ಸ್ಮಶಾನಗಳು ಆಧುನೀಕರಣಗೊಳ್ಳಲಿ

Update: 2017-11-08 18:49 GMT

ಮಾನ್ಯರೆ,

ನಗರದ ಎಲ್ಲಾ ಧರ್ಮಗಳಿಗೆ ಸೇರಿದ ಸ್ಮಶಾನಗಳಲ್ಲಿ ರಾತ್ರಿಯ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಕೆಲವೆಡೆ ಕುಡುಕರ ಕಾಟವಂತೂ ಹೇಳತೀರದು. ಅಲ್ಲದೆ ಕೆಲವು ಸ್ಮಶಾನಗಳಲ್ಲಿ ಸ್ವಚ್ಛತೆಯ ಬಗ್ಗೆ ಕೇಳುವಂತೆಯೇ ಇಲ್ಲ. ಮನೆಯಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡವರಿಗೆ ಒಂದು ಕಡೆ ದುಃಖ ಬಾಧಿಸುತ್ತಿದ್ದರೂ ಅಂತ್ಯ ಸಂಸ್ಕಾರಕ್ಕೆ ಬಂದರೆ ಕೆಲವು ಸ್ಮಶಾನಗಳಲ್ಲಿ ಅನೇಕ ಅನಧಿಕೃತ ವ್ಯಕ್ತಿಗಳು ಬಂದವರಿಂದ ಹಣವನ್ನು ಬಲವಂತವಾಗಿ ಕೇಳಿ ಪಡೆಯುತ್ತಾರೆ. ಅಲ್ಲದೆ ಕೆಲವು ಸ್ಮಶಾನಗಳಿಗೆ ಹಾಕಿರುವ ಗೇಟಿನ ಬಾಗಿಲುಗಳು ಯಾವಾಗಲೂ ತೆರೆದಿರುತ್ತವೆ. ಯಾರು ಯಾವಾಗ ಬೇಕಾದರೂ ಯಾವ ಕೆಲಸವನ್ನು ಬೇಕಾದರೂ ಮಾಡಬಹುದು. ಈ ಹಿನ್ನೆಲೆಯಲ್ಲಿ ಎಲ್ಲಾ ಸ್ಮಶಾನಗಳಿಗೆ ಕೂಡಲೇ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಬೇಕು ಹಾಗೂ ಶವಸಂಸ್ಕಾರಕ್ಕೆ ಬರುವ ಕುಟುಂಬದ ಜವಾಬ್ದಾರಿಯುತ ಸದಸ್ಯರಿಂದ ಮೃತಪಟ್ಟವರ ಆಧಾರ್ ಕಾರ್ಡ್ ಅಥವಾ ಇತರೇ ಗುರುತಿನ ಚೀಟಿಯ ಝೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವ ವ್ಯವಸ್ಥೆಯಾಗಬೇಕು. ಶವಸಂಸ್ಕಾರಕ್ಕೆ ಬಂದವರು ಕೆಲವೊಂದು ಸಾಂಪ್ರದಾಯಿಕ ವಿಧಿವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ವಿಧಿ ವಿಧಾನಗಳನ್ನು ನಿರ್ವಹಿಸಲೂ ಸರಿಯಾದ ವ್ಯವಸ್ಥೆ ಕೆಲವೆಡೆ ಇರುವುದಿಲ್ಲ. ಹೀಗೆ ಹಲವು ರೀತಿಯ ಸಮಸ್ಯೆಗಳ ಸಾಗರವಾಗಿರುವ ಸ್ಮಶಾನಗಳನ್ನು ಇನ್ನಾದರೂ ಆಧುನೀಕರಣಗೊಳಿಸಬೇಕು. ಯಾವುದೇ ಒಬ್ಬ ವ್ಯಕ್ತಿಗೆ ಸಾವಿನ ಕೊನೆಯ ಕ್ಷಣದಲ್ಲಾದರೂ ಗೌರವಯುತವಾದ ಸಂಸ್ಕಾರದ ವ್ಯವಸ್ಥೆಯಾಗಲು ಸ್ಮಶಾನಗಳು ಪರಿವರ್ತನೆಯಾಗಬೇಕು. ನಗರದ ಬಹುತೇಕ ಸ್ಮಶಾನಗಳ ಜಾಗಗಳು ಕೂಡಾ ಹಲವಾರು ಭೂ ಒತ್ತುವರಿದಾರರಿಂದ ಅತಿಕ್ರಮಣವಾಗಿರುತ್ತದೆ. ಇವುಗಳ ಕಡೆಯೂ ಗಮನ ಹರಿಸಿ ಸ್ಮಾಶಾನದ ಜಾಗಗಳನ್ನು ನುಂಗಿರುವ ಭೂದಾಹಿಗಳಿಂದ ಹಿಂಪಡೆಯಬೇಕು.

Similar News