ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಸಂಪರ್ಕದಲ್ಲಿ: ಸಿದ್ದರಾಮಯ್ಯ

Update: 2017-11-09 10:23 GMT
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹಾರಾಜರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ ಸರ್ವಧರ್ಮ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.

ಹುಬ್ಬಳ್ಳಿ, ನ.9: ಬಿಜೆಪಿಯ ಹಲವಾರು ಮುಖಂಡರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಅವರು ಕಾಂಗ್ರೆಸ್ ಸೇರುವ ಆತುರದಲ್ಲಿ ಇದ್ದಾರೆ. ಆದರೆ, ಅವರು ಮೂಲತಃ ಸಂಘ ಪರಿವಾರದವರೋ ಅಲ್ಲವೋ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಆರೆಸ್ಸೆಸ್ ನವರಾದರೆ ಅವರಿಗೆ ಕೋಮುವಾದದ ತರಬೇತಿ ಆಗಿರುತ್ತದೆ. ಅಂತಹವರನ್ನು ಸೇರಿಸಿಕೊಳ್ಳುವುದಿಲ್ಲ. ಸಂಪರ್ಕದಲ್ಲಿ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹುಬ್ಬಳಿ ವಿಮಾನ ನಿಲ್ದಾಣದಲ್ಲಿಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. 

ಐಟಿ ಅಧಿಕಾರಿಗಳ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯುವ ಬಿಜೆಪಿ ನಾಯಕರ ಪ್ರಯತ್ನ ಫಲ ನೀಡುವುದಿಲ್ಲ. ಯಾವ ಆಮಿಷ ತೋರಿಸಿದರೂ ಅದಕ್ಕೆಲ್ಲ ಶಿವಕುಮಾರ್ ಸೊಪ್ಪು ಹಾಕುವುದಿಲ್ಲ. ಕಾರಣ ಅವರು ಹಾಗೂ ಹುಟ್ಟು ಕಾಂಗ್ರೆಸ್ಸಿಗರು ಎಂದು ಸಿದ್ದರಾಮಯ್ಯ ನುಡಿದರು.

ಟಿಪ್ಪು ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿ ನಡೆಯುತ್ತದೆ. ಟಿಪ್ಪು ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಅಗಿದ್ದಾಗ ಟಿಪ್ಪು ಮಹಾವೀರ, ಶೂರ ಎಂದು ಹಾಡಿ ಹೊಗಳಿದ್ದರು. ಟಿಪ್ಪು ಕುರಿತಾದ ಪುಸ್ತಕಕ್ಕೆ ಶೆಟ್ಟರ್, ಸದಾನಂದ ಗೌಡರು ಮುನ್ನುಡಿ ಬರೆದಿದ್ದಾರೆ. ಯಡಿಯೂರಪ್ಪ ಸಹ ಟಿಪ್ಪು ವೇಷಧಾರಿ ಆಗಿರಲಿಲ್ಲವೇ ಎಂದು ಪ್ರಶ್ನಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಶಿಫಾರಸು ಮಾಡುವುದು ನಮ್ಮ ಕೆಲಸ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News