ಕೃಷಿಯಲ್ಲಿ ವೈಜ್ಞಾನಿಕ ವಿಧಾನ ಅನುಸರಿಸಿ: ಶಕ್ತಿವೇಲು

Update: 2017-11-13 18:44 GMT

ಬಣಕಲ್, ನ.13: ಕಾರ್ಮಿಕರ ಕೊರತೆ, ಪುರಾತನ ಕೃಷಿ ವಿಧಾನ ಮತ್ತು ಕಡಿಮೆ ಇಳುವರಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಮಲೆನಾಡಿನ ಕೃಷಿಕರು ವೈಜ್ಞಾನಿಕ ಕೃಷಿ ವಿಧಾನ ಅನುಸರಿಸುವುದರಿಂದ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಬಣಕಲ್ ಪೋಲಿಸ್ ಠಾಣಾಧಿಕಾರಿ ಶಕ್ತಿವೇಲು ಸಲಹೆ ನೀಡಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ತ್ರಿಪುರ ಬೆಟ್ಟಗೆರೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ವತಿಯಿಂದ ಬೆಟ್ಟಗೆರೆಯಲ್ಲಿ ಸೋಮವಾರ ನಡೆದ ‘ಕೃಷಿ ವಿಚಾರ ಸಂಕಿರಣ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಲೆನಾಡಿನ ಯುವಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿದ್ದು, ಬದಲಾದ ಕಾಲಮಾನದಲ್ಲಿ ಕೃಷಿ ಕ್ಷೇತ್ರದಲ್ಲೂ ಆಧುನಿಕ ಕೃಷಿ ವಿಧಾನಗಳನ್ನು ಬಳಸುವ ಮೂಲಕ ಮತ್ತೆ ಯುವಪೀಳಿಗೆ ಕೃಷಿಯತ್ತ ಮುಖಮಾಡುವಂತೆ ಉತ್ತೇಜಿಸಬೇಕಿದೆ. ಅಲ್ಲದೆ, ಸಾವಯವ ಕೃಷಿ ವಿಧಾನದಿಂದ ಬೆಳೆ ಬೆಳೆಯುವ ವಿಧಾನಗಳತ್ತ ಕೃಷಿಕರು ಗಮನಹರಿಸಬೇಕಿದೆ ಎಂದರು.

ಬೆಟ್ಟಗೆರೆ ಪ್ರಗತಿ ಬಂಧು ಸ್ವಸಹಾಯ ಸಂಘದ ಅಧ್ಯಕ್ಷರಾದ ಬಿ.ಕೆ.ಲೋಕೇಶ್ ಮಾತನಾಡಿ, ಕೃಷಿಯ ಜೊತೆಗೆ ಹೈನುಗಾರಿಕೆ, ಅಣಬೆ ಕೃಷಿ ಸೇರಿದಂತೆ ಕೃಷಿ ಸಂಬಂಧಿಸಿದ ಕಾರ್ಯಗಳನ್ನು ಮಾಡುವುದರಿಂದ ಕೃಷಿಯಲ್ಲಿ ನಷ್ಟವಾಗುವ ಪ್ರಮಾಣ ಕಡಿಮೆಯಾಗುತ್ತದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮೂಡಿಗೆರೆಯಲ್ಲಿ ಹಾಲಿನ ಡೈರಿ ನಿರ್ಮಿಸಿದರೆ, ಕೃಷಿಕರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕು. ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಅಧಿಕಾರಿಗಳು ಯೋಜನೆಯ ಪ್ರಗತಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಬೇಕು ಎಂದು ತಿಳಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸಂಜೀವನಾಯಕ್ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಸುನಾಗ್ ಮತ್ತು ಸಿಎಚ್‌ಎಸ್‌ಸಿ ಸಮನ್ವಯಾಧಿಕಾರಿ ಕೇಶವನಾಯ್ಕ್ಕಿ ಕೃಷಿ ಯಾಂತ್ರಿಕರಣ ಹಾಗೂ ಸಾವಯವ ಕೃಷಿಯ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಬೆಟ್ಟಗೆರೆ ಗ್ರಾಪಂ ಅಧ್ಯಕ್ಷೆ ಮಮತಾ ರಾಜಮೋಹನ್, ಪ್ರಗತಿಬಂಧು ಸ್ವಸಹಾಯ ಸಂಘದ ಬೆಟ್ಟಗೆರೆ ಸಂಘದ ಅಧ್ಯಕ್ಷೆ ಶಾಂತ, ತ್ರಿಪುರ ಸಂಘದ ಅಧ್ಯಕ್ಷ ಮುತ್ತೆಗೌಡ, ಉಪಾಧ್ಯಕ್ಷೆ ಸಾವಿತ್ರಿ, ಬೆಟ್ಟಗೆರೆ ಪ್ರೌಡಶಾಲೆ ಮುಖ್ಯ ಶಿಕ್ಷಕ ಚಂದ್ರಪ್ಪ, ಗ್ರಾಮಾಭಿವೃದ್ಧಿ ಯೋಜನೆಯ ತಿಮ್ಮಪ್ಪಪಟೆಗಾರ, ಯುವ ಸಾಹಿತಿ ನಂದೀಶ್, ಗ್ರಾಮಸ್ಥ ಸುಂದ್ರೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News