ಪತ್ನಿಯ ಕೊಲೆ ಯತ್ನ ಆರೋಪ: ವ್ಯಕ್ತಿಗೆ ಜೈಲು ಶಿಕ್ಷೆ

Update: 2017-10-26 17:58 GMT

ಸಾಗರ, ಅ.26: ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ವ್ಯಕ್ತಿಗೆ ಇಲ್ಲಿ 5ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಶಿಕ್ಷೆ ಪ್ರಕಟಿಸಿದೆ ನಗರದ ಶ್ರೀಧರ ನಗರ ವಾಸಿ ಗುರುಮೂರ್ತಿ ಎಂಬಾತ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದನು. ಪ್ರತಿದಿನ ರಾತ್ರಿ ಗುರುಮೂರ್ತಿ ಕಂಠಪೂರ್ತಿ ಕುಡಿದು ಬಂದು ಹೆಂಡತಿ ಹಾಗೂ ಮಕ್ಕಳಿಗೆ ವಿಪರೀತವಾಗಿ ಹೊಡೆಯುತ್ತಿದ್ದನು. ಗಂಡನ ಕಾಟ ತಾಳಲಾರದೆ ಪೂರ್ಣಿಮಾ ತನ್ನ ಇಬ್ಬರು ಮಕ್ಕಳೊಂದಿಗೆ ಶ್ರೀಧರ ನಗರದಲ್ಲಿ ಬೇರೆ ಮನೆಮಾಡಿಕೊಂಡು ವಾಸ ಮಾಡುತ್ತಿದ್ದರು. ಗುರುಮೂರ್ತಿ ಅಲ್ಲಿಗೂ ಹೋಗಿ ತೊಂದರೆ ಕೊಡುತ್ತಿದ್ದನು ಎನ್ನಲಾಗಿದ್ದು , ಈ ಬಗ್ಗೆ ಪತ್ನಿ ತನ್ನ ಪತಿ ಗುರುಮೂರ್ತಿ ವಿರುದ್ಧ ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಫೆ.1, 2017ರ ರಾತ್ರಿ 10:30ಕ್ಕೆ ಆರೋಪಿ ಗುರುಮೂರ್ತಿ ಕುಡಿದು ಪೂರ್ಣಿಮಾ ಮನೆಗೆ ನುಗ್ಗಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾನೆ. ಈ ಸಂದರ್ಭದಲ್ಲಿ ಪೂರ್ಣಿಮಾ ಅವರ ಮಗಳು ಸಿಂಚನಾ ಬಿಡಿಸಲು ಹೋದಾಗ ಗುರುಮೂರ್ತಿ ಮಗಳ ಭುಜ ಹಾಗೂ ಬೆನ್ನಿಗೆ ಕಚ್ಚಿ ಗಾಯಗೊಳಿಸಿದ್ದನು. ಈ ಸಂಬಂಧ ಪೂರ್ಣಿಮಾ ನಗರ ಠಾಣೆಯಲ್ಲಿ ಮತ್ತೊಮ್ಮೆ ದೂರು ದಾಖಲು ಮಾಡಿದ್ದರು. ಪೊಲೀಸರು ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 5ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಹೇಶ್ವರಿ ಎಸ್. ಹಿರೇಮಠ ಅವರು ದೊರೆತ ಸಾಕ್ಷ ಹಾಗೂ ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಪೂರ್ಣಿಮಾ ಅವರನ್ನು ಕೊಲೆ ಮಾಡಲು ಪ್ರಯತ್ನಿಸಿರುವುದು ಹಾಗೂ ಸಂಬಂಧಪಟ್ಟ ಇತರ ಅಪರಾಧಗಳಿಗಾಗಿ ಅ. 25ರಂದು ಆರೋಪಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 23ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದ್ದಾರೆ.

ದಂಡದ ಹಣದಲ್ಲಿ ರೂ. 10 ಸಾವಿರ ಬಾಧಿತಳಿಗೆ ಪರಿಹಾರವಾಗಿ ಕೊಡಬೇಕೆಂದು ನ್ಯಾಯಾಧೀಶರು ಆದೇಶ ಮಾಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ವಿ.ಜಿ.ಯಳಗೇರಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News