ಆಧಾರ್ ಇಲ್ಲದವರಿಗೆ ಪಡಿತರ ನಿರಾಕರಿಸಬೇಡಿ: ರಾಜ್ಯಗಳಿಗೆ ಕೇಂದ್ರದ ತಾಕೀತು

Update: 2017-10-26 13:06 GMT

ಹೊಸದಿಲ್ಲಿ,ಅ.26: ಆಧಾರ್ ಸಂಖ್ಯೆಯನ್ನು ಹೊಂದಿರದ ಅಥವಾ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಜೋಡಣೆಗೊಳಿಸದ ಯಾವುದೇ ಫಲಾನುಭವಿಗೆ ಪಡಿತರ ಸಾಮಗ್ರಿಗಳನ್ನು ನಿರಾಕರಿಸದಂತೆ ಕೇಂದ್ರವು ಎಲ್ಲ ರಾಜ್ಯಗಳಿಗೆ ನಿರ್ದೇಶ ನೀಡಿದೆ. ತನ್ನ ಸೂಚನೆಯನ್ನು ಉಲ್ಲಂಘಿಸಿದರೆ ಕಠಿಣ ಕ್ರಮವನ್ನು ಕೈಗೊಳ್ಳುವುದಾಗಿ ಅದು ಎಚ್ಚರಿಕೆ ನೀಡಿದೆ.

ಆಧಾರ್ ಹೊಂದಿಲ್ಲವೆಂಬ ಕಾರಣಕ್ಕೆ ಅರ್ಹ ಕುಟುಂಬಗಳನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಡದಂತೆಯೂ ಅದು ರಾಜ್ಯ ಸರಕಾರಗಳಿಗೆ ಸೂಚಿಸಿದೆ.

ಇತ್ತೀಚಿಗೆ ಜಾರ್ಖಂಡ್‌ನ ಸಿಮ್ಡೇಗಾ ಜಿಲ್ಲೆಯಲ್ಲಿ ಆಧಾರ್ ಇಲ್ಲವೆಂಬ ಕಾರಣದಿಂದ ಬಡ ಕುಟುಂಬವೊಂದರ ಪಡಿತರ ಚೀಟಿಯನ್ನು ರದ್ದುಗೊಳಿಸಿದ ಬಳಿಕ 11ರ ಹರೆಯದ ಬಾಲಕಿಯೋರ್ವಳು ಹಸಿವಿನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ವಾರ ಕೇಂದ್ರ ಸರಕಾರವು ಈ ಸಂಬಂಧ ಎಲ್ಲ ರಾಜ್ಯ ಸರಕಾರಗಳಿಗೆ ಅಧಿಸೂಚನೆಯನ್ನು ಹೊರಡಿಸಿದೆ.

 ಸೂಕ್ತ ಪರಿಶೀಲನೆಯ ಬಳಿಕ ಪಡಿತರ ಚೀಟಿದಾರನು ಪಡಿತರ ಚೀಟಿಯಲ್ಲಿ ಒದಗಿಸಿರುವ ಮಾಹಿತಿಗಳು ನಿಜವಲ್ಲ ಎನ್ನುವುದು ಸಂಶಯಾತೀತವಾಗಿ ಸಿದ್ಧವಾದ ಬಳಿಕವಷ್ಟೇ ಅದನ್ನು ರದ್ದುಗೊಳಿಸಬಹುದು ಎಂದು ಕೇಂದ್ರ ಆಹಾರ ಸಚಿವಾಲಯವು ತನ್ನ ನಿರ್ದೇಶದಲ್ಲಿ ಸ್ಪಷ್ಟಪಡಿಸಿದೆ.

ಆಧಾರ್ ಇಲ್ಲವೆಂಬ ಕಾರಣದಿಂದ ಫಲಾನುಭವಿಗಳನ್ನು ವಾಪಸ್ ಕಳುಹಿಸದಂತೆ ಮತ್ತು ಈ ಸಂಬಂಂಧ ಎಲ್ಲ ವಿನಾಯಿತಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತ್ಯೇಕ ಲಾಗ್‌ಬುಕ್‌ನಲ್ಲಿ ದಾಖಲಾಗುವಂತೆ ನೋಡಿಕೊಳ್ಳುವಂತೆ ರಾಜ್ಯಗಳ ಕ್ಷೇತ್ರಾಧಿಕಾರಿಗಳಿಗೆ ಸೂಚಿಸಲಾಗಿದೆ.

‘‘ಆಧಾರ್ ಮತ್ತು ಆಧಾರ್ ಜೋಡಣೆಯ ಕೊರತೆ ಹಾಗೂ ಬಯೊಮೆಟ್ರಿಕ್ ದೃಢೀಕರಣದಲ್ಲಿ ತಾಂತ್ರಿಕ ಸಮಸ್ಯೆಗಳಿಂದಾಗಿ ಯಾರೊಬ್ಬರೂ ಆಹಾರ ಸೌಲಭ್ಯಗಳಿಂದ ವಂಚಿತರಾಗಬಾರದು ಎನ್ನುವುದು ನಮ್ಮ ಉದ್ದೇಶವಾಗಿದೆ. ವ್ಯಕ್ತಿಯು ಪ್ರಾಮಾಣಿಕ ನಾಗಿರುವವರೆಗೆ ಆತನಿಗೆ ಪಡಿತರವನ್ನು ನಿರಾಕರಿಸಬಾರದು’’ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಸಿಇಒ ಅಜಯ ಭೂಷಣ್ ಪಾಂಡೆ ಅವರು ತನ್ನನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆಧಾರ್ ಹೊಂದಿಲ್ಲದವರಿಗೆ ಆಧಾರ್ ನೋಂದಣಿ ಸೌಲಭ್ಯಗಳನ್ನೊದಗಿಸಲು ಮತ್ತು ಆಧಾರ್‌ನ್ನು ಪಡಿತರ ಚೀಟಿಗಳೊಂದಿಗೆ ಜೋಡಣೆಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವ್ಯವಸ್ಥೆ ಮಾಡಬೇಕು ಎಂದು ತಿಳಿಸಿರುವ ಆಹಾರ ಸಚಿವಾಲಯವು, ಅಧಿಸೂಚನೆಯ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತೆ ಆಧಾರ್‌ನ್ನು ಪಡಿತರ ಚೀಟಿಗಳೊಂದಿಗೆ ಜೋಡಣೆಗೊಳಿಸಲು ರಾಜ್ಯಗಳಿಗೆ ಈ ವರ್ಷದ ಡಿ.31ರ ಗಡುವನ್ನು ನೀಡಲಾಗಿದೆ.

ಆದರೆ, ಆಧಾರ ಸಂಖ್ಯೆಯನ್ನು ಹೊಂದಿಲ್ಲದವರಿಗೆ ವಿವಿಧ ಸರಕಾರಿ ಯೋಜನೆಗಳ ಲಾಭಗಳನ್ನು ಪಡೆಯಲು ಕಡ್ಡಾಯ ಆಧಾರ್ ಜೋಡಣೆಗೆ ಗಡುವನ್ನು ಮುಂದಿನ ವರ್ಷದ ಮಾ.1ರವರೆಗೆ ವಿಸ್ತರಿಸಲಾಗುವುದು ಎಂದು ಕೇಂದ್ರವು ಬುಧವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ದೇಶದಲ್ಲಿ ಈವರೆಗೆ ಶೇ.82ರಷ್ಟು ಪಡಿತರ ಚೀಟಿಗಳು ಆಧಾರ್‌ನೊಂದಿಗೆ ಜೋಡಣೆ ಗೊಂಡಿವೆ.

ಫಲಾನುಭವಿಗೆ ಆಧಾರ್ ದೊರೆಯುವವರೆಗೆ ಪಡಿತರ ಚೀಟಿ, ನೋಂದಣಿ ಚೀಟಿ ಮತ್ತು ಚುನಾವಣಾ ಗುರುತಿನ ಚೀಟಿಯಂತಹ ಇತರ ನಿಗದಿತ ದಾಖಲೆಗಳನ್ನು ಹಾಜರು ಪಡಿಸಿದರೆ ಪಡಿತರ ಸಾಮಗ್ರಿಗಳನ್ನು ಪೂರೈಸಬೇಕು ಎಂದು ಆಹಾರ ಸಚಿವಾಲಯದ ನಿರ್ದೇಶದಲ್ಲಿ ತಿಳಿಸಲಾಗಿದೆ.

ಅರ್ಹ ಕುಟುಂಬದ ಎಲ್ಲ ಸದಸ್ಯರೂ ಆಧಾರ್ ಹೊಂದಿದ್ದಾರೆಯೇ ಎನ್ನುವುದನ್ನು ಪರಿಗಣಿಸದೆ ನಿಗದಿತ ದಾಖಲೆಗಳ ಆಧಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಆಹಾರ ಧಾನ್ಯಗಳು ಅಥವಾ ನಗದು ವರ್ಗಾವಣೆ ಸೌಲಭ್ಯವನ್ನು ಒದಗಿಸಬೇಕು ಎಂದು ಅದು ಸ್ಪಷ್ಟಪಡಿಸಿದೆ.

ಇದೇ ರೀತಿ ತಾಂತ್ರಿಕ ತೊಂದರೆಗಳಿಂದ ಬಯೊಮೆಟ್ರಿಕ್ ದೃಢೀಕರಣ ಸಾಧ್ಯವಾಗ ದಿದ್ದರೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಗಳನ್ನು ಹಾಜರು ಪಡಿಸುವ ಫಲಾನುಭವಿಗಳಿಗೆ ಪಡಿತರವನ್ನು ನಿರಾಕರಿಸುವಂತಿಲ್ಲ ಎಂದೂ ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News