ಫುಲೆ ಬೀಸಿದ ರೈತನ ಬಾರುಕೋಲು

Update: 2017-11-01 18:49 GMT

ಆಧುನಿಕ ಭಾರತದ ಚರಿತ್ರೆಯಲ್ಲಿ ಜ್ಯೋತಿಬಾ ಫುಲೆಯ ಹೆಸರು ಅಜರಾಮರ. ಜಾತೀಯತೆಯ ವಿರುದ್ಧ ಸಮಗ್ರ ಒಳನೋಟಗಳನ್ನಿಟ್ಟುಕೊಂಡು ಹೋರಾಡಿದ ಮೊದಲ ನಾಯಕರಿವರು. ಈ ದೇಶದ ಅಸಮಾನತೆ ಕುರಿತಂತೆ ಗಂಭೀರ ಚರ್ಚೆ ಆರಂಭವಾದುದೇ ಜ್ಯೋತಿಬಾ ಫುಲೆ ಮೂಲಕ. ಅವರನ್ನು ಕೈಮರವಾಗಿಟ್ಟುಕೊಂಡು ಉಳಿದ ನಾಯಕರು ಮುಂದುವರಿದರು. ‘ರೈತನ ಬಾರುಕೋಲು’ ಜ್ಯೋತಿ ಬಾ ಪುಲೆ ಅಂದಿನ ರೈತರ ಅಸಹನೀಯ ಬದುಕನ್ನು ಇಟ್ಟುಕೊಂಡು ಬರೆದ ಪುಸ್ತಕ. ಶೂದ್ರ, ಅತಿ ಶೂದ್ರ ಜಾತಿಗಳನ್ನು ಬ್ರಾಹ್ಮಣವಾದಿಗಳು ಮತ್ತು ಬ್ರಿಟಿಷ್ ವಸಾಹತುವಾದಿಗಳು ಯಾವ ರೀತಿ ಶೋಷಣೆಗೀಡು ಮಾಡುತ್ತಿದ್ದರೆನ್ನುವುದನ್ನು ಈ ಕೃತಿಯಲ್ಲಿ ಅವರು ವಿವರಿಸಿದ್ದಾರೆ. ರೈತನ ಬಾರುಕೋಲು ಮುಖ್ಯವಾಗಿ ಮಧ್ಯಮವರ್ಗದ ಮತ್ತು ಸಣ್ಣ ರೈತರು ವಸಾಹತುಕಾಲದ ಮಹಾರಾಷ್ಟ್ರದಲ್ಲಿ ಎದುರಿಸಿದ ಸಂಕಷ್ಟಗಳನ್ನು ಅಂದಿನ ಗವರ್ನರ್ ಜನರಲ್‌ಗೆ ವಿವರಿಸುವ ಪ್ರಯತ್ನವಾಗಿದೆ. ಅಂದಿನ ರೈತಾಪಿ ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನಚಿತ್ರವನ್ನು ಈ ಕೃತಿ ಗಾಢವಾಗಿ ನಮ್ಮ ಮನಸ್ಸಿಗೆ ಮುಟ್ಟುವಂತೆ ಮಾಡುತ್ತದೆ.
ಬ್ರಾಹ್ಮಣ್ಯ ಧರ್ಮದ ಹಿಡಿತದಿಂದ ಪಾರಾಗಲು ಬ್ರಿಟಿಷರ ಮೂಲಕ ಸಾಧ್ಯವೆಂದು ಜ್ಯೋತಿಬಾ ಫುಲೆ ಅವರು ಭಾವಿಸುತ್ತಾರೆ. ಆಧುನಿಕ ಶಿಕ್ಷಣದಿಂದ ಈ ವಿಷವರ್ತುಲದಿಂದ ಪಾರಾಗುವ ಬಯಕೆ ಅವರಲ್ಲಿ ಕಾಣುತ್ತದೆ. ಇಲ್ಲಿ ಒಟ್ಟು ಐದು ಪ್ರಮುಖ ಅಧ್ಯಾಯಗಳಿವೆ. ಮೊದಲ ಮೂರು ಭಾಗಗಳಲ್ಲಿ ಬ್ರಾಹ್ಮಣ್ಯದಿಂದ ನಲುಗುತ್ತಿರುವ ಸಮಾಜದ ಚಿತ್ರಣವನ್ನು ತೆರೆದಿಡುತ್ತಾರೆ. ಅದರ ಲಜ್ಜೆಹೀನ ಅನಾಚಾರಗಳನ್ನು ವಿವರಿಸುತ್ತಾರೆ. ನಾಲ್ಕನೆ ಅಧ್ಯಾಯದಲ್ಲಿ ರೈತರ ಅಂದಿನ ಸ್ಥಿತಿಗತಿ, ಅವರ ಅಸಹಾಕತೆಯನ್ನು ಕಟ್ಟಿಕೊಡುತ್ತಾರೆ. ಐದನೆ ಅಧ್ಯಾಯದಲ್ಲಿ ಶೂದ್ರ ರೈತರ ಪರವಾಗಿ ಸರಕಾರ ತೆಗೆದುಕೊಳ್ಳಬೇಕಾದ ಕ್ರಮವೇನು ಎನ್ನುವುದನ್ನು ತಿಳಿಸುತ್ತಾರೆ. ಒಂದು ರೀತಿಯಲ್ಲಿ ಈ ದೇಶದಲ್ಲಿ ಬೇರು ಬಿಟ್ಟ ಜಾತೀಯ ವಿಷವೃಕ್ಷವನ್ನು ಕಿತ್ತು ಹಾಕಲು ಅವರು ಈ ಕೃತಿಯಲ್ಲಿ ಬ್ರಿಟಿಷರನ್ನು ಬಳಸಿಕೊಳ್ಳುವುದನ್ನು ನಾವು ಕಾಣಬಹುದು. ಕೆಳಜಾತಿಯ ಜನರ ಪಾಲಿನ ಸ್ವಾತಂತ್ರ ಹೇಗೆ ಮೇಲ್ಜಾತಿಯ ಸ್ವಾತಂತ್ರಕ್ಕಿಂತ ಭಿನ್ನವಾಗಿದೆ ಎನ್ನುವುದನ್ನು ನಾವು ಫುಲೆ ಅವರ ಬರಹಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು. ನಂಜುಂಡಾಚಾರಿಯವರು ತೆಲುಗಿನಿಂದ ಇದನ್ನು ಕನ್ನಡಕ್ಕಿಳಿಸಿದ್ದಾರೆ. ಲಡಾಯಿ ಪ್ರಕಾಶನ ಕೃತಿಯನ್ನು ಹೊರತಂದಿದೆ. 100 ಪುಟಗಳ ಈ ಕೃತಿಯ ಮುಖಬೆಲೆ 80 ರೂಪಾಯಿ.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News