ಭಕ್ತರಿಗೆ ಸಮಾನ ಅವಕಾಶ: ತಿರುಪತಿಗೆ ಅನ್ವಯವಾದೀತೇ?

Update: 2017-11-14 03:57 GMT

ಚೆನ್ನೈ, ನ.14: ದೇವರ ಎದುರು ಎಲ್ಲ ಭಕ್ತರೂ ಸಮಾನರು. ಆದ್ದರಿಂದ ದೇವರ ಮೂರ್ತಿ ಮತ್ತು ಭಕ್ತರ ನಡುವಿನ ಅಂತರ ಉಚಿತ ದರ್ಶನ ಪಡೆಯುವ ಮತ್ತು ಪಾವತಿ ದರ್ಶನ ಪಡೆಯುವ ಭಕ್ತರಿಗೆ ಸಮಾನವಾಗಿರುವಂತೆ ನೋಡಿಕೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್, ರಾಜ್ಯದ ಎಲ್ಲ ಪ್ರಮುಖ ದೇವಾಲಯಗಳ ಆಡಳಿತ ಮಂಡಳಿಗಳಿಗೆ ಸೂಚಿಸಿದೆ.

ತಿರುಪತಿ ತಿರುಮಲ ದೆವಸ್ಥಾನಮ್ ಜನಪ್ರಿಯಗೊಳಿಸಿದ ಪಾವತಿ ದರ್ಶನ ವಿಧಾನದಲ್ಲಿ ಹಣ ಪಾವತಿ ಮಾಡಿದ ಭಕ್ತರಿಗೆ ಹಾಗೂ ಉಚಿತ ದರ್ಶನ ಪಡೆಯುವ ಭಕ್ತರನ್ನು ಭಿನ್ನವಾಗಿ ಪರಿಗಣಿಸುವ ಪದ್ಧತಿ ಇದ್ದು, ಮದ್ರಾಸ್ ಹೈಕೋರ್ಟ್ ಆದೇಶದಿಂದ ಅಲ್ಲೂ ಈ ತಾರತಮ್ಯ ನೀತಿ ಬದಲಾವಣೆಯಾದೀತೆ ಎನ್ನುವ ಕುತೂಹಲ ಭಕ್ತರಲ್ಲಿದೆ.

ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಎಂ.ಸುಂದರ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. ಇಂಡಿಕ್ ಕಲೆಕ್ಟಿವ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ ಈ ತೀರ್ಪು ನೀಡಿದೆ. ಪಾವತಿ ದರ್ಶನದ ಸರದಿಯಲ್ಲಿ ಬರುವ ಭಕ್ತರನ್ನು ವಿಶೇಷವಾಗಿ ಪರಿಗಣಿಸಿ ಹತ್ತಿರದಿಂದ ದೇವರನ್ನು ನೋಡುವ ಅವಕಾಶವನ್ನು ತಪ್ಪಿಸಿ, ಎಲ್ಲರನ್ನೂ ಸಮಾನವಾಗಿ ಪರಿಗಣಿಸಲು ಸೂಚನೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

"ಕೇವಲ ಹಣಕಾಸು ಪರಿಗಣನೆ ಆಧಾರದಲ್ಲಿ ತಾರತಮ್ಯ ಮಾಡುವುದು ಭಕ್ತರಿಗೆ ಸಂವಿಧಾನದ 14 ಮತ್ತು 25ನೇ ವಿಧಿಯಲ್ಲಿ ನೀಡಿರುವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಹಣದ ಆಧಾರದಲ್ಲಿ ತಾರತಮ್ಯ ಮಾಡಲಾಗದು. ಜಾತಿ, ಲಿಂಗ ಅಥವಾ ಹಣಕಾಸು ಸಾಮರ್ಥ್ಯದ ಆಧಾರದಲ್ಲಿ ಮಾಡುವ ತಾರತಮ್ಯವು ಧರ್ಮವನ್ನು ಆಚರಿಸುವ ಹಕ್ಕಿಗೆ ವಿರುದ್ಧವಾದದ್ದು" ಎಂದು ನ್ಯಾಯಪೀಠ ಹೇಳಿದೆ. ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳು ಲಾಭ ಗಳಿಸುವ ಉದ್ದೇಶದಿಂದ ಸ್ಥಾಪನೆಯಾದವುಗಳಲ್ಲ ಎಂದು ಹೈಕೋರ್ಟ್ ಚಾಟಿ ಬೀಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News