ಗುಜರಾತ್‌ನಲ್ಲಿ ಕಾಂಗ್ರೆಸ್ ಹುಲಿ ಸವಾರಿ

Update: 2017-10-30 03:59 GMT

ಗುಜರಾತ್‌ನಲ್ಲಿ ಚುನಾವಣಾ ದಿನಾಂಕ ಘೋಷಣೆ ಮಾಡಲು ಆಯೋಗ ತೋರಿಸಿದ ಹಿಂಜರಿಕೆಯೇ, ಗುಜರಾತ್ ಚುನಾವಣೆಗೆ ಬಿಜೆಪಿ ಅಂಜುತ್ತಿದೆಯೆನ್ನುವ ಅಂಶವನ್ನು ಬಹಿರಂಗಪಡಿಸಿತ್ತು. ಒಂದು ರೀತಿಯಲ್ಲಿ, ಚುನಾವಣೆಗೆ ಮುನ್ನವೇ ಬಿಜೆಪಿ ತನ್ನ ಸೋಲನ್ನು ಒಪ್ಪಿಕೊಂಡಂತಿತ್ತು. ಗುಜರಾತ್‌ನಲ್ಲಿ ಬಿಜೆಪಿ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಮೊತ್ತ ಮೊದಲಾಗಿ, ಕೇಂದ್ರದಲ್ಲಿ ಮೋದಿ ಜಾದೂ ಮಂಕಾಗುತ್ತಿದೆ. ಮೋದಿಯ ಭಾಷಣಗಳು ಈಗ ಜನರನ್ನು ರೋಮಾಂಚನಗೊಳಿಸದೇ ಹಾಸ್ಯಕ್ಕೆ ವಸ್ತುವಾಗುತ್ತಿವೆ. ಗುಜರಾತ್‌ನ ಅಭಿವೃದ್ಧಿಯ ಬಣ್ಣ ಕಳಚಿ ಬಿದ್ದಿದೆ. ನೋಟು ನಿಷೇಧ ಮತ್ತು ಜಿಎಸ್‌ಟಿಯಿಂದಾಗಿ ಗುಜರಾತ್‌ನ ಬನಿಯಾಗಳು ತೀವ್ರ ಅಸಮಾಧಾನಗೊಂಡಿದ್ದಾರೆ.

ಜವಳಿ ಉದ್ಯಮಕ್ಕೆ ಜಿಎಸ್‌ಟಿ ಮಾರಕ ಏಟು ನೀಡಿದೆ. ಹಿಂದುತ್ವದ ಅಮಲು ಇಳಿದಿದ್ದು ಗುಜರಾತ್‌ನಲ್ಲೀಗ ಜಾತಿಯ ಗೋಡೆಗಳು ಸ್ಪಷ್ಟವಾಗಿ ಎದ್ದಿವೆ. ಗುಜರಾತ್ ಜನರನ್ನು ಮರುಳು ಮಾಡುವುದಕ್ಕೆ ಬೇಕಾದ ತಂತ್ರಗಳನ್ನೆಲ್ಲ ಕಳೆದುಕೊಂಡು ಬರಿಗೈಯಲ್ಲಿ ನಿಂತಿದ್ದಾರೆ ಬಿಜೆಪಿ ನಾಯಕರು. ಆದುದರಿಂದಲೇ, ಗುಜರಾತ್ ಚುನಾವಣೆಯನ್ನು ಮುಂದಕ್ಕೆ ಹಾಕಿ, ನರೇಂದ್ರ ಮೋದಿ ಕೊನೆಯ ಕ್ಷಣದಲ್ಲಿ ಗುಜರಾತ್‌ನಾದ್ಯಂತ ಪ್ರವಾಸ ಮಾಡಿ, ಹಲವು ಉಡುಗೊರೆಗಳನ್ನು ನೀಡಿದರು. ಆದರೆ ಈ ಉಡುಗೊರೆಗಳ ಹಿಂದಿರುವ ಉದ್ದೇಶ ತಿಳಿಯದಷ್ಟು ದಡ್ಡರೇನೂ ಅಲ್ಲ ಗುಜರಾತಿಗರು. ಈವರೆಗೆ ಸರಕಾರದ ಅಭಿವೃದ್ಧಿಯ ಮಂತ್ರದ ಬಲಿಪಶುಗಳು ಕೇವಲ ರೈತರು ಮಾತ್ರ ಆಗಿದ್ದರು. ನೋಟು ನಿಷೇಧ ಮತ್ತು ಜಿಎಸ್‌ಟಿ ಜಾರಿಯ ಬಳಿಕ ಸಣ್ಣ ಉದ್ದಿಮೆದಾರರೂ ಗುಜರಾತ್‌ನಲ್ಲಿ ತೀವ್ರ ಆಘಾತವನ್ನು ಅನುಭವಿಸಿದ್ದಾರೆ. ಬಿಜೆಪಿ ವ್ಯಾಪಾರಿಗಳನ್ನು ನೆಚ್ಚಿಕೊಂಡ ಪಕ್ಷ. ಇದೀಗ ಬಹುತೇಕ ವ್ಯಾಪಾರಿಗಳು ತಿರುಗಿ ಬಿದ್ದಿರುವುದರಿಂದ, ಗುಜರಾತ್ ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತಾಗಿದೆ.

ಗುಜರಾತ್‌ನಲ್ಲಿ ಬಿಜೆಪಿಯೇನಾದರೂ ಸೋತರೆ, ಅದರ ನೇರ ಹೊಣೆ ನರೇಂದ್ರ ಮೋದಿಯ ತಲೆಯ ಮೇಲೆ ಬೀಳುತ್ತದೆ. ಮೋದಿಯನ್ನು ಸೃಷ್ಟಿಸಿದ್ದು ಗುಜರಾತ್ ಆಗಿರುವುದರಿಂದ, ಅಲ್ಲಿನ ಸೋಲು ಮೋದಿಯ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಅಲ್ಲೇನಾದರೂ ಬಿಜೆಪಿ ನೆಲಕಚ್ಚಿದರೆ, ಅದು ದೇಶದ ಇತರೆಡೆಗೂ ವಿಸ್ತರಿಸಿಕೊಳ್ಳಲಿದೆ. ಮುಂದಿನ ಮಹಾ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ನೀಡಲಿದೆ. ಗುಜರಾತ್‌ನಲ್ಲಿ ಬಿಜೆಪಿ ಪಟೇಲರನ್ನು ಎದುರು ಹಾಕಿಕೊಂಡಿದೆ. ಪಾಟಿದಾರರ ಚಳವಳಿಯನ್ನು ಬಗ್ಗು ಬಡಿದುದು, ಅದರ ಮುಖಂಡನನ್ನು ಬಂಧಿಸಿದ್ದು ಪಟೇಲರಿಗೆ ಸಹಜವಾಗಿಯೇ ಬಿಜೆಪಿಯ ಮೇಲೆ ಸಿಟ್ಟು ತರಿಸಿದೆ. ಬಿಜೆಪಿಯನ್ನು ಸೋಲಿಸುವ ಮೂಲಕ ಪಾಟಿದಾರರಿಗೆ ತಮ್ಮ ಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ಆ ಮೂಲಕ, ಪಟೇಲ ಜಾತಿಯ ಮತಗಳ ಅನಿವಾರ್ಯತೆಯನ್ನು ಎಲ್ಲ ರಾಜಕೀಯ ಪಕ್ಷಗಳಿಗೆ ಸಾಬೀತು ಪಡಿಸುವುದು ಅವರ ಉದ್ದೇಶ.

ಈ ಕಾರಣದಿಂದಲೇ, ಈ ಬಾರಿ ಪಾಟಿದಾರ ಸಂಘಟನೆ ಕಾಂಗ್ರೆಸ್‌ನ ಜೊತೆಗೆ ಸೇರಿಕೊಂಡಿದೆ. ಹಾಗೆಯೇ ಹಿಂದುಳಿದ ಸಮುದಾಯದ ನಾಯಕ ಅಲ್ಪೇಶ್ ಕೂಡ ಕಾಂಗ್ರೆಸ್ ಜೊತೆಗಿದ್ದಾರೆ. ದಲಿತರು ಬಿಜೆಪಿಯಿಂದ ಸಂಪೂರ್ಣ ದೂರವಾಗಿದ್ದಾರೆ. ಹಿಂದುತ್ವದ ಮಂತ್ರ ಮೊದಲಿನಷ್ಟು ತೀವ್ರವಾಗಿಲ್ಲ. ಅಭಿವೃದ್ಧಿ ಮಂತ್ರ ಹಳಸಿದೆ. ಜಾತಿ ವಿಂಗಡನೆ ತೀವ್ರವಾಗಿದೆ. ಇವೆಲ್ಲವೂ ಬಿಜೆಪಿಗೆ ಹಿನ್ನ್ನಡೆಯೇ ಆಗಿದೆ. ಆದುದರಿಂದಲೇ ದೂರದಿಂದ ನೋಡುವಾಗ ವಾತಾವರಣ ಕಾಂಗ್ರೆಸ್‌ಗೆ ತುಸು ಪೂರಕವಾದಂತಿದೆ. ಇತ್ತೀಚೆಗೆ ಎರಡು ಸಮೀಕ್ಷೆಗಳು ಬಿಜೆಪಿಯ ಗೆಲುವನ್ನು ಹೇಳುತ್ತವೆಯಾದರೂ, ಅದು ಕೇಂದ್ರ ಸರಕಾರ ಪ್ರಾಯೋಜಿತ ಸಮೀಕ್ಷೆಯೆಂದು ಬಹುತೇಕರು ಅಭಿಪ್ರಾಯ ಪಡುತ್ತಿದ್ದಾರೆ. ಈ ಜಾತಿ ರಾಜಕಾರಣವನ್ನು ಕಾಂಗ್ರೆಸ್ ಪರಿಣಾಮಕಾರಿಯಾಗಿ ಬಳಸುವುದಕ್ಕೆ ಸಾಧ್ಯವೇ ಎನ್ನುವುದರಲ್ಲೇ ಅದರ ಅಳಿವು ಉಳಿವು ನಿಂತಿದೆ.

ಇಷ್ಟಕ್ಕೂ ಪಾಟಿದಾರರು ಕೊನೆಯವರೆಗೂ ಕಾಂಗ್ರೆಸ್ ಜೊತೆಗೆ ಇರುತ್ತಾರೆ ಎನ್ನುವುದರ ಭರವಸೆಯಿಲ್ಲ. ಪಟೇಲರು ಗುಜರಾತ್‌ನ ಪ್ರಬಲ ಸಮುದಾಯ. ಮೀಸಲಾತಿಗಾಗಿ ಅದರ ನಾಯಕರು ಇದೀಗ ಬೀದಿಗಿಳಿದಿದ್ದಾರೆ. ರಾಜಕೀಯವಾಗಿ, ಸಾಮಾಜಿಕವಾಗಿ ಯಾವ ರೀತಿಯಲ್ಲೂ ದುರ್ಬಲರಲ್ಲದ, ರಾಜಕೀಯದಲ್ಲಿ ಅತೀ ಹೆಚ್ಚು ಭಾಗೀದಾರಿಕೆಯನ್ನು ಹೊಂದಿರುವ ಪಟೇಲರು ಮೀಸಲಾತಿಯನ್ನು ಕೇಳುತ್ತಿರುವುದೇ ಸಂವಿಧಾನ ವಿರೋಧಿ ಅಂಶವಾಗಿದೆ. ಮೀಸಲಾತಿಯಿರುವುದು ದುರ್ಬಲರನ್ನು ಮೇಲೆತ್ತುವುದಕ್ಕಾಗಿ. ಒಂದು ವೇಳೆ ಪಟೇಲರಿಗೆ ಮೀಸಲಾತಿಯನ್ನು ನೀಡಿದರೆ ಅದು ಅವರನ್ನು ಇನ್ನಷ್ಟು ಪ್ರಬಲರನ್ನಾಗಿ ಮಾಡುವುದಲ್ಲದೆ, ದುರ್ಬಲ ಜಾತಿಗಳನ್ನು ಇನ್ನಷ್ಟು ಶೋಷಣೆಗೆ ತಳ್ಳುತ್ತದೆ. ಕೋರೆ ಹಲ್ಲುಗಳಿರುವ ತೋಳಕ್ಕೆ ಇನ್ನೂ ಎರಡು ಕೋರೆ ಹಲ್ಲುಗಳನ್ನು ಜೋಡಿಸಿದಂತೆಯೇ ಸರಿ.

ಇದೀಗ ಪಾಟಿದಾರರು, ಮೀಸಲಾತಿ ಕುರಿತಂತೆ ತನ್ನ ನಿರ್ಣಯವನ್ನು ತಿಳಿಸುವಂತೆ ಕಾಂಗ್ರೆಸ್ ಮುಖಂಡರಿಗೆ ಸಮಯವನ್ನು ಕೊಟ್ಟಿದೆ. ಕಾಂಗ್ರೆಸ್ ಈಗ ಯಾವ ತೀರ್ಮಾನವನ್ನೂ ಮಾಡಲು ಸಾಧ್ಯವಾಗದೆ ಇಕ್ಕಟ್ಟಿನಲ್ಲಿದೆ. ಪಾಟಿದಾರರನ್ನು ಓಲೈಸಲು ಮುಂದಾದರೆ ಅದರಿಂದ ಅವರು ಸಹಜವಾಗಿಯೇ ಇತರ ಹಿಂದುಳಿದ ವರ್ಗಗಳ ನಿಷ್ಠುರವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಅವರು, ಪಟೇಲರಿಗೆ ಮೀಸಲಾತಿ ನೀಡುವುದಕ್ಕೆ ವಿರೋಧವಾಗಿದ್ದಾರೆ. ಅಷ್ಟೇ ಅಲ್ಲ, ಗುಜರಾತ್‌ನಲ್ಲಿ ದಲಿತರು ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದಾರೆ. ಪಟೇಲರನ್ನು ಇನ್ನಷ್ಟು ಕೊಬ್ಬಿಸಿದರೆ, ಅದರ ಪರಿಣಾಮವನ್ನು ತಳಸ್ತರದಲ್ಲಿರುವ ಸಮುದಾಯ ಎದುರಿಸಬೇಕಾಗುತ್ತದೆ. ಕಾಂಗ್ರೆಸ್‌ಗೆ ಈ ಎಚ್ಚರಿಕೆ ಬೇಕಾಗುತ್ತದೆ. ಪಟೇಲರಿಗೆ ಪ್ರಭುತ್ವವನ್ನು ನಿಯಂತ್ರಿಸುವ ಶಕ್ತಿಯಿದೆ.

ಅವರು ಕೊನೆಯವರೆಗೆ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಳ್ಳುವವರು ಅಲ್ಲ. ಕಾಂಗ್ರೆಸ್‌ನ್ನು ಬೆಂಬಲಿಸಿದಂತೆ ಮಾಡಿ, ಬಿಜೆಪಿಯನ್ನು ಬ್ಲಾಕ್‌ಮೇಲ್ ಮಾಡಲು ಹೊರಟಿದ್ದಾರೆಯೇ. ಹೊರತು, ಪಟೇಲರು ಪಕ್ಕಾ ಜಾತ್ಯತೀತ ಮನಸ್ಥಿತಿಯನ್ನು ಹೊಂದಿದವರೇನೂ ಅಲ್ಲ. ತಳಸ್ತರದ ಜನರು ಸ್ವಾಭಿಮಾನದಿಂದ ಎದ್ದು ನಿಲ್ಲುವುದು ಅವರಿಂದ ಸಹಿಸುವುದಕ್ಕೆ ಅಸಾಧ್ಯವಾಗಿರುವುದರಿಂದಲೇ, ಮೀಸಲಾತಿಯನ್ನು ಕೇಳುತ್ತಿದ್ದಾರೆ. ಸದ್ಯದ ಅಗತ್ಯಕ್ಕಾಗಿ, ಪಟೇಲರಿಗೆ ಮೀಸಲಾತಿ ನೀಡುವ ಭರವಸೆಯನ್ನು ನೀಡಿದರೆ ಅದರಿಂದ ಕಾಂಗ್ರೆಸ್‌ಗೆ ಇನ್ನಷ್ಟು ಅಪಾಯಗಳಿವೆ. ಉಳಿದ ಹಿಂದುಳಿದ ವರ್ಗಗಳ ಜನರು ಕಾಂಗ್ರೆಸ್‌ನ್ನು ಕೈ ಬಿಡುವ ಎಲ್ಲ ಸಾಧ್ಯತೆಗಳಿವೆ. ಆದುದರಿಂದ ಪಟೇಲ್ ಸಮುದಾಯದ ಸಹವಾಸ ಕಾಂಗ್ರೆಸ್ ಪಾಲಿಗೆ ಹುಲಿ ಸವಾರಿಯೇ ಸರಿ. ಈ ಸವಾರಿಯಿಂದ ಹಿಂದೆ ಸರಿದರೆ ಅದೇ ಹುಲಿ ಕಾಂಗ್ರೆಸ್‌ನ್ನು ಮುಗಿಸಿ ಬಿಡಬಹುದು. ಇಂತಹ ಸಂದರ್ಭದಲ್ಲಿ ಎಲ್ಲ ಜಾತಿ, ಸಮುದಾಯವನ್ನು ತೆಕ್ಕೆಗೆ ತೆಗೆದುಕೊಳ್ಳುವಂತಹ ದೂರದೃಷ್ಟಿಯ ತೀರ್ಮಾನವನ್ನು ತೆಗೆದುಕೊಳ್ಳುವ ಮುತ್ಸದ್ದಿಯೊಬ್ಬನ ಅಗತ್ಯ ಕಾಂಗ್ರೆಸ್‌ಗೆ ಗುಜರಾತ್‌ನಲ್ಲಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News