ದತ್ತಮಾಲೆ: ಶಾಂತಿ, ಶಿಸ್ತು ಪಾಲನೆಗೆ ಡಿಸಿ ಸೂಚನೆ

Update: 2017-11-13 18:31 GMT

ಚಿಕ್ಕಮಗಳೂರು, ನ.13: ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಕೆ ಶ್ರೀರಂಗಯ್ಯ ಅವರು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ಹಾಗೂ 39ರ ಅಡಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಜಿಲ್ಲೆಯಾದ್ಯಂತ ನ. 12ರಿಂದ 20ರವರೆಗೆ ಶಾಂತಿ ಶಿಸ್ತು ಪಾಲನೆ ಹಾಗೂ ಘನ ನ್ಯಾಯಾಲಯಗಳ ಆದೇಶ ಪಾಲನಾ ದೃಷ್ಟಿಯಿಂದ ಷರತ್ತು ಬದ್ಧ ನಿಬಂಧನೆಗಳನ್ನು ಮುಂಜಾಗೃತಾ ಕ್ರಮವಾಗಿ ವಿಧಿಸಿ ಸೋಮವಾರ ಅಧಿಸೂಚನೆ ಹೊರಡಿಸಿದ್ದಾರೆ.

ದತ್ತಮಾಲಾಧಾರಣೆ, ಶೋಭಾಯಾತ್ರೆ-ಬೈಕ್ ಜಾಥಾ ಸಂದಭರ್ಗಳಲ್ಲಿ ಕಾರ್ಯಕ್ರಮದಲ್ಲಿ ಧಾರ್ಮಿಕ ಸಂಸ್ಥೆ ಅಥವಾ ಸ್ಥಳದಲ್ಲಿ ಅವುಗಳ ಕಟ್ಟುಪಾಡು, ಪದ್ಧತಿ, ನೀತಿ ನಿಯಮಗಳಿಗೆ ಷರತ್ತುಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಯಾವುದೇ ರೀತಿಯ ಮಾರಕಾಸ್ತ್ರ, ಶಸ್ತ್ರಾಸ್ತ್ರ, ಆಯುಧಗಳನ್ನು ಹಾಗೂ ದೈಹಿಕವಾಗಿ ಹಿಂಸೆಯನ್ನುಂಟು ಮಾಡುವ ಯಾವುದೇ ಸಲಕರಣೆಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಸ್ಫೋಟಕ/ಸಿಡಿಮದ್ದುಗಳ ಸಾಗಣೆೆ-ದಾಸ್ತಾನು ಹಾಗೂ ಬಳಕೆಯನ್ನು ಖಾಸಗಿ ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸುವುದು, ಬಂದ್, ಪ್ರತಿಭಟನೆ, ಮುಷ್ಕರ, ಪ್ರತಿಕೃತಿ ದಹನ, ಪ್ರದರ್ಶನ ಹಾಗೂ ಪೂರಕ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಕಾರ್ಯಕ್ರಮದ ಅವಧಿಯಲ್ಲಿ ಇತರ ಸಾರ್ವಜನಿಕರಿಗೆ, ಜನಸಾಮಾನ್ಯರಿಗೆ ಅವರ ದೈನಂದಿನ ಚಟುವಟಿಕೆ ಹಾಗೂ ವ್ಯವಹಾರಗಳಿಗೆ, ಸಂಚಾರ ಮತ್ತು ಸಂಪರ್ಕಗಳಿಗೆ ಧಕ್ಕೆಯಾಗದಂತೆ ಕ್ರಮ ವಹಿಸುವುದು ಆಯಾ ಸಂಘಟಕರ ಜವಾಬ್ದಾರಿಯಾಗಿರುತ್ತದೆ.

ಸಂಘಟನಾಕಾರರು, ದತ್ತಮಾಲಾಧಾರಿಗಳು ಹಾಗೂ ಭಕ್ತಾಧಿಗಳು ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಮಾರ್ಗದಿಂದ ಇನಾಂ ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ, ಐ.ಡಿ ಪೀಠಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಮಾರ್ಗಗಳಲ್ಲಿ ಯಾವುದೇ ಘೋಷಣೆ, ಅವಾಚ್ಯ ಶಬ್ಧಗಳ ಬಳಕೆ, ನಿಂದನೆ, ವೇದಿಕೆ ನಿರ್ಮಾಣ, ಭಾಷಣ, ಸ್ಫೋಟಕ ಬಳಕೆ, ಮದ್ಯಪಾನ ಬಳಕೆ, ಬ್ಯಾನರ್-ಭಿತ್ತಿಪತ್ರಗಳ ಪ್ರದರ್ಶನ ಪ್ರತಿಕೃತಿ ದಹನ ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ, ವಿರೂಪಗೊಳಿಸುವ ಮತ್ತು ನಿಂದನಾರ್ಹ ಚಟುವಟಿಕೆಗಳನ್ನು ಮತ್ತು ಸಂಚಾರ ಹಾಗೂ ಸಂಪರ್ಕಕ್ಕೆ ಯಾವುದೇ ಅಡತಡೆ ಮಾಡುವುದನ್ನು ನಿಷೇಧಿಸಿದೆ.

ಪಾದುಕೆ ದರ್ಶನಕ್ಕಾಗಿ ನಿಗದಿಗೊಳಿಸಿರುವ ಮಾರ್ಗ ಹಾಗೂ ಸ್ಥಳಗಳಲ್ಲಿಯೇ ಪ್ರತಿಯೊಬ್ಬರೂ ಶಿಸ್ತು, ಸಂಯಮದಿಂದ ದರ್ಶನ ಮಾಡಿ ಹೊರಬರುವುದು ಕಡ್ಡಾಯ ಹಾಗೂ ವಾಹನ ನಿಲುಗಡೆಗೆ ನಿಗದಿಗೊಳಿಸಿರುವ ಸ್ಥಳದಲ್ಲಿ ನಿಲುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News