ಪತಂಜಲಿ-ಸಂಸ್ಕೃತಿ ಸಚಿವಾಲಯದ ನಡುವೆ ಜಟಾಪಟಿ

Update: 2017-11-11 16:08 GMT

ಹೊಸದಿಲ್ಲಿ,ನ.11: ಆಯುರ್ವೇದ ಮತ್ತು ಯೋಗ ಕುರಿತ ಅಪರೂಪದ ಹಸ್ತಪ್ರತಿಗಳ ಡಿಜಿಟಲ್ ಪ್ರತಿಗಳನ್ನು ಪಡೆಯುವ ವಿಷಯದಲ್ಲಿ ಯೋಗಗುರು ಬಾಬಾ ರಾಮದೇವ್ ಅವರ ದಿವ್ಯ ಜ್ಯೋತಿ ಯೋಗಮಂದಿರ ಟ್ರಸ್ಟ್ ಪತಂಜಲಿ ಯೋಗಪೀಠ ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಹಸ್ತಪ್ರತಿಗಳ ಮಿಷನ್ (ಎನ್‌ಎಂಎಂ) ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ.

ತನ್ನ ಸಂಶೋಧನೆಗಳಿಗಾಗಿ ಹಸ್ತಪ್ರತಿಗಳ ಡಿಜಿಟಲ್ ಕಾಪಿಗಳನ್ನು ಪಡೆಯಲು ಪತಂಜಲಿ ಬಯಸುತ್ತಿದೆ. ಆದರೆ, ಸಚಿವಾಲಯದ ಹಸ್ತಕ್ಷೇಪದ ಬಳಿಕವೂ ಹಸ್ತಪ್ರತಿಗಳನ್ನು ಹಂಚಿಕೊಳ್ಳಲು ಎನ್‌ಎಂಎಂ ಹೆಚ್ಚಿನ ಆಸಕ್ತಿ ಹೊಂದಿಲ್ಲ. ಎನ್‌ಎಂಎಂ ನಿರ್ದೇಶಕ ವಿ.ವಿ.ವೆಂಕಟರಮಣ ರೆಡ್ಡಿ ಅವರು ಕಳೆದ ವಾರ ರಜೆಯ ಮೆಲೆ ತೆರಳಿರುವುದರಿಂದ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.

  ಹಸ್ತಪ್ರತಿಗಳ ಪ್ರತಿಗಳನ್ನು ನೀಡುವುದರಲ್ಲಿ ಕಾಪಿರೈಟ್ ಪ್ರಶ್ನೆ ಅಡಗಿದೆ ಎನ್ನುವುದು ಎನ್‌ಎಂಎಂ ನಿಲುವಾಗಿದೆ. ಕಳೆದ ಆಗಸ್ಟ್‌ನಲ್ಲಿ ಪತಂಜಲಿಗೆ ಪತ್ರವನ್ನು ಬರೆದಿದ್ದ ರೆಡ್ಡಿ, ಎನ್‌ಎಂಎಂ ಹಸ್ತಪ್ರತಿಗಳ ಮಾಲಿಕರ ಪೂರ್ವಾನುಮತಿಯಿಲ್ಲದೇ ಯಾವುದೇ ಹಸ್ತಪ್ರತಿಯ ಡಿಜಿಟಲ್ ಪ್ರತಿಯನ್ನು ಮೂರನೇ ವ್ಯಕ್ತಿಗೆ ಹಸ್ತಾಂತರಿಸುವಂತಿಲ್ಲ. ಒಡೆತನ ಹಕ್ಕುಗಳ ಬಗ್ಗೆ ನಾವು ಸಚಿವಾಲಯಕ್ಕೆ ಬರೆದಿದ್ದೇವೆ ಮತ್ತು ಎನ್‌ಎಂಎಂ ವೆಬ್‌ಸೈಟ್‌ನಲ್ಲಿ ಡಿಜಿಟಲ್ ಡಾಟಾವನ್ನು ಜನತೆಗೆ ಲಭ್ಯವಾಗಿಸಲು ಅನುಮತಿ ನೀಡುವಂತೆ ಡಿಜಿಟಲೈಸೇಷನ್ ಯೋಜನೆಯ ವ್ಯಾಪ್ತಿಯಡಿಯ ಸಂಸ್ಥೆಗಳನ್ನು ಕೋರಿದ್ದೇವೆ ಎಂದು ತಿಳಿಸಿದ್ದರು.

ಆದರೆ ಪತಂಜಲಿಯ ಆಲೋಚನೆ ಭಿನ್ನವಾಗಿದೆ. ದೇಶಾದ್ಯಂತದಿಂದ ಹಸ್ತಪ್ರತಿಗಳನ್ನು ಸಂಗ್ರಹಿಸಲು ಎನ್‌ಎಂಎಂ ಕೋಟ್ಯಂತರ ರೂ.ಗಳನ್ನು ವ್ಯಯಿಸುತ್ತಿದೆ. ಆದರೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಅದನ್ನು ಬಳಸಿಕೊಳ್ಳುತ್ತಿಲ್ಲ. ಹಸ್ತಪ್ರತಿಗಳಲ್ಲಿನ ಜ್ಞಾನವನ್ನು ಜನರೊಂದಿಗೆ ಹಂಚಿಕೊಳ್ಳುವ ತನ್ನ ಕರ್ತವ್ಯದಿಂದ ಅದು ವಿಮುಖಗೊಂಡಿದೆ ಎಂದು ಪತಂಜಲಿ ಆರೋಪಿಸಿದೆ.

 ಟ್ರಸ್ಟ್ ಈಗಾಗಲೇ ವಿವಿಧ ಮೂಲಗಳಿಂದ 2000 ವರ್ಷಗಳಷ್ಟು ಹಳೆಯ ಹಸ್ತಪ್ರತಿಗಳನ್ನು ಸಂಗ್ರಹಿಸಿ ಸುಮಾರು ಎರಡು ಡಝನ್‌ಗಳಷ್ಟು ಸಂಶೋಧನಾ ಕೃತಿಗಳು ಮತ್ತು ಹೊತ್ತಗೆಗಳನ್ನು ಪ್ರಕಟಿಸಿದೆ ಎಂದು ತಿಳಿಸಿದ ಪತಂಜಲಿ ಯೋಗಪೀಠದ ಪ್ರಧಾನ ಕಾರ್ಯದರ್ಶಿ ಆಚಾರ್ಯ ಬಾಲಕೃಷ್ಣ ಅವರು, ಯಾವುದೇ ವಾಣಿಜ್ಯಿಕ ಲಾಭದ ಉದ್ದೇಶವಿಲ್ಲದೆ ಕೇವಲ ಸಂಶೋಧನೆಗಾಗಿ ಮತ್ತು ಜನರ ಲಾಭಕ್ಕಾಗಿ ಪ್ರಕಟಣೆಗಾಗಿ ನಾವು ಹಸ್ತಪ್ರತಿಗಳ ಡಿಜಿಟಲ್ ಪ್ರತಿಗಳಿಗಾಗಿ ಪದೇ ಪದೇ ಕೋರಿದ್ದೇವೆ. ಕಳೆದ 4-5 ವರ್ಷಗಳಿಂದಲೂ ಈ ಬಗ್ಗೆ ಪ್ರಯತ್ನಿಸುತ್ತಿದ್ದೇವೆ. ಎನ್‌ಎಂಎಂ ನಿರ್ದೇಶಕರೊಂದಿಗೂ ನಾನು ಮಾತನಾಡಿದ್ದೇನೆ. ಆದರೆ ಯಾವುದೇ ಉಪಯೋಗವಾಗಿಲ್ಲ ಎಂದರು.

ಕಳೆದ ಸೆಪ್ಟೆಂಬರ್‌ನಲ್ಲಿ ಪತಂಜಲಿಯ ಪರವಾಗಿ ಸಂಸ್ಕೃತಿ ಸಚಿವ ಮಹೇಶ ಜೋಶಿ ಅವರು ಹಸ್ತಕ್ಷೇಪ ಮಾಡಿದ ನಂತರ ರೆಡ್ಡಿಯವರು ಹಸ್ತಪ್ರತಿಗಳ ಡಿಜಿಟಲ್ ಪ್ರತಿಗಳನ್ನು ಪತಂಜಲಿಗೆ ಹಸ್ತಾಂತರಿಸುವಂತೆ ಕೋರಿ ಹಸ್ತಪ್ರತಿ ಸಂಪನ್ಮೂಲ ಕೇಂದ್ರ(ಎಂಆರ್‌ಸಿ)ಗಳು ಮತ್ತು ಹಸ್ತಪ್ರತಿ ಸಂರಕ್ಷಣಾ ಕೇಂದ್ರ(ಎಂಸಿಸಿ)ಗಳಿಗೆ ಮೇಲ್ ಕಳುಹಿಸಿದ್ದರು. ಆದರೆ ಈ ಮೇಲ್ ಯಾವುದೇ ಫಲ ನೀಡಿಲ್ಲ. ಈ ಕೇಂದ್ರಗಳಿಂದ ಹಸ್ತಪ್ರತಿಗಳನ್ನು ಪಡೆದುಕೊಳ್ಳುವ ಎನ್‌ಎಂಎಂ ಡಿಜಿಟಲೀಕರಣದ ಬಳಿಕ ಮೂಲಪ್ರತಿ ಗಳನ್ನು ಡಿಜಿಟಲ್ ಪ್ರತಿಗಳೊಂದಿಗೆ ಅವುಗಳಿಗೆ ವಾಪಸ್ ಮಾಡುತ್ತದೆ.

ಎನ್‌ಎಂಎಂ ಈವರೆಗೆ ಸುಮಾರು 1200 ಯೋಗ ಮತ್ತು ಆಯುರ್ವೇದ ಹಸ್ತಪ್ರತಿಗಳನ್ನು ಡಿಜಿಟಲೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News