ಟಿಪ್ಪು ಹಿಂದೂಗಳ ಮತಾಂತರಿಸಿದ ದಾಖಲೆ ಬಿಡುಗಡೆ ಮಾಡಲಿ :ಬಹಿರಂಗ ಚರ್ಚೆಗೆ ತಲಕಾಡು ರಂಗೇಗೌಡ ಸವಾಲು

Update: 2017-11-02 17:27 GMT

ಮಂಡ್ಯ, ಅ.2: ಟಿಪ್ಪು ಸುಲ್ತಾನ್ ಸಾವಿರಾರು ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿದ ಬಗ್ಗೆ ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬರುವಂತೆ ಸಾಹಿತಿ ತಲಕಾಡು ಚಿಕ್ಕರಂಗೇಗೌಡ ಸವಾಲು ಹಾಕಿದ್ದಾರೆ.

ನಗರದ ಗಾಂಧಿ ಭವನದಲ್ಲಿ ಮನುಜಮತ ವಿಶ್ವಪಥ ವೇದಿಕೆಯಿಂದ ಗುರುವಾರ ನಡೆದ ಟಿಪ್ಪು ಹೆಸರಿನಲ್ಲಿ ರಾಜಕೀಯ ಪಕ್ಷಗಳ ಕ್ಷುಲ್ಲಕ ರಾಜಕಾರಣ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿರಾರು ಹಿಂದೂಗಳನ್ನು ಟಿಪ್ಪು ಸುಲ್ತಾನ್ ಇಸ್ಲಾಂಗೆ ಮತಾಂತರ ಮಾಡಿಸಿದ ಎಂದು ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಮತ್ತು ಇತರರು ಹೇಳಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಅವರು ತಾಕೀತು ಮಾಡಿದರು.
ಯಾವುದೇ ವಿಷಯ ಮತ್ತು ವ್ಯಕ್ತಿಯ ಬಗ್ಗೆ ಅನಾವಶ್ಯಕವಾಗಿ ಟೀಕೆ, ಆರೋಪ ಮಾಡುವುದು ಸರಿಯಲ್ಲ. ಟಿಪ್ಪುವಿನಂತಹ ಇತಿಹಾಸ ಪುರುಷರ  ಬಗ್ಗೆ ಮಾತನಾಡುವಾಗ ನಿಖರ ಮಾಹಿತಿ ಇರಬೇಕು. ಕೇವಲ ಆರೋಪ ಮಾಡುವುದರಲ್ಲಿ ಅರ್ಥವಿರುವುದಿಲ್ಲ ಎಂದು ಅವರು ಹೇಳಿದರು.

ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆ ಕಾಲಕ್ಕೆ ಕೊಡಗಿನಲ್ಲಿ ಸುಮಾರು 75 ಸಾವಿರ ಹಿಂದೂಗಳನ್ನು ಮತಾಂತರ ಮಾಡಿಸಿದನೆಂಬುದು ಬರೀ ಆರೋಪವಷ್ಟೆ. ಏಕೆಂದರೆ, ಆ ಕಾಲಕ್ಕೆ ಕೊಡಗಿನ ಒಟ್ಟು ಜನಸಂಖ್ಯೆಯೇ 50 ಸಾವಿರ. ಹಾಗಾದರೆ 75 ಸಾವಿರ ಮಂದಿ ಮತಾಂತರ ಹೇಗಾಯಿತು ಎಂದು ಅವರು ಪ್ರಶ್ನಿಸಿದರು.

ಶೃಂಗೇರಿ ದೇವಸ್ಥಾನದ ಮೇಲೆ ಪೇಶ್ವೆಗಳು ದಾಳಿ ಮಾಡಿದ್ದನ್ನು ತಿಳಿದ ಟಿಪ್ಪು ಅಲ್ಲಿಗೆ ದಾವಿಸಿ ಶತ್ರುಗಳನ್ನು ಸೆದೆಬಡಿದು ದೇವಸ್ಥಾನ ರಕ್ಷಣೆ ಮಾಡಿದ. ಅದೇ ರೀತಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳಿಗೆ ಉದಾರವಾಗಿ ಕಾಣಿಕೆ ನೀಡಿದ್ದಾನೆ ಎಂದು ಅವರು ಪ್ರಸ್ತಾಪಿಸಿದರು.

ಕೇರಳದ ದೇವಾಲಯಗಳೂ ಸೇರಿದಂತೆ ಟಿಪ್ಪು ಸುಲ್ತಾನ್ ಸುಮಾರು 8 ಸಾವಿರ ದೇವಾಲಯಗಳನ್ನು ಧ್ವಂಸ ಮಾಡಿದ ಎಂಬುದೂ ಸುಳ್ಳು.  ಧ್ವಂಸಗೊಂಡ ದೇವಸ್ಥಾನಗಳ ಹೆಸರನ್ನು ದಾಖಲೆ ಸಹಿತ ವಿವರ ನೀಡಿದರೆ ತಲಾ 100 ರೂ.ನಂತೆ ಅಷ್ಟೂ ದೇವಾಲಯಗಳಿಗೆ ಹಣ ನೀಡುತ್ತೇನೆ ಎಂದೂ ರಂಗೇಗೌಡ ಸವಾಲು ಹಾಕಿದರು.

ಕೇರಳದ ದೇವಾಲಯಗಳನ್ನು ಟಿಪ್ಪು ದೋಚಿದ್ದರೆ, ಅಲ್ಲಿನ ಪದ್ಮನಾಭ ದೇವಾಲಯದಲ್ಲಿ ಟನ್‍ಗಟ್ಟಲೆ ಚಿನ್ನಾಭರಣ ಸಿಗುತ್ತಿರಲಿಲ್ಲ. ಈಗಲೂ ಅಲ್ಲಿನ 280 ದೇವಾಲಯದ ಆಸ್ತಿ ತೆರಿಗೆಯನ್ನು ಟಿಪ್ಪು ಹೆಸರಿನಲ್ಲಿ ಪಾವತಿಸಲಾಗುತ್ತಿದೆ ಎಂದು ಅವರು ವಿವರ ನೀಡಿದರು.

ಚಿಕ್ಕದೇವರಾಯ ಒಡೆಯರ್ 1689 ರಲ್ಲಿ ಬೆಂಗಳೂರನ್ನು ಹಣ ನೀಡಿ ಖರೀದಿಸಿದ ಪತ್ರ ಪರ್ಷಿಯನ್ ಭಾಷೆಯಲ್ಲಿದೆ ಎಂದು ಸಂಸರೊಬ್ಬರು ಹೇಳಿದ್ದಾರೆ. ವಾಸ್ತವವೆಂದರೆ ಆಗ ಹೈದರಾಲಿ, ಟಿಪ್ಪು ಇಬ್ಬರೂ ಹುಟ್ಟಿರಲೇ ಇಲ್ಲ ಎಂದು ಸಂಸದ ಪ್ರತಾಪ ಸಿಂಹ ಅವರ ಹೇಳಿಕೆಗೆ ಲೇವಡಿ ಮಾಡಿದರು.

ದೇಶದಲ್ಲಿ ಬ್ರಿಟೀಷರ ವಸಾಹತು ಶಾಹಿ ವಿರುದ್ಧ ರಣರಂಗದಲ್ಲಿ ಎದುರುಬದುರಾಗಿ ಹೋರಾಡಿದವರಲ್ಲಿ ಟಿಪ್ಪು ಸುಲ್ತಾನ್ ಒಬ್ಬರೇ. ತನ್ನ ಪುತ್ರರನ್ನೇ ಅಡವಿಟ್ಟ ಟಿಪ್ಪು ಇತರ ಧರ್ಮದ ಜನರ ವಿರೋಧಿಯಾಗಿದ್ದ ಎಂಬುದು ನಂಬಲು ಸಾಧ್ಯವೇ ಇಲ್ಲ ಎಂದು ಅವರು ಪ್ರತಿಪಾದಿಸಿದರು.

ಆಧುನಿಕ ಕೃಷಿ ಪದ್ಧತಿ, ರೇಷ್ಮೆ ಬೇಸಾಯ, ಕೈಗಾರಿಕಾಭಿವೃದ್ಧಿ, ರೈತರಿಗೆ ನೀರಾವರಿ ಸೌಲಭ್ಯ, ದಲಿತರಿಗೆ ಭೂ ಒಡೆತನದ ಹಕ್ಕು,  ಮುಂತಾದ ಕಾರ್ಯಗಳ ಮೂಲಕ ಟಿಪ್ಪು ಸುಲ್ತಾನ್ ಓರ್ವ ಜನಾನುರಾಗಿ ರಾಜನಾಗಿದ್ದ ಎಂದು ಅವರು ವಿಶ್ಲೇಷಿಸಿದರು.

ಬಿಎಸ್ಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಕೃಷ್ಣಮೂರ್ತಿ ಮಾತನಾಡಿ, ಟಿಪ್ಪು ಹೆಸರು ಬಳಸಿಕೊಂಡು ರಾಜಕೀಯ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ. ಬಿಜೆಪಿ ಟಿಪ್ಪು ವಿರುದ್ಧ ಟೀಕೆ ಮಾಡುವ ಮೂಲಕ ಹಿಂದೂ ಮತಗಳನ್ನು ಸೆಳೆಯುವ ಹುನ್ನಾರದಲ್ಲಿದ್ದರೆ, ಕಾಂಗ್ರೆಸ್ ಮುಸ್ಲಿಂ ಮತ ಗಿಟ್ಟಿಸಿಕೊಳ್ಳಲು ತಂತ್ರಗಾರಿಕೆ ನಡೆಸಿದೆ ಎಂದು ಆರೋಪಿಸಿದರು.

ಜನಪರ ಕ್ರೀಯಾ ವೇದಿಕೆ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಸಂಚಾಲಕ ಚೀರನಹಳ್ಳಿ ಲಕ್ಷ್ಮಣ್, ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದೆ ತಾಹೇರ್, ಇತರ ಮುಖಂಡರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News