ವಾಟ್ಸ್ ಆ್ಯಪ್ ಮೂಲಕ ತಿರುಚಿದ ಚಿತ್ರ ರವಾನಿಸಿದ ಇಬ್ಬರ ಬಂಧನ

Update: 2017-10-31 11:22 GMT

ಲಕ್ನೋ, ಅ.31 : ಜಗದ್ವಿಖ್ಯಾತ ಸ್ಮಾರಕ ಆಗ್ರಾದ ತಾಜ್ ಮಹಲ್ ನ ತಿರುಚಿದ ಚಿತ್ರವೊಂದನ್ನು ವಾಟ್ಸ್ ಅಪ್ ನಲ್ಲಿ  ಪೋಸ್ಟ್ ಮಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಇಲ್ಲಿನ ವಿಶೇಷ ಕಾರ್ಯ ಪಡೆಯು ಉತ್ತರ ಪ್ರದೇಶ ನವನಿರ್ಮಾಣ್ ಸೇನಾ ನಾಯಕ ಅಮಿತ್ ಜನಿ ಹಾಗೂ ಆತನ ಸಹವರ್ತಿ ಉಪದೇಶ್ ರಾಣಾ ಎಂಬಾತನನ್ನು ಬಂಧಿಸಿದೆ. 

ವಾಟ್ಸ್ಆ್ಯಪ್ ಗ್ರೂಪ್ ಮೂಲಕ  ಹರಡಿದ ತಿರುಚಿದ ಚಿತ್ರದಲ್ಲಿ ತಾಜ್ ಮಹಲ್ ತುತ್ತತುದಿಯಲ್ಲಿ ಹಾಗೂ ಅದರ ಮಿನಾರ್ ಗಳಲ್ಲಿ ಏಳು ಕೇಸರಿ ಧ್ವಜಗಳನ್ನು ಕಾಣಿಸಲಾಗಿದೆ. ಜನಿ ವಿರುದ್ಧ ಐಪಿಸಿ ಸೆಕ್ಷನ್ 153ಬಿ, 295 ಹಾಗೂ ಐಟಿ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

ತಮ್ಮ ವಾಟ್ಸ್ಆ್ಯಪ್ ಪೋಸ್ಟ್ ನಲ್ಲಿ ಜನಿ ಅವರು ಸಂಘಪರಿವಾರದ ಸಂಘಟನೆಗಳಿಗೆ ಸೇರಿದವರೆಲ್ಲರನ್ನೂ ನವೆಂಬರ್ 3ರಂದು ತಾಜಮಹಲ್ ಬಳಿ ಜಮಾಯಿಸುವಂತೆ ಕರೆ ನೀಡಿದ್ದು,  ಇದು ಆಗ್ರಾದಲ್ಲಿ ಹಲವು ವದಂತಿಗಳಿಗೆ ಹಾಗೂ ಭಯಕ್ಕೂ ಕಾರಣವಾಗಿತ್ತು.

ಲಕ್ನೋದ ಗೋಮತಿ ನಗರ್ ಪ್ರದೇಶದಲ್ಲಿ 2012ರಲ್ಲಿ  ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಪ್ರತಿಮೆಯನ್ನು ಹಾನಿಗೊಳಿಸಿದ್ದಕ್ಕಾಗಿ ಜನಿ ಅವರಿಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿತ್ತು, ಜನಿ ಅವರ ಮೂಲ ಹೆಸರು ಅಮಿತ್ ಅರ್ಗವಾಲ್ ಆಗಿದ್ದು, ಮೀರತ್ ಜಿಲ್ಲೆಯ ಜನಿಖರ್ಡ್  ನಿವಾಸಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News