ಶಶಿಕಲಾ ಸಹವರ್ತಿಗಳ ವಿರುದ್ಧ ಮೂರನೇ ದಿನವೂ ಐಟಿ ದಾಳಿ, ಭಾರೀ ನಗದು ವಶ

Update: 2017-11-11 12:56 GMT

ಚೆನ್ನೈ, ನ.11: ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾರ ಕುಟುಂಬ ಸದಸ್ಯರು, ಅವರ ಉದ್ಯಮ ಸಹವರ್ತಿಗಳು ಮತ್ತು ಅವರ ಸಂಸ್ಥೆಗಳ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯಾಚರಣೆ ಸತತ ಮೂರನೇ ದಿನವಾದ ಶನಿವಾರವೂ ಮುಂದುವರಿದಿತ್ತು.

ಗಮನಾರ್ಹ ಪ್ರಮಾಣದಲ್ಲಿ ಹಣ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯ ಇನ್ನೂ ಮುಂದುವರಿದಿದೆ ಎಂದು ಹಿರಿಯ ಐಟಿ ಅಧಿಕಾರಿಯೋರ್ವರು ತಿಳಿಸಿದರು.

ಶೋಧ ನಡೆಸಲಾದ ಒಂದು ಸ್ಥಳದಿಂದ ಸಾಕಷ್ಟು ಪ್ರಮಾಣದಲ್ಲಿ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ತೆರಿಗೆ ವಂಚನೆಯನ್ನು ಪತ್ತೆ ಹಚ್ಚಲು ಈ ಶೋಧಗಳನ್ನು ನಡೆಸಲಾಗುತ್ತಿದೆ. ಕಾರ್ಯಾಚರಣೆಗಳು ಪೂರ್ಣಗೊಂಡ ಬಳಿಕ ವಶಪಡಿಸಿಕೊಳ್ಳಲಾದ ದಾಖಲೆಗಳು ಮತ್ತು ಅವರಿಂದ ಪಡೆದುಕೊಂಡ ಸ್ಪಷ್ಟೀಕರಣಗಳನ್ನು ವಿಶ್ಲೇಷಿಸಿ ತೆರಿಗೆ ತಗಾದೆ ನೋಟಿಸನ್ನು ಜಾರಿಗೊಳಿಸುತ್ತೇವೆ. ಅವರು ತೆರಿಗೆ ಪಾವತಿಸಿದರೆ ತೆರಿಗೆ ವಂಚನೆಗೆ ಸಂಬಂಧಿಸಿದ ಇತರ ವಿಷಯಗಳನ್ನು ಆಧರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗು ತ್ತದೆ ಎಂದು ಅಧಿಕಾರಿ ತಿಳಿಸಿದರು.

ನೋಟು ಅಮಾನ್ಯದ ಬಳಿಕ ಶಶಿಕಲಾ ಮತ್ತು ಅವರ ಬಂಧು ಟಿಟಿವಿ ದಿನಕರನ್ ಅವರಿಗೆ ಸಂಬಂಧಿಸಿದ ಬೇನಾಮಿ ಕಂಪನಿಗಳ ಮೂಲಕ ನಡೆಸಲಾದ, ಯಾವುದೇ ವಿವರಣೆಯಿಲ್ಲದ ನಗದು ವಹಿವಾಟುಗಳಿಗೆ ಸಂಬಂಧಿಸದಂತೆ ಈ ಶೋಧ ಕಾರ್ಯಾ ಚರಣೆಗಳು ನಡೆಯುತ್ತಿವೆ.

1,800 ಆದಾಯ ತೆರಿಗೆ ಅಧಿಕಾರಿಗಳ ತಂಡವು ಗುರುವಾರದಿಂದ ಶಶಿಕಲಾ ಕುಟುಂಬ ಮತ್ತು ಸಹವರ್ತಿಗಳ ವಿರುದ್ಧ ಬೃಹತ್ ಬೇಟೆ ಕಾರ್ಯಾಚರಣೆಯನ್ನು ಆರಂಭಿಸಿದ್ದು, ತಮಿಳುನಾಡು, ಪುದುಚೇರಿ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಮನೆಗಳು, ಕಚೇರಿಗಳು ಮತ್ತು ತೋಟದ ಮನೆಗಳು ಸೇರಿದಂತೆ 187 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News