ಬಿಜೆಪಿಗೆ 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ: ಪ್ರೇಮ್ ಕುಮಾರ್ ಧುಮಾಲ್

Update: 2017-11-09 12:14 GMT

ಹೊಸದಿಲ್ಲಿ,ನ.9 : ಹಿಮಾಚಲ ಪ್ರದೇಶ ವಿಧಾನಸಭೆಯ 68 ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಅಪರಾಹ್ನ ಮತ ಚಲಾಯಿಸಿದ ಮುಖ್ಯಮಂತ್ರಿ ವೀರಭದ್ರ ಸಿಂಗ್  ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದೆಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಬೆಳಿಗ್ಗೆಯೇ ತಮ್ಮ ಮತ ಚಲಾಯಿಸಿದ್ದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ತಮ್ಮ ಪಕ್ಷ 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದರು. ಚುನಾವಣಾ ಕಣದಲ್ಲಿರುವ ಒಟ್ಟು 337 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಫಲಿತಾಂಶ ಡಿಸೆಂಬರ್ 18ಕ್ಕೆ ಹೊರಬೀಳಲಿದೆ.

ವೀರಭದ್ರ ಸಿಂಗ್ ಅವರು ಅರ್ಕಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಧುಮಾಲ್ ಅವರು ಸುಜನಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಕೇಂದ್ರ ಸಚಿವ ಜೆ ಪಿ ನಡ್ಡ ಬಿಲಾಸಪುರದ ಮತಗಟ್ಟೆಯೊಂದರಲ್ಲಿ ತಮ್ಮ ಮತ ಚಲಾಯಿಸಿದರು. ರಾಜ್ಯದಲ್ಲಿ ಒಟ್ಟು 7,525 ಮತಗಟ್ಟೆಗಳಿದ್ದು ಪ್ರಥಮ ಬಾರಿಗೆ ಇವಿಎಂ ಜತೆ ವಿವಿಪಿಎಟಿಗಳನ್ನೂ ಉಪಯೋಗಿಸಲಾಗಿದೆ.

ಆಡಳಿತ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ಎಲ್ಲಾ 68 ಸ್ಥಾನಗಳಿಗೂ ಸ್ಪರ್ಧಿಸುತ್ತಿದ್ದರೆ, ಬಿಎಸ್‍ಪಿ 42 ಸ್ಥಾನಗಳಿಗೆ ಹಾಗೂ ಸಿಪಿಐ(ಎಂ) 14 ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ.

ಅಕ್ಟೋಬರ್ 25, 1951ರಿಂದ ನಡೆದ ಪ್ರತಿಯೊಂದು ಚುನಾವಣೆಯಲ್ಲೂ ತಪ್ಪದೇ ಮತ ಚಲಾಯಿಸುತ್ತಿರುವ ಭಾರತದ ಪ್ರಪ್ರಥಮ ಮತದಾರ ಶ್ಯಾಮ್ ಸರಣ್ ನೇಗಿ ಕಿಮ್ಮೌರ್ ನ ಕಲ್ಪ ಎಂಬಲ್ಲಿ ಮತ ಚಲಾಯಿಸಿದ್ದಾರೆ.

ಇಂದು ಬೆಳಗ್ಗೆ ಮತದಾನ ಆರಂಭಗೊಳ್ಳುವ ಮುನ್ನ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದಾಖಲೆ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ಹಿಮಾಚಲ ಪ್ರದೇಶದ ಜನರಿಗೆ ಕರೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News