಯ ಬಗ್ಗೆ ನಮಗೂ ಮಾಹಿತಿ ಲಭಿಸಿದೆ. ಇದೊಂದು ಉದ್ದೇಶಪೂರ್ವಕ ಕೃತ್ಯ ಎಂಬುದು ನಮ್ಮ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮುಂದಿನ ತನಿಖೆಯ ಆಧಾರದಲ್ಲಿ ನಾವು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ರಿಲಾಯನ್ಸ್ ರಿಟೇಲ್ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News