ಮೋದಿ ಬಂದ ಮೇಲೆ ಮಾತೃಭಾಷೆಗಳಿಗೆ ಹೊಡೆತ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2017-11-01 16:23 GMT

ಬೆಂಗಳೂರು, ನ.01: ಮೋದಿ ನೇತೃತ್ವದ ಕೇಂದ್ರ ಸರಕಾರ ಆಡಳಿತಕ್ಕೆ ಬಂದ ಮೇಲೆ ಇಂಗ್ಲಿಷ್ ಹಾಗೂ ಹಿಂದಿಗೆ ಹೆಚ್ಚಿನ ಮಹತ್ವ ಸಿಗುತ್ತಿದ್ದು, ಇದರಿಂದ ದೇಶದ ಮಾತೃಭಾಷೆಗಳಿಗೆ ಹೊಡೆತ ಬೀಳುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಗಾಂಧಿ ಭವನದಲ್ಲಿ ಸಪ್ನ ಬುಕ್ ಹೌಸ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಪ್ನ ಸುವರ್ಣ ಸಂಭ್ರಮ ಆಚರಣೆಯ ಅಂಗವಾಗಿ ಕನ್ನಡದ 50 ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ 22 ಮಾತೃಭಾಷೆಗಳಿದ್ದು, ಅವುಗಳನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರಕಾರ ಆಡಳಿತಕ್ಕೆ ಬಂದ ಮೇಲೆ ಇಂಗ್ಲಿಷ್ ಹಾಗೂ ಹಿಂದಿಗೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಇದರಿಂದ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಸಂಘರ್ಷ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಿಕ್ಷಣ ಕೇತ್ರದಲ್ಲೂ ಕನ್ನಡ ಕಳೆದು ಹೋಗುತ್ತಿದ್ದು, ಮಕ್ಕಳು ಕನ್ನಡದಲ್ಲಿ ಮಾತನಾಡಿದರೆ ಶಿಕ್ಷಕರು ದಂಡ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಕನ್ನಡದ ಶಾಲೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದರು.

ಇ-ಬುಕ್ ಯುಗ ಪ್ರಾರಂಭವಾಗಿದ್ದರೂ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓದುವ ಸುಖ ಮೊಬೈಲ್, ಲ್ಯಾಪ್‌ಟಾಪ್‌ನಲ್ಲಿ ಸಿಗುವುದಿಲ್ಲ. ಆದರೆ, ಮುಂದಿನ ಪೀಳಿಗೆಯವರಿಗೆ ಇ-ಬುಕ್ ಯುಗವೇ ಸುಖ ಸಂತೋಷವನ್ನು ತಂದುಕೊಟ್ಟರೂ ಕೊಡಬಹುದು. ಆದರೆ, ಇದರ ಬಗ್ಗೆ ತಮಗೆ ತಿಳಿದಿಲ್ಲ ಎಂದು ನುಡಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ಗುರುತಿಸಿಕೊಳ್ಳದ ಎಷ್ಟೋ ಭಾಷೆಗಳು ಇತಿಹಾಸದಿಂದಲೇ ಮಾಯವಾಗಿ ಹೋಗಿದ್ದು, ಈ ಹಿನ್ನೆಲೆಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕೆಂದು ಹೇಳಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಮಾತನಾಡಿ, ಒಂದು ದೇಶ ಅಭಿವೃದ್ಧಿ ಹೊಂದಿದೆ ಹಾಗೂ ಅಭಿವೃದ್ಧಿ ಹೊಂದುತ್ತಿದೆ ಎಂದು ಪರಿಗಣಿಸಲು ಅಲ್ಲಿನ ಶಿಕ್ಷಣ ಹಾಗೂ ಸಾಹಿತ್ಯ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.

ಇಪ್ಪತ್ತನೆಯ ಶತಮಾನವನ್ನು ಪುಸ್ತಕ ಸಂಸ್ಕೃತಿ ಶತಮಾನ ಎಂದು ಕರೆದರೆ, ಇಪ್ಪತ್ತೊಂದನೆಯ ಶತಮಾನವನ್ನು ಮಾಧ್ಯಮ ಯುಗ, ಎಲೆಕ್ಟ್ರಾನಿಕ್ ಮಾಧ್ಯಮ ಯುಗ ಎಂದು ಕರೆಯಲಾಗುತ್ತಿದೆ. ಇದರ ಮಧ್ಯಯೇ ಪುಸ್ತಕ ಸಂಸ್ಕೃತಿಯು ಬರೀ ಸವಿನೆನಪಾಗಿ ಉಳಿಯುವ ಕಾಲ ದೂರವಿಲ್ಲ ಎಂಬ ಭಾವನೆಯು ಮೂಡುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.

ಪುಸ್ತಕ ಪ್ರಕಾಶನಗಳು ಇಂದು ಉದ್ಯಮವಾಗಿ ಬೆಳೆಯುತ್ತಿವೆ. ಆದರೆ, ಸಪ್ನ ಬುಕ್ ಹೌಸ್‌ನವರು ಕನ್ನಡ ಪುಸ್ತಕವನ್ನು ಮಾರಾಟ ಮಾಡುವುದರ ಜೊತೆಗೆ ಕನ್ನಡ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ನಾಲ್ಕೈದು ದಶಕಗಳ ಹಿಂದೆ ಕನ್ನಡ ಪುಸ್ತಕ ಮಾರಾಟವನ್ನು ಸೇವೆಯಾಗಿ ಪರಿಗಣಿಸಲಾಗುತ್ತಿತ್ತು. ಆದರೆ, ಇಂದು ಪುಸ್ತಕ ಮಾರಾಟವು ಉದ್ಯಮವಾಗಿ ಬೆಳೆದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತುಮಕೂರು ಆಶ್ರಮದ ವೀರೇಶಾನಂದ ಸರಸ್ವತೀ ಸ್ವಾಮೀಜಿ, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್, ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ಅಧ್ಯಕ್ಷ ಸುರೇಶ್ ಷಾ ಉಪಸ್ಥಿತರಿದ್ದರು.

1ರಿಂದ 10ನೆ ತರಗತಿವರೆಗೆ ಕನ್ನಡ ಕಡ್ಡಾಯವಾಗಲಿ

‘ಎಲ್ಲಿಯವರೆಗೆ ಒಂದನೆ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಕನ್ನಡ ಕಡ್ಡಾಯವಾಗುವುದಿಲ್ಲವೋ ಅಲ್ಲಿಯವರೆಗೆ ಕನ್ನಡ ಭಾಷೆ ಸೇರಿ ಇತರೆ ಮಾತೃಭಾಷೆಗಳು ಉದ್ಧಾರ ಆಗಲ್ಲ. ಕನ್ನಡ ಬರಹ ಹಾಗೂ ಭಾಷೆಯನ್ನು ಜನರು ಧಿಕ್ಕರಿಸುತ್ತಿದ್ದು, ಸರಕಾರ ಕೂಡ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.’

-ಡಾ.ಚಂದ್ರಶೇಖರ ಕಂಬಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News