ರಸ್ತೆ ತೆರಿಗೆ ತಪ್ಪಿಸಿದವರ ಪಟ್ಟಿಯಲ್ಲಿ ಬಿಜೆಪಿ ಸಂಸದ ಸುರೇಶ್ ಗೋಪಿ ಸೇರಿದಂತೆ ಹಲವರು...?

Update: 2017-11-02 09:58 GMT

ಚೆನ್ನೈ, ನ.2: ರಸ್ತೆ ತೆರಿಗೆ ತಪ್ಪಿಸುವ ಉದ್ದೇಶದಿಂದ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಲಾಸಿ ವಾಹನಗಳನ್ನು ನೋಂದಣಿ ಮಾಡಿಸಿಕೊಂಡವರ ಬಗ್ಗೆ ತನಿಖೆ ನಡೆಸುವಂತೆ ಅಲ್ಲಿನ ಲೆಫ್ಟಿನೆಂಟ್ ಗವರ್ನರ್  ಕಿರಣ್ ಬೇಡಿ ಆದೇಶಿಸಿದ್ದಾರೆ. 

ರಸ್ತೆ ತೆರಿಗೆ ಪಾವತಿಯನ್ನು ತಪ್ಪಿಸುವುದಕ್ಕಾಗಿ ಪುದುಚೇರಿ ನಿವಾಸಿಗಳಲ್ಲದವರು ಪುದುಚೇರಿಯಲ್ಲಿ ವಾಹನಗಳನ್ನು ನೋಂದಣಿ ಮಾಡುತ್ತಿದ್ದು, ಈ ಪಟ್ಟಿಯಲ್ಲಿ ಸಿನಿಮಾ ನಟ ಹಾಗೂ ಬಿಜೆಪಿ ನಾಯಕ ಸುರೇಶ್ ಗೋಪಿ, ನಟಿ ಅಮಲಾ ಪೌಲ್ ಸಹಿತ ಹಲವರಿದ್ದಾರೆಂದು ತಿಳಿದು ಬಂದಿದೆ.

ಸಾರಿಗೆ ಕಚೇರಿಯಲ್ಲಿ ತಪಾಸಣೆ ನಡೆಸಿರುವ ಬೇಡಿ, ದಿನವೊಂದಕ್ಕೆ ಈ ರೀತಿಯಾಗಿ ಪುದುಚ್ಚೇರಿಯಲ್ಲಿ 80ರಿಂದ 90 ವಾಹನಗಳು ನೋಂದಣಿಗೊಳ್ಳುತ್ತವೆ ಎಂದು ಹೇಳಿದರು. ಹಲವರು ಶೇ.15ರ ತನಕ ತೆರಿಗೆ ಉಳಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಿಯಮದ ಪ್ರಕಾರ ಒಂದು ಕಡೆಯಲ್ಲಿ ಆರು ತಿಂಗಳಿಗಿಂತ ಹೆಚ್ಚು ಸಮಯ ಇದ್ದರೆ ಆ ಸ್ಥಳದಲ್ಲಿಯೇ ರಸ್ತೆ ತೆರಿಗೆ ಪಾವತಿಸಬೇಕಿದೆ. ಆದರೆ ಪುದುಚ್ಚೇರಿಯಲ್ಲಿ ಕಾರು ಡೀಲರುಗಳು, ಬ್ರೋಕರುಗಳು ಹಾಗೂ ಅಧಿಕಾರಿಗಳ ಜಾಲವೊಂದರಿಂದಾಗಿ ಎಲ್‍ಐಸಿ ಪಾಲಿಸಿಯೊಂದನ್ನು ಖರೀದಿಸಿ ನೋಟರಿ ಮೂಲಕ ತಾತ್ಕಾಲಿಕ ವಿಳಾಸವನ್ನು ದೃಢೀಕರಿಸಿ ನಂತರ ವಾಹನ ನೋಂದಣಿ ಮಾಡಲಾಗುತ್ತದೆ ಎಂದು ಬೇಡಿ ವಿವರಿಸುತ್ತಾರೆ. ಎಲ್‍ಐಸಿ ಪಾಲಿಸಿಗಳಿಗೆ ಆಧಾರ್ ಕಾರ್ಡುಗಳನ್ನೂ ಕಡ್ಡಾಯಗೊಳಿಸಬೇಕು ಎಂದು ಅವರು ಹೇಳಿದರು.

ಪುದುಚ್ಚೇರಿ ಸಾರಿಗೆ ಸಚಿವ  ಶಹಜಹಾನ್  ಅವರು ಅಕ್ರಮ ನಡೆಯುತ್ತಿದೆ ಎಂಬುದನ್ನು ನಿರಾಕರಿಸಿದ್ದಾರೆ. ಆದರೆ ಶಹಜಹಾನ್ ಕೂಡ ಕಾರು ಡೀಲರ್ ಆಗಿದ್ದಾರೆ. ಅವರ ತಂದೆಯ ಕಾರು ಉದ್ಯಮ ಪುದುಚ್ಚೇರಿಯಲ್ಲಿದೆ ಎಂದು ಬೇಡಿ ಹೇಳುತ್ತಾರೆ.

ಮೂಲಗಳ ಪ್ರಕಾರ ನಟ ಸುರೇಶ್ ಗೋಪಿ ಅವರು ಪುದುಚ್ಚೇರಿಯಲ್ಲಿ ಆಡಿ ಕ್ಯೂ7 ಕಾರನ್ನು 1 ಲಕ್ಷ ರೂ. ಪಾವತಿಸಿ ನೋಂದಣಿ ಮಾಡಿಸಿದ್ದಾರೆ. ಇದೇ ಅವರು ಖಾಯಂ ನಿವಾಸಿಯಾಗಿರುವ ಕೇರಳದಲ್ಲಿ ಮಾಡಿದ್ದರೆ ಅವರು 15 ಲಕ್ಷ ರೂ. ತನಕ ತೆರಿಗೆ ತೆರಬೇಕಾಗಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರ ಪ್ರತಿಕ್ರಿಯೆ ದೊರಕಿಲ್ಲ.

ತರುವಾಯ ಕೇರಳ ಸಾರಿಗೆ ಆಯುಕ್ತ ಅನಿಲ್ ಕಾಂತ್ ಅವರು  ಪುದುಚ್ಚೇರಿಯ ಸಾರಿಗೆ ಆಯುಕ್ತರಿಗೆ ಪತ್ರ ಬರೆದು  ತಮ್ಮ ತವರು ರಾಜ್ಯಗಳಲ್ಲಿ ರಸ್ತೆ ತೆರಿಗೆ ತಪ್ಪಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News