ಸಚಿವ ಎಂ.ಆರ್.ಸೀತಾರಾಂ ಮೇಲ್ಮನೆ ಸಭಾನಾಯಕನಾಗಿ ನಾಮನಿರ್ದೇಶನ

Update: 2017-11-13 18:06 GMT

ಬೆಳಗಾವಿ, ನ.13: ಯೋಜನೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಪರಿಷತ್ತಿನ ಸಭಾನಾಯಕರನ್ನಾಗಿ ನಾಮನಿರ್ದೇಶನ ಮಾಡಿರುವುದಾಗಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸದನದಲ್ಲಿ ಪ್ರಕಟಿಸಿದರು.

ಶತಮಾನದ ಇತಿಹಾಸ ಹೊಂದಿರುವ ಈ ಸದನದ ಸಭಾನಾಯಕನನ್ನಾಗಿ ನಾಮನಿರ್ದೇಶನ ಮಾಡಿದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸದನದ ಗೌರವವನ್ನು ಎತ್ತಿ ಹಿಡಿಯುತ್ತೇನೆ. ಎಲ್ಲ ಸದಸ್ಯರ ಸಲಹೆ, ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಂದುವರೆಯುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿಯನ್ನು ನೀಡಿದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಎಂ.ಆರ್.ಸೀತಾರಾಂ ಅವರನ್ನು ಈ ಸದನದ ಸಭಾನಾಯಕರನ್ನಾಗಿ ನೇಮಕ ಮಾಡಿದ್ದಕ್ಕೆ ಕಾಂಗ್ರೆಸ್‍ನವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಪಕ್ಷಗಳನ್ನು ತಾತ್ಸರ ಮಾಡದೆ, ಸರಕಾರದ ಬಗ್ಗೆ ನಾವು ಮಾಡುವ ಟೀಕೆಗಳನ್ನು ಸಕಾರಾತ್ಮವಾಗಿ ಸ್ವೀಕರಿಸಿ, ಸರಕಾರದ ಸಮರ್ಥನೆಗಾಗಿ ಇದನ್ನು ಪಾಂಡಿತ್ಯ ಪ್ರದರ್ಶನದ ವೇದಿಕೆಯನ್ನಾಗಿಸಬೇಡಿ. ಆಡಳಿತ-ವಿಪಕ್ಷಗಳ ಉದ್ದೇಶ ಜನರ ಕಲ್ಯಾಣ ಮಾತ್ರ ಎಂಬುದು ನೆನಪಿನಲ್ಲಿಡಿ ಎಂದರು.

ಜೆಡಿಎಸ್ ಸದಸ್ಯ ರಮೇಶ್‍ಬಾಬು ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅನುಭವನ ಎಂ.ಆರ್.ಸೀತಾರಾಂ ಹಾಗೂ ಅವರ ಕುಟುಂಬಕ್ಕಿದೆ. ಶಿಕ್ಷಣ ಕ್ಷೇತ್ರಗಳ ಮೂಲಕ ಅಪಾರ ಸೇವೆಯನ್ನು ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷದ ವತಿಯಿಂದ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮಲೆನಾಡು ಅಭಿವೃದ್ಧಿ ಮಂಡಳಿಯು ನಿಮ್ಮ ಅಧೀನದಲ್ಲಿ ಬರುತ್ತದೆ. ಆದರೆ, ನಿಮ್ಮ ಬಳಿ ದುಡ್ಡೆ ಇಲ್ಲ. ಸರಕಾರ ಘೋಷಣೆ ಮಾಡಿರುವ ಅನುದಾನವು ಈ ಮಂಡಳಿಗೆ ಬಂದಿಲ್ಲ. ಮಲೆನಾಡು ವ್ಯಾಪ್ತಿಯಲ್ಲಿರುವ ಕ್ಷೇತ್ರಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸರಕಾರದಿಂದ ಅಗತ್ಯ ಅನುದಾನ ಪಡೆದುಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದೆ ಎಂದು ಎಂ.ಆರ್.ಸೀತಾರಾಂಗೆ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News