ಕೇಂದ್ರ ಸರಕಾರ ರೈತರ ನೋವಿಗೆ ಸ್ಪಂದಿಸುತ್ತಿಲ್ಲ: ಕುಮಾರಸ್ವಾಮಿ

Update: 2017-11-08 18:47 GMT

ಕಡೂರು, ನ.8: ರಾಜ್ಯದಲ್ಲಿ ಅಡಿಕೆ-ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. 30,000 ಕೋಟಿ ರೂ.ಗಳ ಬೆಳೆ ನಷ್ಟವಾಗಿದೆ. ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಿ ಅವರ ನೆರವಿಗೆ ಧಾವಿಸಬೇಕಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಪಟ್ಟಣದ ಮರವಂಜಿ ವೃತ್ತದಲ್ಲಿ ವಿಕಾಸಯಾತ್ರೆಯ ಬಸ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಷ್ಟ್ರೀಕೃತ ಬ್ಯಾಂಕಿನ ಸಾಲವನ್ನು ಮನ್ನಾ ಮಾಡಬೇಕಿದೆ. ಇದುವರೆಗೂ ಬಿಜೆಪಿಯವರು ರೈತರ ಸಾಲ ಮನ್ನಾದ ಕುರಿತು ಮಾತನಾಡುತ್ತಿಲ್ಲ. ತೀವ್ರ ಸಂಕಷ್ಟದಲ್ಲಿರುವ ರೈತರ ನೋವಿಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಮುಂದಿನ 2018ರ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಎಲ್ಲ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಲಾಗುವುದು ಎಂದು ಹೇಳಿದರು.

ನೋಟು ಅಮಾನ್ಯದ ಬಗ್ಗೆ ತಜ್ಞರು ಪ್ರಾರಂಭದಲ್ಲಿ ಒಳ್ಳೆಯ ನಿರ್ಣಯ ಎಂದಿದ್ದರು. ಈಗ ಅದೇ ತಜ್ಞರು ಇದು ಬಾಲಿಶ ನಿರ್ಣಯ ಎಂದು ಹೇಳುತ್ತಿದ್ದಾರೆ. ಇದರಿಂದ ಸಣ್ಣಪುಟ್ಟ ವ್ಯಾಪಾರಸ್ಥರು, ಕೂಲಿಕಾರ್ಮಿಕರು ಬೀದಿ ಪಾಲಾಗಿರುತ್ತಾರೆ. ಜಿಎಸ್‌ಟಿಯಿಂದ ಇಡೀ ದೇಶ ತೊಂದರೆ ಅನುಭವಿಸುತ್ತಿದೆ. ರಾಜ್ಯ ಸರಕಾರ ಹಲವಾರು ಭಾಗ್ಯಗಳನ್ನು ನೀಡಿದೆ. ಇವುಗಳೆಲ್ಲವನ್ನು 1983 ರ ಜನತಾದಳ ಸರಕಾರವೇ ಜಾರಿಗೆ ತಂದಿತ್ತು. ಆಗಲೇ 2 ರೂ.ಗಳಿಗೆ ಅಕ್ಕಿ ನೀಡಲಾಗುತ್ತಿತ್ತು. ಪ್ರತಿಯೊಬ್ಬರಿಗೂ ಅನ್ನ ದೊರಕಬೇಕು. ಯಾರೂ ಉಪವಾಸ ಇರಬಾರದು ಎಂಬುದು ಜನತಾದಳ ಸರಕಾರದ ಆಶಯವಾಗಿತ್ತು. ಅದೇ ಯೋಜನೆಗಳು ಈಗಿನ ಸರಕಾರಗಳ ಭಾಗ್ಯಗಳಾಗಿವೆ ಎಂದರು.

ಈ ಸಂದರ್ಭ ಬಂಡೆಪ್ಪ ಕಾಶೆಂಪೂರ್, ಶಾಸಕ ವೈ.ಎಸ್.ವಿ. ದತ್ತ, ಮಾಜಿ ಶಾಸಕ ಧರ್ಮೇಗೌಡ ಉಪಸ್ಥಿತರಿದ್ದರು.

ಎಚ್.ಡಿ. ರೇವಣ್ಣ ರಾಜ್ಯದಲ್ಲಿ ಹಾಲಿನ ಕ್ರಾಂತಿಯನ್ನೇ ಮಾಡಿದರು. ಯಾರೋ ಮಾಡಿದ ದುಡಿಮೆಯಿಂದ ಈಗಿನ ಸರಕಾರ ಕ್ಷೀರ ಯೋಜನೆ ಜಾರಿಗೆ ತಂದಿದೆ. ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ ಧರ್ಮೇಗೌಡರು ಜಿಲ್ಲೆಯಾದ್ಯಂತ ರೈತರಿಗೆ 85 ಕೋಟಿ ರೂ.ಗಳ ನೀಡಿರುತ್ತಾರೆ. ರಾಜ್ಯದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ 50 ಸಾವಿರ ರೂ.ವನ್ನು ಜೆಡಿಎಸ್ ಪಕ್ಷದ ವತಿಯಿಂದ ನೀಡಲಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹಿರಿಯ ನಾಗರಿಕರಿಗೆ ಪ್ರತೀ ತಿಂಗಳು 5,000 ಸಾವಿರ, ಗರ್ಭಿಣಿಯರಿಗೆ 6 ತಿಂಗಳಿಂದ 12ನೆ ತಿಂಗಳವರೆಗೆ ಪ್ರತೀ ತಿಂಗಳಿಗೆ 6,000 ಸಾವಿರ ರೂ. ನೀಡಲಾಗುವುದು.

-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News