ಕತ್ತರಿಸುವ ಮತ್ತು ಹೊಲಿಯುವ ಕೈಗಳು....

Update: 2017-10-28 18:50 GMT

‘‘ನಿರಿಗೆ’’ ಸಬಿತಾ ಬನ್ನಾಡಿ ಅವರ ಚೊಚ್ಚಲ ಕವನ ಸಂಕಲನ. ಈಗಾಗಲೇ ವಿಮರ್ಶೆ, ಅಂಕಣ ಮೊದಲಾದ ಪ್ರಕಾರಗಳಲ್ಲಿ ಕೈಯಾಡಿಸಿ ಯಶಸ್ವಿಯಾಗಿರುವ ಸಬಿತಾ ಅವರ ಕವಿತೆಗಳು ತನ್ನ ಹೊಸ ನೋಟಗಳ ಮೂಲಕ ವಿಮರ್ಶಕರ ಮತ್ತು ಸಹೃದಯ ಗಮನ ಸೆಳೆಯುತ್ತಿದೆ. ಇಲ್ಲಿರುವ ಕವಿತೆಗಳನ್ನು ಮೂರು ಭಾಗವಾಗಿ ವಿಂಗಡಿಸಿದ್ದಾರೆ. ಮೊದಲ ಭಾಗದಲ್ಲಿ ಬದುಕಿನ ದಟ್ಟ ಚಿತ್ರಗಳಿದ್ದರೆ, ಎರಡನೆಯ ಭಾಗದಲ್ಲಿ ಸ್ವಕೇಂದ್ರಿತ ನೆಲೆಯಿಂದ ಚಿಮ್ಮಿ ಬಂದ ಪ್ರೇಮ ಕವಿತೆಗಳಿವೆ. ಹಾಗೆಯೇ ಮೂರನೇ ಭಾಗದಲ್ಲಿ ಕಿರು ಕವಿತೆಗಳ ಮೂಲಕ ದೊಡ್ಡದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಸುಮಾರು 40ಕ್ಕೂ ಅಧಿಕ ಕವಿತೆಗಳು ಇಲ್ಲಿವೆ.
‘‘ಬಟ್ಟೆಯ ಕತ್ತರಿಸುವ ಕತ್ತರಿ
ಅವನ ಕನಸುಗಳ ಕತ್ತರಿಸುತ್ತದೆ

 ಜೋಡಿಸಿ ಹೊಲಿವ ಕೈಗಳು ಮತ್ತೊಂದು ಕನಸ ಹೊಲಿಯುತ್ತದೆ...’’ ಎಂದು ಗಾರ್ಮೆಂಟ್‌ನಲ್ಲಿ ಕೆಲಸ ಮಾಡುವ ಹುಡುಗಿಯ ಕುರಿತಂತೆ ಬರೆಯುವ ಕವಯಿತ್ರಿ, ತನ್ನ ಕವಿತೆಗಳಲ್ಲಿ ಹೆಣ್ಣಿನ ಒಳತುಮುಲುಗಳನ್ನೇ ಕೇಂದ್ರ ಬಿಂದುವಾಗಿ ಮಾಡಿಕೊಂಡಿದ್ದಾರೆ. ‘ಕೋಣೆಯಿಲ್ಲದಾ ಮನೆಯ ಕಟ್ಟುವುದಕೆ/ಕನಸು ಕಾಣುವಾ ತಾವು ನನ್ನದು’ ಎನ್ನುವ ಲೇಖಕಿ ಆ ಮೂಲಕ ಗೋಡೆಯಿಲ್ಲದ ಮನೆಯನ್ನೂ ಬಯಸುತ್ತಾರೆ. ಹಾಗೆಯೇ ಹೆಣ್ಣಿನ ಮೇಲೆ ನಡೆಯುವ ಶೋಷಣೆಯನ್ನೂ, ಪುರುಷಪ್ರಧಾನ ವ್ಯವಸ್ಥೆಯಿಂದ ಕಳಚಿಕೊಳ್ಳುವ ಆಕೆಯ ಅಸಹಾ ಯಕ ಪ್ರಯತ್ನವನ್ನೂ ಕವಿತೆಗಳು ತೆರೆದಿಡುತ್ತವೆ. ಕೆ.ವಿ.ನಾರಾಯಣ ಅವರು ಹೇಳುವಂತೆ ‘‘ಸಬಿತಾ ಬನ್ನಾಡಿ ಅವರ ಕವಿತೆಗಳಲ್ಲಿ ಎರಡು ಬಗೆಗಳಿವೆ. ಸುತ್ತನ ಜಗತ್ತಿಗೆ ತೋರುವ ಕವಿತೆಗಳು ಒಂದು ಬಗೆಯವು. ತಮ್ಮ ಒಳಜಗತ್ತಿನ ಬೇರುಗಳನ್ನು ಬಗೆಯ ಹೊರಡುವ ಕವಿತೆಗಳು ಇನ್ನೊಂದು ಬಗೆಯವು. ಮೊದಲ ಬಗೆಯ ಕವಿತೆಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಮುಂಚೂಣಿಗೆ ಬಂದು ಕವಿತೆಗಳು ಆದಷ್ಟು ‘ಪೊಲಿಟಿಕಲ್ ಕರೆಕ್ಟ್’ ಆಗಲು ಯತ್ನಿಸುತ್ತದೆ. ಅಲ್ಲಿ ಸಬಿತಾ ಅವರ ಸ್ವಂತ ದನಿ ಕೇಳಿಸದಷ್ಟು ಮೆದುವಾಗಿರುತ್ತದೆ. ಎರಡನೆಯ ಬಗೆಯ ಕವಿತೆಗಳಲ್ಲಿ ತಮ್ಮದೇ ಆದ ನುಡಿಯೊಂದನ್ನು ಹುಡುಕಲು ಮುಂದಾಗುತ್ತಾರೆ. ಹೇಳಬೇಕಾದುದನ್ನು ಹೇಳುತ್ತಿದ್ದೇನೆ ಎನ್ನುವುದಕ್ಕಿಂತ ಹೇಳಬೇಕಾದ್ದೇನು ಎಂಬ ಹುಡುಕಾಟ, ಅದನ್ನು ಕಂಡುಕೊಳ್ಳುವ ತವಕಗಳು ಮುನ್ನೆಲೆಗೆ ಬರುತ್ತವೆ’’
ಕವಿ ಪ್ರಕಾಶನ ಹೊನ್ನಾವರ ಹೊರತಂದಿರುವ ಕೃತಿಯ ಒಟ್ಟು ಪುಟಗಳು 96. ಮುಖಬೆಲೆ 80 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News