ಎಣ್ಣೆ ಬತ್ತಿದ ಲಾಟೀನಿನ ಬೆಳಕಿನಲ್ಲಿ....

Update: 2017-10-30 18:45 GMT

ಈಗಾಗಲೇ ತಮ್ಮ ಕತೆಗಳು ಮತ್ತು ಲೇಖನಗಳ ಮೂಲಕ ಗುರುತಿಸಿಕೊಂಡಿರುವ ಎ.ಕೆ. ಕುಕ್ಕಿಲ ಅವರ ಉಮ್ರಾ ಅನುಭವವನ್ನು ಹೇಳುವ ವಿಭಿನ್ನ ಕೃತಿ ‘‘ಎಣ್ಣೆ ಬತ್ತಿ ಲಾಟೀನು’’. ಉಮ್ರಾ-ಪ್ರವಾಸ ಮುಸ್ಲಿಮರ ಪಾಲಿಗೆ ಒಂದು ಧಾರ್ಮಿಕ ವಿಧಿಯಾಗಿದೆ. ಆದರೆ ಒಬ್ಬ ಸೃಜನಶೀಲ ಲೇಖಕನಿಗೆ ಅದು ಕೇವಲ ಒಂದು ಪ್ರವಾಸವಷ್ಟೇ ಅಲ್ಲ. ಹಾಗೆಯೇ ಅದು ಕೇವಲ ಧಾರ್ಮಿಕ ವಿಧಿಯೂ ಅಲ್ಲ. ಆತನಿಗೆ ಅದರಾಚೆಗೆ ನೋಡುವ ಹಲವು ಅವಕಾಶಗಳಿರುತ್ತವೆ. ಈ ಕಾರಣದಿಂದಲೇ ಕುಕ್ಕಿಲ ಅವರ ಕೃತಿ ಒಂದು ಆಧ್ಯಾತ್ಮಿಕ ಅನುಭವ ಮಾತ್ರವಲ್ಲ. ಈ ಕೃತಿ, ಇತಿಹಾಸ, ವರ್ತಮಾನವನ್ನು ಬೆಸೆಯುವ ಪ್ರಯತ್ನವನ್ನು ಮಾಡುತ್ತದೆಯಲ್ಲದೆ, ಆ ಮೂಲಕ ಮನುಷ್ಯ ತನ್ನ ಹೊಸ ಭವಿಷ್ಯವನ್ನು ರೂಪಿಸಿಕೊಳ್ಳುವ ಆಶಯವನ್ನು ಪ್ರಕಟಿಸುತ್ತದೆ. ಹಿರಿಯ ಲೇಖಕ ಬಿ. ಎಂ. ಹನೀಫ್ ಈ ಕುರಿತಂತೆ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ ‘‘ನನ್ನ ಪ್ರಕಾರ ಇದು ಕೇವಲ ಒಂದು ಪ್ರವಾಸ ಕಥನವಲ್ಲ. ಮಂಗಳೂರಿನಿಂದ ಮಕ್ಕಾದವರೆಗೆ ಹೋಗಿ ಬಂದ ನೀವು ಅಲ್ಲಿ ಹೆಜ್ಜೆ ಹೆಜ್ಜೆಗೂ ಇಸ್ಲಾಮಿನ ಹೆಜ್ಜೆ ಗುರುತುಗಳನ್ನು ವಿಶ್ಲೇಷಿಸಿದ ಅತ್ಯಪೂರ್ವ ವೈಚಾರಿಕ ಓದು ಇದು. ಇಸ್ಲಾಮಿ ಇತಿಹಾಸದ ತಳಸ್ಪರ್ಶಿ ಓದಿನ ಹಿನ್ನೆಲೆ ಇದ್ದುದರಿಂದಲೇ ಈ ಓದಿಗೆ ಭಾವುಕ ಸ್ಪರ್ಶದ ಜೊತೆಗೆ ಒಂದು ವೈಚಾರಿಕ ಗಾಂಭೀರ್ಯವೂ ದಕ್ಕಿದೆ. ಒಂದು ಅಪರಿಚಿತ ಸ್ಥಳವನ್ನು ನೋಡುತ್ತಾ ಅಕ್ಷರಗಳಲ್ಲಿ ಅದು ಜೀವಂತವಾಗುವಂತೆ ವಿವರಿಸುವುದು ಬೇರೆ, ಸಮಕಾಲೀನ ಸಂದರ್ಭದ ಎಚ್ಚರವನ್ನು ಇಟ್ಟುಕೊಂಡು, ಇತಿಹಾಸದ ಪಳೆಯುಳಿಕೆಗಳನ್ನು ಸ್ಪರ್ಶಿಸಿ ಓದುಗರ ದರ್ಶನಕ್ಕೆ ದಕ್ಕಿಸುವುದೇ ಬೇರೆ. ನಿಮ್ಮದು ಎರಡನೆಯ ಕ್ರಮದ ಬರವಣಿಗೆ. ಅದು ಪುಸ್ತಕದ ಉದ್ದಕ್ಕೂ ಕಣ್ಣಿಗೆ ಕಟ್ಟುವಂತಿದೆ. ನಿಜಕ್ಕೂ ಅಂತಃಕರಣವುಳ್ಳ, ಕವಿ ಹೃದಯದ ಲೇಖಕನೊಬ್ಬ ಮಾತ್ರ ಹೀಗೆ ಇತಿಹಾಸ ಮತ್ತು ವರ್ತಮಾನದ ಮಧ್ಯೆಯ ಬಿಂದುವಿನಲ್ಲಿ ನಿಂತುಕೊಂಡು ಖಚಿತವಾಗಿ ಯೋಚಿಸಬಲ್ಲ’’
ಕೇವಲ ಧಾರ್ಮಿಕ ವ್ಯಕ್ತಿಯಾಗಿ ಕುಕ್ಕಿಲ ಈ ಕೃತಿಯನ್ನು ಬರೆದಿದ್ದರೆ ಅದು ಮುಸ್ಲಿಮರಿಗಷ್ಟೇ ಸೀಮಿತವಾಗುತ್ತಿತ್ತೇನೋ. ಆದರೆ ಈ ಕೃತಿ ಅಂತಹ ಗೆರೆಗಳನ್ನು ದಾಟಿ, ಎಲ್ಲ ಪ್ರವಾಸಿಗರಿಗೂ, ಎಲ್ಲ ಅಧ್ಯಾತ್ಮ ದರ್ಶಕರಿಗೂ ಅನ್ವಯವಾಗುತ್ತದೆ. ಉಮ್ರಾ, ಹಜ್‌ನಂತಹ ಸಂಗತಿಗಳು ಇಂದಿಗೂ ಮುಸ್ಲಿಮೇತರರಿಗೆ ನಿಗೂಢ ಮತ್ತು ಅನ್ಯ ವಿಷಯವಾಗಿರುವ ಈ ಸಂದರ್ಭದಲ್ಲಿ ಈ ಕೃತಿ ಇಸ್ಲಾಮ್ ಧರ್ಮದ ಕುರಿತಂತೆ ಅವರಲ್ಲಿ ಹೆಚ್ಚು ಆಸಕ್ತಿಯನ್ನು ಹುಟ್ಟಿಸಬಹುದು. ಒಟ್ಟು 15 ಅಧ್ಯಾಯಗಳನ್ನೊಳಗೊಂಡ ಈ ಕೃತಿ, ಉಮ್ರಾ ಯಾತ್ರೆಯ ತಯಾರಿ, ಪ್ರಯಾಣದ ಪ್ರಕ್ರಿಯೆಗಳು, ನೆರವೇರಿಸಬೇಕಾದ ಧಾರ್ಮಿಕ ಕ್ರಿಯೆಗಳು, ಅದರ ಹಿಂದಿರುವ ಉದ್ದೇಶ, ಅದು ನಮ್ಮಿಳಗೆ ಮಾಡುವ ಪರಿವರ್ತನೆ, ಇಸ್ಲಾಮಿನ ಇತಿಹಾಸ, ಸ್ಥಳವಿವರಣೆ, ಅಂದು ಮತ್ತು ಇಂದಿನ ನಡುವಿನ ವ್ಯತ್ಯಾಸ ಇವೆಲ್ಲವುಗಳನ್ನು ಸಂಕ್ಷಿಪ್ತವಾಗಿ ಕಥನ ರೂಪದಲ್ಲಿ ಲೇಖಕರು ತೆರೆದಿಟ್ಟಿದ್ದಾರೆ. ಓದು ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 112. ಕೃತಿಯ ಮುಖಬೆಲೆ 130. ಆಸಕ್ತರು 98800 96128 ದೂರವಾಣಿಯನ್ನು ಸಂಪರ್ಕಿಸಬಹುದು. 

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News