ಭಾರತ ಏನಿದ್ದರೂ ಹಿಂದೂಗಳ ದೇಶ, ಉಳಿದವರು ಆ ಬಳಿಕ: ಶಿವಸೇನೆ ಹೇಳಿಕೆ

Update: 2017-10-30 13:35 GMT

ಮುಂಬೈ, ಅ.30: ಭಾರತ ಏನಿದ್ದರೂ ಮೊದಲು ಹಿಂದೂಗಳ ದೇಶ. ಆ ಬಳಿಕ ಉಳಿದವರಿಗೆ ಎಂದು ಶೀವಸೇನೆ ಹೇಳಿಕೆ ನೀಡಿದೆ.

ಹಿಂದೂಸ್ತಾನವು ಹಿಂದೂಗಳ ದೇಶವಾಗಿದೆ. ಆದರೆ ಇತರರಿಗೆ ಈ ದೇಶ ಸೇರಿಲ್ಲ ಎಂದು ಇದರರ್ಥವಲ್ಲ ಎಂದು ಶುಕ್ರವಾರ ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ಹೇಳಿಕೆಯನ್ನು ಉಲ್ಲೇಖಿಸಿದ ಶಿವಸೇನೆ, ಭಾರತ ಏನಿದ್ದರೂ ಹಿಂದೂಗಳ ದೇಶ. ಯಾಕೆಂದರೆ ಮುಸ್ಲಿಮರಿಗೆ 50ಕ್ಕೂ ಹೆಚ್ಚು ದೇಶಗಳಿವೆ. ಕ್ರೈಸ್ತರಿಗೆ ಅಮೆರಿಕ ಹಾಗೂ ಯುರೋಪ್‌ನಲ್ಲಿ ಕೆಲವು ರಾಷ್ಟ್ರಗಳಿವೆ, ಬೌದ್ಧ ಧರ್ಮೀಯರಿಗೆ ಚೀನಾ, ಜಪಾನ್, ಶ್ರೀಲಂಕಾ ಹಾಗೂ ಮ್ಯಾನ್ಮಾರ್ ದೇಶಗಳಿವೆ. ಆದರೆ ಹಿಂದೂಗಳಿಗೆ ಈ ದೇಶ ಬಿಟ್ಟರೆ ಬೇರೆ ದೇಶವಿಲ್ಲ ಎಂದು ಪಕ್ಷದ ಮುಖವಾಣಿ ‘ಸಾಮ್ನ’ದ ಸಂಪಾದಕೀಯ ಬರಹದಲ್ಲಿ ತಿಳಿಸಿದೆ.

ಕೇಂದ್ರದಲ್ಲಿ ಹಿಂದುತ್ವ ಪರವಾದ ಸರಕಾರ ಇದ್ದರೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕಾಶ್ಮೀರದಿಂದ ಹೊರದೂಡಲ್ಪಟ್ಟಿರುವ ಕಾಶ್ಮೀರಿ ಪಂಡಿತರ ‘ಘರ್ ವಾಪ್ಸಿ’ ಮುಂತಾದ ವಿಷಯಗಳು ಇನ್ನೂ ಬಗೆಹರಿದಿಲ್ಲ ಎಂದು ಶಿವಸೇನೆ ಹೇಳಿದೆ.

  ರಾಷ್ಟ್ರಪತಿ ಮತ್ತು ಪ್ರಧಾನಿ ಆರೆಸ್ಸೆಸ್ ಚಿಂತನೆಯ ಹಿನ್ನೆಲೆಯವರಾಗಿದ್ದರೂ ಸಿನೆಮ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವ ವಿಷಯದಲ್ಲಿ ಇನ್ನೂ ಖಚಿತ ನಿರ್ಧಾರಕ್ಕೆ ಬರಲಾಗಿಲ್ಲ. ಸಿನೆಮ ಮಂದಿರದಲ್ಲಿ ರಾಷ್ಟ್ರಗೀತೆ ನುಡಿಸುವಾಗ ಎದ್ದು ನಿಲ್ಲುವುದು ಸರಿಯಲ್ಲ ಎಂಬುದು ಇತರರ ಅಭಿಪ್ರಾಯವಾಗಿದೆ. ಈ ‘ಇತರರು’ ಎದ್ದುನಿಲ್ಲಲು ನಿರಾಕರಿಸುವ ಮೂಲಕ ರಾಷ್ಟ್ರಗೀತೆಗೆ ಅವಮಾನ ಮಾಡುತ್ತಿದ್ದಾರೆ ಎಂದಾದರೆ , ಇವರ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಕುರಿತು ಆರೆಸ್ಸೆಸ್ ಮುಖಂಡರು ಹಿಂದುತ್ವ ಪರ ಸರಕಾರಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಶಿವಸೇನೆ ಹೇಳಿದೆ.

 ಯಾವುದೇ ಪಕ್ಷ ಅಥವಾ ನಾಯಕನಿಂದ ದೇಶಕ್ಕೆ ಶ್ರೇಷ್ಠತೆ ದೊರಕುವುದಿಲ್ಲ ಎಂಬ ಮೋಹನ್ ಭಾಗ್ವತ್ ಹೇಳಿಕೆಯನ್ನು ನಿರ್ಲಕ್ಷಿಸಲಾಗದು ಎಂದೂ ಶಿವಸೇನೆ ಹೇಳಿದೆ.

ಶಿವಸೇನೆಯು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಯ ಮೈತ್ರಿಕೂಟದ ಘಟಕವಾಗಿದ್ದು ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಮಿತ್ರಪಕ್ಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News