ಚಿಕ್ಕಮಗಳೂರು ಜಿಲ್ಲಾಧಿಕಾರಿಯಿಂದ ನಾಡಗೀತೆಗೆ ಅಪಮಾನ: ಆರೋಪ

Update: 2017-11-01 10:49 GMT

ಚಿಕ್ಕಮಗಳೂರು, ನ.1: ಕನ್ನಡ ರಾಜ್ಯೋತ್ಸವದಂದೇ ಚಿಕ್ಕಮಗಳೂರು ಜಿಲ್ಲಾಧಿಕಾರಿಯಿಂದ ನಾಡಗೀತೆಗೆ ಅಪಮಾನವಾಗಿದೆ ಎಂಬ ಆರೋಪ ಕೇಳಿಬಂದಿದೆ.

 ರಾಜ್ಯೋತ್ಸವದ ಅಂಗವಾಗಿ ಬುಧವಾರ ನಗರದ ನೇತಾಜಿ ಸುಭಾಶ್ಚಂದ್ರ ಭೋಸ್ ಜಿಲ್ಲಾ ಮೈದಾನದಲ್ಲಿ ಧ್ವಜಾರೋಹಣದ ಬಳಿಕ ನಾಡಗೀತೆ ಹಾಡುತ್ತಿದ್ದಾಗಲೇ ಜಿಲ್ಲಾಧಿಕಾರಿ ಶ್ರೀರಂಗಯ್ಯ ಪೆರೇಡ್ ನಡೆಸಿದ್ದಾರೆ. ಇದು ನಾಡಗೀತೆಗೆ ಜಿಲ್ಲಾಧಿಕಾರಿ ಮಾಡಿದ ಅಪಮಾನ ಎಂದು ಹೇಳಲಾಗುತ್ತಿದೆ.
 
ಧ್ವಜಾರೋಹಣದ ಬಳಿಕ ಮಕ್ಕಳು ರಾಷ್ಟ್ರಗೀತೆ ಹಾಡಿದರು. ಬಳಿಕ ನಾಡಗೀತೆ ಹಾಡಲು ಆರಂಭಿಸಿದರು. ಆದರೆ ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ಜಿಲ್ಲಾಧಿಕಾರಿ ಶ್ರೀರಂಗಯ್ಯ ವೇದಿಕೆಯಿಂದ ಕೆಳಗಿಳಿದು ತೆರದ ಜೀಪ್ ಏರಿ ಪಥಸಂಚಲನ ತಂಡಗಳಿಗೆ ಗೌರವ ನೀಡಲು ತೆರಳಿದರು. ಅವರು ಎಲ್ಲಾ ಪರೇಡ್ ತುಕಡಿಗಳಿಗೆ ಗೌರವ ಸೂಚಿಸಿ ಬರುವವರೆಗೂ ಮಕ್ಕಳು ನಾಡಗೀತೆಯನ್ನ ಹಾಡುತ್ತಲೇ ಇದ್ದರು.

ಜಿಲ್ಲಾಮಟ್ಟದ ಈ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ, ಜಿಲ್ಲಾ ಎಸ್ಪಿಅಣ್ಣಾಮಲೈ, ಮಾಲತೇಶ್ ಮತ್ತಿತರರು ಉಪಸ್ಥಿತರಿದ್ದರು.

ನಾಡಗೀತೆ ವೇಳೆ ನಿಂತು ಗೌರವ ನೀಡದ ಜಿಲ್ಲಾಧಿಕಾರಿಯವರ ಈ ನಡೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಜಿಲ್ಲಾಧಿಕಾರಿಗಳಿಂದ ವಿಷಾದ
ನಗರದ ಸುಭಾಷ್ ಚಂದ್ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣದ ನಂತರ ಧ್ವಜ ವಂದನೆ ಸ್ವೀಕರಿಸುವುದು ವಾಡಿಕೆ. ಅದರಂತೆ ಧ್ವಜವಂದನೆ ಸ್ವೀಕರಿಸಲು ಪೆÇಲೀಸ್ ಇಲಾಖೆಯಿಂದ ನೇಮಿಸಿದ ಅಧಿಕಾರಿಗಳ ಆಹ್ವಾನದ ಮೇರೆಗೆ ಧ್ವಜವಂದನೆಗೆ ತೆರಳಲಾಯಿತು. 
ಈ ಸಂದರ್ಭದಲ್ಲಿ ನಿರೂಪಕಿಯರು ನಾಡಗೀತೆ ಹಾಡಲು ಘೋಷಿಸಿದರು. ಧ್ವಜವಂದನೆಯ ನಂತರ ನಾಡಗೀತೆ ಹಾಡಲು ಪ್ರಕಟಿಸಬೇಕಿತ್ತು ನಿರೂಪಕಿಯರು ಮಾಡಿದ ತಪ್ಪಿನಿಂದಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News