ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ನಿವೃತ್ತ ಯೋಧರ ಟೆಂಟ್‌ಗಳನ್ನು ಕಿತ್ತೆಸೆದರು!

Update: 2017-10-30 13:24 GMT

ಹೊಸದಿಲ್ಲಿ,ಅ.30: ದಿಲ್ಲಿಯ ಐತಿಹಾಸಿಕ ಜಂತರ್ ಮಂತರ್ ಪ್ರದೇಶದಲ್ಲಿ ಪ್ರತಿಭಟನೆಗಳು ಮತ್ತು ಧರಣಿಗಳನ್ನು ನಿಷೇಧಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ದ ಆದೇಶದ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಪೌರಾಡಳಿತದ ಅಧಿಕಾರಿಗಳು ‘ಸಮಾನ ಶ್ರೇಣಿ ಸಮಾನ ಪಿಂಚಣಿ(ಒಆರ್‌ಒಪಿ)’ ಯೋಜನೆಯ ಜಾರಿಗಾಗಿ ಒತ್ತಾಯಿಸುತ್ತಿರುವ ಪ್ರತಿಭಟನಾನಿರತ ಮಾಜಿ ಯೋಧರು ಅಲ್ಲಿ ಹಾಕಿಕೊಂಡಿದ್ದ ಟೆಂಟ್‌ಗಳು ಮತ್ತು ತಾತ್ಕಾಲಿಕ ರಚನೆಗಳನ್ನು ಸೋಮವಾರ ನೆಲಸಮಗೊಳಿಸಿದರು. ಮಾಜಿ ಯೋಧರು ಕಳೆದ ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ಇಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಎನಜಿಟಿಯ ಆದೇಶದ ಕುರಿತು ತಾವು ಪ್ರತಿಭಟನಾ ನಿರತರಿಗೆ ಮೊದಲೇ ತಿಳಿಸಿದ್ದೆವು ಮತ್ತು ಜಂತರ್-ಮಂತರ್‌ನಿಂದ ತೆರವುಗೊಳ್ಳುವಂತೆ ಇಲ್ಲವೇ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತರುವಂತೆ ಸೂಚಿಸಿದ್ದೆವು ಎಂದು ಪೊಲೀಸರು ಹೇಳಿದರು.

ಜೆಸಿಬಿಯೊಂದಿಗೆ ಬಂದಿದ್ದ ಪೊಲೀಸರು ಮತ್ತು ದಿಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ನಮ್ಮ ಟೆಂಟ್‌ಗಳನ್ನು ನೆಲಸಮಗೊಳಿಸಿದ್ದಾರೆ. ಅವರು ನಮ್ಮ ಉಪಕರಣಗಳು ಮತ್ತು ಹಾಸಿಗೆಗಳಂತಹ ಸೊತ್ತುಗಳನ್ನೂ ಹೊತ್ತೊಯ್ದಿದ್ದಾರೆ ಎಂದು ಹೇಳಿದ ಪ್ರತಿಭಟನೆಯ ನೇತಾರರಲ್ಲೋರ್ವರಾದ ಮೇ.ಜ.(ನಿವೃತ್ತ)ಸತ್ಬೀರ್ ಸಿಂಗ್ ಅವರು, ಇದು ಪ್ರಜಾಪ್ರಭುತ್ವದಲ್ಲಿ ನಮ್ಮ ಧ್ವನಿಯನ್ನು ಅಡಗಿಸುವ ಪ್ರಯತ್ನವಾಗಿದೆ. ಎನ್‌ಜಿಟಿಯು ಆದೇಶವನ್ನು ಹೊರಡಿಸಿದ್ದರೂ ಅದರ ಜಾರಿಗೆ ಬೇರೆ ಮಾರ್ಗಗಳಿದ್ದವು. ಅವರು ತುಂಬ ಅನ್ಯಾಯವನ್ನು ಮಾಡಿದ್ದಾರೆ ಎಂದರು. ತೆರವು ಕಾರ್ಯಾಚರಣೆ ವೇಳೆ ಮಾಜಿ ಯೋಧರೋರ್ವರ ಪತ್ನಿ ಟೆಂಟ್‌ನಲ್ಲಿದ್ದರು ಎಂದ ಅವರು, ಆದರೆ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಜಂತರ್ ಮಂತರ್ ರಸ್ತೆಯಲ್ಲಿ ನಡೆಯುವ ಜಾಥಾಗಳು ಮತ್ತು ಪ್ರತಿಭಟನೆಗಳು ಪ್ರದೇಶದಲ್ಲಿ ಶಬ್ದಮಾಲಿನ್ಯಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ದೂರಿಕೊಂಡು ವರುಣ್ ಸೇಠ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಎನ್‌ಜಿಟಿಯು ಈ ಪ್ರದೇಶದಲ್ಲಿ ಎಲ್ಲ ಪ್ರತಿಭಟನೆಗಳು ಮತ್ತು ಧರಣಿಗಳನ್ನು ನಿಷೇಧಿಸಿ ಅ.5ರಂದು ಆದೇಶಿಸಿತ್ತು. ಐದು ವಾರಗಳಲ್ಲಿ ಪಾಲನಾ ವರದಿಗಳನ್ನು ಸಲ್ಲಿಸುವಂತೆಯೂ ಅದು ಎನ್‌ಡಿಎಂಸಿ,ಪೊಲೀಸ್ ಮತ್ತು ದಿಲ್ಲಿ ಸರಕಾರಕ್ಕೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News