ಮಾಯಾವತಿಯ ಮತಾಂತರ ಬೆದರಿಕೆ ಹುಟ್ಟು ಹಾಕಿರುವ ಪ್ರಶ್ನೆಗಳು

Update: 2017-10-27 18:56 GMT

‘‘ಬಿಜೆಪಿ ತನ್ನ ದುರ್ಬುದ್ಧಿಯನ್ನು ಬಿಡದೇ ಇದ್ದರೆ ಬೌದ್ಧ ಧರ್ಮ ಸ್ವೀಕಾರ ಖಚಿತ’’ ಎಂದಿದ್ದಾರೆ ಬಿಎಸ್ಪಿ ನಾಯಕಿ ಮಾಯಾವತಿ. ಲಕ್ನೋದಲ್ಲಿ ನಡೆದ ಸಮಾವೇಶವೊಂದರಲ್ಲಿ ಇತ್ತೀಚೆಗೆ ಮಾತನಾಡುತ್ತಿದ್ದ ಅವರು, ದುರ್ಬಲ ವರ್ಗದ ಜೊತೆಗೆ ಬಿಜೆಪಿ ತನ್ನ ನಡತೆಯನ್ನು ಬದಲಿಸಿಕೊಳ್ಳದೇ ಇದ್ದರೆ ಮತಾಂತರವಾಗುವುದು ಅನಿವಾರ್ಯ ಎಂದು ಎಚ್ಚರಿಸಿದರು. ಈ ಹೇಳಿಕೆಯನ್ನು ಸ್ವತಃ ದಲಿತ ಮುಖಂಡರು ಯಾವ ರೀತಿಯಲ್ಲಿ ಸ್ವೀಕರಿಸಬೇಕು ಎಂದು ತಿಳಿಯದೇ ಮುಜುಗರಕ್ಕೆ ಒಳಗಾಗಿದ್ದಾರೆ. ಯಾಕೆಂದರೆ ಮಾಯಾವತಿಯ ಹೇಳಿಕೆಯಲ್ಲಿ ಹಲವು ವಿರೋಧಾಭಾಸಗಳಿವೆ. ಈ ಮೂಲಕ, ದಲಿತರ ಮತಾಂತರವನ್ನು ಅವರು ಒಂದು ರಾಜಕೀಯ ಪ್ರಹಸನವಾಗಿ ಬದಲಿಸಲು ಹೊರಟಿದ್ದಾರೆ.

‘ಬೌದ್ಧ ಧರ್ಮವನ್ನು ಯಾಕೆ ಸ್ವೀಕರಿಸಬೇಕು?’ ಎನ್ನುವುದರ ಕುರಿತಂತೆಯೇ ಅವರಿಗೆ ಖಚಿತತೆ ಇಲ್ಲದೇ ಇರುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ. ಮತಾಂತರವನ್ನು ಅವರು ‘ಬ್ಲಾಕ್‌ಮೇಲ್ ರಾಜಕಾರಣಕ್ಕೆ’ ಬಳಸಲು ಮುಂದಾಗಿದ್ದಾರೆಯೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಹಾಗಾದರೆ ಮಾಯಾವತಿ ಈಗ ಇರುವ ಧರ್ಮ ಯಾವುದು ಎಂಬ ಪ್ರಶ್ನೆಯೂ ಉತ್ತರವಿಲ್ಲದೆ ಬಿದ್ದುಕೊಳ್ಳುತ್ತದೆ. ಧರ್ಮ ಎನ್ನುವುದು, ‘ಒಂದು ರಾಜಕೀಯ ಪಕ್ಷ ಹೇಗೆ ನಡೆದುಕೊಳ್ಳುತ್ತದೆ’ ಎನ್ನುವ ಆಧಾರದಲ್ಲಿ ಬದಲಿಸಿಕೊಳ್ಳುವಂತಹ ವ್ಯವಸ್ಥೆಯೇ? ಎಂಬ ಪ್ರಶ್ನೆಯನ್ನು ಎಲ್ಲ ದಲಿತ ಮುಖಂಡರೂ ತಮಗೆ ತಾವೇ ಕೇಳಿಕೊಳ್ಳುವಂತಾಗಿದೆ.

‘‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ’’ ಎನ್ನುವುದು ಅಂಬೇಡ್ಕರ್ ನಿಲುವಾಗಿತ್ತು. ತನ್ನ ಧರ್ಮ ಯಾವ ರೀತಿಯಲ್ಲೂ ನ್ಯಾಯವನ್ನು, ಸಮಾನತೆಯನ್ನು ನೀಡಲಾರದು ಎನ್ನುವುದನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಆ ಧರ್ಮವನ್ನು ಸ್ವೀಕರಿಸುವ ಮೊದಲು ಅವರು ಬೇರೆ ಬೇರೆ ಧರ್ಮಗಳ ತೀವ್ರ ಅಧ್ಯಯನವನ್ನು ನಡೆಸಿದ್ದಾರೆ ಕೂಡ. ಅಂತಿಮವಾಗಿ ದಲಿತರ ಮೂಲ ಧರ್ಮ ಬೌದ್ಧ ಧರ್ಮ ಎನ್ನುವುದನ್ನು ಮನವರಿಕೆ ಮಾಡಿಕೊಂಡು, ಆ ಧರ್ಮದ ಬಗ್ಗೆ ಅಪಾರ ಅಧ್ಯಯನ ಮಾಡಿ ಬಳಿಕ ಮತಾಂತರವಾದರು. ಆ ಮತಾಂತರ ದೇಶದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಆಧ್ಯಾತ್ಮಿಕ ವಲಯದಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿತು.

‘ದೇವಸ್ಥಾನಕ್ಕೆ ಪ್ರವೇಶ ಕೊಡಿ’ ಎಂದು ವಿನೀತನಾಗಿ ಕೇಳುವ ದಲಿತರ ಬಳಿ ‘‘ಎಲ್ಲಿ ನಿಮ್ಮ ಆತ್ಮಾಭಿಮಾನಕ್ಕೆ ಧಕ್ಕೆ ಬರುತ್ತದೆಯೋ ಅಲ್ಲಿ ನಿಮ್ಮ ಚಪ್ಪಲಿಯನ್ನೂ ಉಳಿಸಬೇಡಿ’’ ಎಂದು ಕಠೋರವಾಗಿ ಹೇಳಿದವರು. ಯಾವುದೋ ಕ್ಷುಲ್ಲಕ ರಾಜಕೀಯ ಕಾರಣಗಳಿಗಾಗಿ ಅಥವಾ ಯಾವುದೇ ಸರಕಾರವನ್ನು ಅಥವಾ ಒಂದು ನಿರ್ದಿಷ್ಟ ಧರ್ಮವನ್ನು ಬೆದರಿಸಲು, ಸೇಡು ತೀರಿಸಲು ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಲಿಲ್ಲ. ಅದು ಅವರಿಗೆ ಸಾಮಾಜಿಕ ಮತ್ತು ಆಧ್ಯಾತ್ಮಿಕವಾದ ಅಗತ್ಯವಾಗಿತ್ತು. ಒಂದು ರೀತಿಯಲ್ಲಿ ಅವರು ಬ್ರಾಹ್ಮಣ್ಯದ ಹಿಡಿತದಿಂದ ಹೊರಬಂದು, ಮಾತೃ ಧರ್ಮಕ್ಕೆ ಮರಳಿದರು.

 2012ರಲ್ಲಿ ಒಮ್ಮೆ ಮಾಯಾವತಿಯವರು ಬೌದ್ಧ ಧರ್ಮ ಸ್ವೀಕಾರದ ಕುರಿತಂತೆ ಮಾತನಾಡಿದ್ದರು. ಕೇಂದ್ರದಲ್ಲಿ ಸಂಪೂರ್ಣ ಬಹುಮತವನ್ನು ಪಡೆದಾಕ್ಷಣ ಸಾಮೂಹಿಕವಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಲಿದ್ದೇವೆ ಎಂದು ಅವರು ಹೇಳಿದ್ದರು. ಕಾನ್ಶೀರಾಮ್ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಈ ಘೋಷಣೆಯನ್ನು ಮಾಡಿದ್ದರು. ಕಾನ್ಶೀರಾಮ್ ಅವರು ಮೂಲತಃ ಬೌದ್ಧ ಧರ್ಮವನ್ನು ಸ್ವೀಕರಿಸದೇ ಇದ್ದಿದ್ದರೂ, ಆಚರಣೆಯಲ್ಲಿ ಬೌದ್ಧ ಚಿಂತನೆಯನ್ನೇ ಅಳವಡಿಸಿಕೊಂಡಿದ್ದರು ಎಂದು ಮಾಯಾವತಿ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದರು. ಆ ಮಾತನ್ನು ಹೇಳಿದ ಐದು ವರ್ಷಗಳ ಬಳಿಕ ‘ಬಿಜೆಪಿ ತನ್ನ ದುರ್ಬುದ್ಧಿಯನ್ನು ಬದಲಿಸಿಕೊಳ್ಳದೇ ಇದ್ದರೆ ನಾವು ಬೌದ್ಧ ಧರ್ಮ ಸ್ವೀಕರಿಸುತ್ತೇವೆ’’ ಎಂದಿದ್ದಾರೆ.

ಬಿಜೆಪಿಗೆ ಬುದ್ಧಿಕಲಿಸುವ ಒಂದೇ ಉದ್ದೇಶದಿಂದ ಮತಾಂತರ ಎನ್ನುವುದು ಈಗಾಗಲೇ ದೇಶಾದ್ಯಂತ ದಲಿತರೊಳಗೆ ನಡೆಯುತ್ತಿರುವ ಬೌದ್ಧ ಧರ್ಮ ಸ್ವೀಕಾರದ ಉದ್ದೇಶವನ್ನು ಅಣಕಿಸುತ್ತದೆ. ಪ್ರತೀ ವರ್ಷ ಸಹಸ್ರಾರು ದಲಿತರು ಬೌದ್ಧ ಧರ್ಮ ಸೇರ್ಪಡೆಗೊಳ್ಳುತ್ತಾರೆ. ಅನೇಕ ಸಂದರ್ಭಗಳಲ್ಲಿ ಆ ಮತಾಂತರ ಆ ಸಮಾವೇಶಕ್ಕಷ್ಟೇ ಸೀಮಿತವಾಗಿರುತ್ತದೆ ಎನ್ನುವುದು ಅಷ್ಟೇ ವಾಸ್ತವ. ಸಮಾವೇಶದಲ್ಲಿ ಸೇರಿದ ದಲಿತ ನೇತಾರರು ಹೇಳಿದಂತೆ ಬೌದ್ಧ ಸ್ವೀಕಾರದ ಆಚರಣೆಗಳನ್ನು ನೆರವೇರಿಸಿ, ತನ್ನ ಊರಿಗೆ ಮರಳಿ ಎಂದಿನಂತೆ ದಲಿತರಾಗಿಯೇ ಬದುಕುತ್ತಾರೆ. ಅದೇ ಬ್ರಾಹ್ಮಣ್ಯ ಧರ್ಮದ ಆಚರಣೆಗಳಿಗೆ ಮತ್ತೆ ಬಲಿಪಶುವಾಗುತ್ತಾರೆ.

ಅವರ ಹೆಸರಲ್ಲಿಯೂ ಬದಲಾವಣೆಗಳಿರುವುದಿಲ್ಲ. ತಾವು ಸ್ವೀಕರಿಸುವ ಧರ್ಮದ ಹಿನ್ನೆಲೆಯೂ ಅವರಲ್ಲಿರುವುದಲ್ಲ. ಒಂದು ರೀತಿಯಲ್ಲಿ ದಲಿತ ಸಂಘಟನೆಗಳು ನಡೆಸುವ ಕೆಲವು ಮತಾಂತರ ಕಾರ್ಯಕ್ರಮಗಳ ಹಿಂದೆ ‘ರಾಜಕೀಯ ಉದ್ದೇಶ’ವಷ್ಟೇ ಇರುತ್ತದೆ. ಗುಂಪಿನಿಂದ ಬೇರೆಯಾಗಿ ತನ್ನ ಮನೆ ಸೇರುವ ದಲಿತ ಮತ್ತೆ ಎಂದಿನಂತೆ ಸುತ್ತಲ ಬ್ರಾಹ್ಮಣ್ಯದ ಪ್ರಭಾವಕ್ಕೆ ಸಿಲುಕಿ ಬದುಕಬೇಕಾಗುತ್ತದೆ. ವೈದಿಕ ಪೂಜೆ ಪುರಸ್ಕಾರಗಳಲ್ಲಿ ನಿರತನಾಗಿರುತ್ತಾನೆ. ಎಲ್ಲಿಯವರೆಗೆ ಬೌದ್ಧ ಧರ್ಮ ಸ್ವೀಕಾರ ರಾಜಕೀಯದಾಚೆಗೆ ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಗತ್ಯವಾಗಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಅದೊಂದು ರಾಜಕೀಯ ಬೆದರಿಕೆಯ ತಂತ್ರವಾಗಿಯಷ್ಟೇ ಬಳಕೆಯಾಗುತ್ತದೆ.

ಅಂಬೇಡ್ಕರ್ ಯಾವ ಕಾರಣಕ್ಕಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಲು ಕರೆ ಕೊಟ್ಟರೋ ಆ ಉದ್ದೇಶವನ್ನು ಇಂತಹ ರಾಜಕೀಯ ಮತಾಂತರ ಈಡೇರಿಸಲಾರದು. ದಲಿತರಲ್ಲಿ ಬಹುತೇಕರು ಅನಕ್ಷರಸ್ಥರು. ಅವರಿಗೆ ರಾಮ, ಕೃಷ್ಣ, ಶಿವನ ಹೆಸರುಗಳು ಗೊತ್ತಿದೆ. ಆದರೆ ಸಿದ್ಧಾರ್ಥ, ಗೌತಮ ಎಂದರೆ ಯಾರು ಎಂದು ಕೇಳಿದರೆ ಆ ಬಗ್ಗೆ ಗ್ರಾಮೀಣ ದಲಿತರಲ್ಲಿ ಅರಿವು ತೀರಾ ಕಡಿಮೆ. ಸರಿ ಒಂದಿಷ್ಟು ಅಕ್ಷರಸ್ಥ ದಲಿತರನ್ನಾದರೂ ಬುದ್ಧನ ಚಿಂತನೆಗಳುಳ್ಳ ಬರಹಗಳು ತಲುಪಿವೆೆಯೇ ಎಂದರೆ ಅದೂ ಇಲ್ಲ. ಯಾಕೆಂದರೆ, ಬೌದ್ಧ ಚಿಂತನೆಗಳಿರುವ ಕೃತಿಗಳನ್ನು ಅರ್ಥೈಯಿಸುವುದು, ಅಲ್ಲಿನ ಸಿದ್ಧಾಂತಗಳನ್ನು ತನ್ನದಾಗಿಸಿಕೊಳ್ಳುವುದು ಅಕ್ಷರಸ್ಥನಿಗೇ ಕಷ್ಟ. ಅಷ್ಟ್ಟು ಜಟಿಲ ಭಾಷೆಯಲ್ಲಿ ಅದನ್ನು ವ್ಯಾಖ್ಯಾನಿಸಲಾಗಿದೆ.

ಒಬ್ಬ ದಲಿತ ಬೌದ್ಧ ಧರ್ಮ ಸ್ವೀಕರಿಸಿದರೆ ಅವರು ಪಡೆಯುವ ಆಧ್ಯಾತ್ಮಿಕ, ಸಾಮಾಜಿಕ ಲಾಭಗಳು ಏನು ಎನ್ನುವುದನ್ನು ಸರಳವಾಗಿ ದಲಿತರಿಗೆ ತಿಳಿಸುವ ಕೃತಿಗಳು ಇನ್ನೂ ಬಂದೇ ಇಲ್ಲ. ಅಲ್ಪ ಸ್ವಲ್ಪ ಬಂದಿದ್ದರೂ ಅದು ದಲಿತರನ್ನು ತಲುಪಿಯೇ ಇಲ್ಲ. ಇಂದು ಬೌದ್ಧ ಧರ್ಮವೇ ಹಲವು ಬಿಕ್ಕಟ್ಟುಗಳ ನಡುವೆ ಸಿಲುಕಿಕೊಂಡಿದೆ. ಬುದ್ಧನ ಸರಳ, ವಾಸ್ತವ ಚಿಂತನೆಗಳು ಆತನ ಬೃಹತ್ ಮೂರ್ತಿಗಳು ಮತ್ತು ಸ್ತೂಪಗಳ ನಡುವೆ ಮುಚ್ಚಿ ಹೋಗಿವೆ.

ಬುದ್ಧನನ್ನೇ ದೇವರನ್ನಾಗಿಸುವ ಪ್ರಯತ್ನ ನಡೆದಿದೆ. ಇವುಗಳ ನಡುವೆ ಬುದ್ಧನ ಸರಳ ಚಿಂತನೆಗಳು ಹೇಗೆ ದಲಿತರಿಗೆ ಬಿಡುಗಡೆಯನ್ನು, ಆತ್ಮಾಭಿಮಾನವನ್ನು ತುಂಬಿಕೊಡಬಹುದು ಎನ್ನುವುದನ್ನು ತಿಳಿಸಿಕೊಡಬೇಕಾದ ಬೌದ್ಧ ಚಿಂತಕರು ಹುಟ್ಟಿಕೊಳ್ಳಬೇಕು. ಮತಾಂತರವೆನ್ನುವುದು ಬರೇ ಹೆಸರು ಬದಲಾವಣೆಯೋ, ಅರ್ಜಿಯಲ್ಲಿ ಧರ್ಮ ಸೂಚಕ ಹೆಸರುಗಳ ಬದಲಾವಣೆಯೋ ಅಲ್ಲ. ಬದಲಾವಣೆ ನಮ್ಮೆಲ್ಲ ಒಳಹೊರಗಿನ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳಬೇಕು. ಇತರರು ತಮ್ಮ ದುರ್ಬುದ್ಧಿಯನ್ನು ಬದಲಿಸಲಿ, ಬದಲಿಸದೇ ಇರಲಿ, ನಾನು ಸ್ವೀಕರಿಸುವ ಧರ್ಮ ನನ್ನ ದುರ್ಬುದ್ಧಿಯನ್ನು, ನನ್ನ ಹೀನಾಯ ಸ್ಥಿತಿಯನ್ನು ಬದಲಿಸುತ್ತದೆ ಎನ್ನುವ ನಂಬಿಕೆಯಲ್ಲಿ ನಡೆಯುವ ಮತಾಂತರ ಮಾತ್ರ ದಲಿತರನ್ನು ಬ್ರಾಹ್ಮಣ್ಯದ ಹಿಡಿತದಿಂದ ಸಂಪೂರ್ಣ ಬಿಡುಗಡೆ ಮಾಡಬಹುದು. ಇಲ್ಲವಾದರೆ ಈ ಹಿಂದೆ ಮಾಯಾವತಿಯ ನೇತೃತ್ವದಲ್ಲಿ ನಡೆದ ಬಿಎಸ್ಪಿ-ಬಿಜೆಪಿ ಮೈತ್ರಿಯಂತೆ ಅಲ್ಲೂ ಸಲ್ಲದೆ ಇಲ್ಲೂ ಸಲ್ಲದೆ ಅತಂತ್ರ ಬದುಕನ್ನು ಬದುಕಬೇಕಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News