ಮೈಸೂರಿನಲ್ಲಿ ಅಪಘಾತ: ಉಳ್ಳಾಲದ ಒಂದೇ ಕುಟುಂಬದ ಮೂವರು ಮೃತ್ಯು

Update: 2017-11-14 14:42 GMT

ಹುಣಸೂರು : ನ.14. ಮೈಸೂರು ಸಮೀಪದ ಹುಣಸೂರು ಬಳಿ ಮಂಗಳವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಉಳ್ಳಾಲದ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟು 14 ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.

ಮೂಲತ: ಉಳ್ಳಾಲ ಮಾಸ್ತಿಕಟ್ಟೆಯ ಪ್ರಸ್ತುತ ತೊಕ್ಕೊಟ್ಟುವಿನ ವಸತಿ ಸಂಕೀರ್ಣವೊಂದರಲ್ಲಿ ವಾಸವಾಗಿದ್ದ ಅಬ್ದುಲ್ ಹಮೀದ್ (52) ಮತ್ತವರ ಪುತ್ರ ಶೇಖ್ ಹಕೀಫ್ (11) ಹಾಗೂ ಹಮೀದ್‌ರ ಸಹೋದರ ಮುಹಮ್ಮದ್ ಇಕ್ಬಾಲ್(45) ಮೃತಪಟ್ಟವರು.

ಒಂದೇ ಕುಟುಂಬದ 17 ಮಂದಿ ಸೋಮವಾರ ರಾತ್ರಿ ಊಟಿ ಮತ್ತಿತರ ಕಡೆ ಟೆಂಪೊ ಟ್ರಾವೆಲರ್‌ನಲ್ಲಿ ಪ್ರವಾಸಕ್ಕೆ ತೆರಳಿದ್ದರು. ಮೈಸೂರು ಜಿಲ್ಲೆಯ ಹುಣಸೂರಿನ ಕೊಳಘಟ್ಟ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾನೆ ಸುಮಾರು 4ರ ವೇಳೆಗೆ ಇವರು ಚಲಿಸುತ್ತಿದ್ದ ಟಿಟಿ ಲಾರಿಯೊಂದನ್ನು ಓವರ್‌ಟೇಕ್ ಮಾಡುವ ಭರಾಟೆಯಲ್ಲಿ ಹಿಂಬದಿಗೆ ಢಿಕ್ಕಿ ಹೊಡೆಯಿತು. ಇದರಿಂದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದರೆ ಉಳಿದ 14 ಮಂದಿ ಗಾಯಗೊಂಡರು ಎನ್ನಲಾಗಿದೆ. ಗಾಯಾಳುಗಳನ್ನು ಹುಣಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಹುಣಸೂರು ತಾಲೂಕಿನ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ

ಚಾಲಕನ ಎಡಬದಿಯಲ್ಲಿ ಹಮೀದ್ ಮತ್ತವರ ಪುತ್ರ ಹಕೀಫ್ ಕುಳಿತಿದ್ದರು. ಹಮೀದ್‌ರ ಹಿಂಬದಿಯಲ್ಲಿ ಸಹೋದರ ಇಕ್ಬಾಲ್ ಕುಳಿತಿದ್ದರು. ಮೂವರ ತಲೆಗೆ ಗಂಭಿರ ಗಾಯವಾದ ಕಾರಣ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು ಎನ್ನಲಾಗಿದೆ. ರಾಹಿಲ್, ಅನ್ವೀಝ್, ಖತೀಜಾ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಉಳಿದ 12 ಮಂದಿ ಗಂಭೀರ ಗಾಯಗೊಂಡು ಕೆಲವರು ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿದೆ.

ಪ್ರವಾಸ ಹೊರಟಿದ್ದರು

ಉಳ್ಳಾಲದ ಮಾಸ್ತಿಕಟ್ಟೆಯ ದಿ. ಹಬ್ಬಮ್ಮ ಅವರಿಗೆ ಎಂಟು ಮಂದಿ ಮಕ್ಕಳಿದ್ದು ಆ ಪೈಕಿ ಐವರು ಸಹೋದರರು ಮತ್ತು ಮೂವರು ಸಹೋದರಿಯರು. ಹಿರಿಯ ಪುತ್ರ ಹಮೀದ್ (52) ಮತ್ತು ಅವರ ಪತ್ನಿ ಆತಿಕಾ ಮಲಾರ್ (40) ಹಾಗೂ ಅವರ ಮಕ್ಕಳಾದ ಅನ್ವೀಝ್ (19) ಮತ್ತು ಶೇಖ್ ಹಕೀಫ್ (11) ಮತ್ತು ಹಮೀದ್‌ರ ಸಹೋದರ ಇಕ್ಬಾಲ್ (45), ಇಕ್ಬಾಲ್‌ರ ಪತ್ನಿ ರಳಿಯಾ (38) ಮತ್ತು ಅವರ ಮಕ್ಕಳಾದ ರಾಹಿಲ್ (18), ಇಷಾ ಹಾಗೂ ಹಮೀದ್‌ರ ಇನ್ನೋರ್ವ ಸಹೋದರ ಸಂಶುದ್ದೀನ್‌ರ ಪತ್ನಿ ಮುಮ್ತಾಝ್ (29) ಮಕ್ಕಳಾದ ಆಸೀಫ್ (10), ಶಬೀರ್ (11), ಹಮೀದ್‌ರ ಸಹೋದರಿಯರಾದ ಸಿದ್ಧಕಟ್ಟೆಯ ನಝೀಮಾ ಯಾನೆ ಖತೀಜಮ್ಮ (45), ಸಮೀರಾ ಬಾನು (44) ಮತ್ತು ಫಮೀದಾ ಬಾನು (35) ಹಾಗೂ ಇವರ ಪತಿ ಸೈಯದ್ ಬಾವಾ (42) ಹಾಗೂ ಮಕ್ಕಳಾದ ಶಿಬ್ಲಾ, ಶಮೀಝ್ (11), ಶಹೀಮ್ (13) ಹಾಗೂ ಚಾಲಕ ದೀಪಕ್ ಸಹಿತ 19 ಮಂದಿ ಮೈಸೂರು, ಊಟಿಗೆ ಸೋಮವಾರ ರಾತ್ರಿ ಸುಮಾರಿ 11:30ಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ತಂಡದಲ್ಲಿ ಒಟ್ಟು 11 ಮಂದಿ ದೊಡ್ಡವರು ಮತ್ತು 8 ಮಂದಿ ಮಕ್ಕಳು ಇದ್ದರು.
 

ವಿದೇಶದಿಂದ ಬಂದಿದ್ದರು

ಹಮೀದ್ ಹಲವು ವರ್ಷ ಉಳ್ಳಾಲ ಆಸುಪಾಸು ಲಾಂಡ್ರಿ ಅಂಗಡಿ ನಡೆಸುತ್ತಿದ್ದರು. ಅವರ ಸಹೋದರ ಇಕ್ಬಾಲ್ ಕೂಡ ಹಲವು ವರ್ಷಗಳಿಂದ ವಿದೇಶದಲ್ಲಿದ್ದರು. ಪ್ರತಿ ವರ್ಷವೂ ಊರಿಗೆ ಬರುತ್ತಿದ್ದ ಅವರು ಈ ಬಾರಿ ಕುಟುಂಬ ಸಮೇತರಾಗಿ ಪ್ರವಾಸ ಹೋಗಲು ನಿರ್ಧರಿಸಿದ್ದರು. ನ.4 ರಂದು ಊರಿಗೆ ಬಂದಿದ್ದ ಇಕ್ಬಾಲ್ ಕುಟುಂಬ ಸಮೇತರಾಗಿ ಪ್ರವಾಸ ಕೈಗೊಳ್ಳುವ ಯೋಜನೆ ರೂಪಿಸಿ ಸೋಮವಾರ ರಾತ್ರಿ ಕುಟುಂಬದ ಸದಸ್ಯರ ಜೊತೆಗೂಡಿ ಪ್ರವಾಸ ಹೊರಟಿದ್ದರು. ಡಿಸೆಂಬರ್ 27ಕ್ಕೆ ಮತ್ತೆ ವಿದೇಶಕ್ಕೆ ತೆರಳುವುದರಲ್ಲಿದ್ದರು.

ಮಡಿಕೇರಿಯಲ್ಲಿ ತಂಗಲು ಬಯಸಿದ್ದರು

ವಾಮಂಜೂರು ನಿವಾಸಿಯೋರ್ವರಿಗೆ ಸೇರಿದ ಟೆಂಪೋ ಟ್ರಾವೆಲರ್‌ನಲ್ಲಿ ಬಗಂಬಿಲದ ದೀಪಕ್ ಚಾಲಕರಾಗಿದ್ದರು. ಟಿಟಿ ಬುಕಿಂಗ್ ವೇಳೆ ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಮಡಿಕೇರಿಯಲ್ಲಿ ತಂಗುವುದಾಗಿ ಚಾಲಕನಲ್ಲಿ ತಿಳಿಸಿದ್ದು, ತಡರಾತ್ರಿಯಲ್ಲಿ ಮಂಜು ಮುಸುಕಿರುವುದರಿಂದ ಮರುದಿನ ಬೆಳಗ್ಗೆಯೇ ಮೈಸೂರಿಗೆ ತೆರಳುವುದಾಗಿ ಸೂಚಿಸಿದ್ದರು. ಆದರೆ ಸೋಮವಾರ ರಾತ್ರಿ ಮಡಿಕೇರಿಯಲ್ಲಿ ತಂಗದೇ ನೇರವಾಗಿ ಮೈಸೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಆರ್ಥಿಕವಾಗಿ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ಮೃತ ಹಮೀದ್ ಉಳ್ಳಾಲದ ಮಾಸ್ತಿಕಟ್ಟೆ ಸಮೀಪ ಸ್ಟಿಕ್ಕರ್ ಕಟ್ಟಿಂಗ್ ಶಾಪ್ ಹೊಂದಿದ್ದು, ಕುಟುಂಬದ ಆಧಾರ ಸ್ತಂಭವಾಗಿದ್ದರು. ಅವರ ಪುತ್ರ ಹಕೀಫ್ ನಗರದ ಪೀಸ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಇಕ್ಬಾಲ್ ಕೂಡಾ ಹಲವು ವರ್ಷಗಳಿಂದ ದೇಶದಲ್ಲಿದ್ದರೂ ಉದ್ಯಮದಲ್ಲಿ ಪ್ರಗತಿ ಸಾಧಿಸಿರಲಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ಉದ್ದಿಮೆಯಲ್ಲಿ ಬಹಳಷ್ಟು ಚೇತರಿಕೆಯನ್ನು ಕಂಡಿದ್ದರು ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.

ಕೊನೆ ಕ್ಷಣದಲ್ಲಿ ತೆರಳಿದ್ದರು 

ಹಮೀದ್ ಮತ್ತವರ ಪತ್ನಿ ಆತಿಕಾ ಪ್ರವಾಸಕ್ಕೆ ಹೊರಡಲು ಸಿದ್ಧರಿರಲಿಲ್ಲ. ಆದರೆ ಕಿರಿಯ ಪುತ್ರ ಹಕೀಫ್‌ನ ಒತ್ತಡಕ್ಕೆ ಮಣಿದು ರಾತ್ರಿ 10:30ರ ಬಳಿಕ ಪ್ರವಾಸ ಕೈಗೊಳ್ಳಲು ಒಪ್ಪಿಕೊಂಡರು. ಇನ್ನೋರ್ವ ಸಹೋದರ ಶಬೀರ್ ತನ್ನ ಪತ್ನಿಯ ಅನಾರೋಗ್ಯದ ಕಾರಣ ಮತ್ತು ಮಂಗಳವಾರ ಮಕ್ಕಳಿಗೆ ಕಾರ್ಯಕ್ರಮವಿರುವುದರಿಂದ ಪ್ರವಾಸಕ್ಕೆ ಹೊರಟಿರಲಿಲ್ಲ. ಸಂಶುದ್ದೀನ್ ಕೆಲಸದ ನಿಮಿತ್ತ ಪ್ರವಾಸಕ್ಕೆ ತೆರಳದೆ ಪತ್ನಿ ಮತ್ತು ಮಕ್ಕಳನ್ನು ಕಳುಹಿಸಿಕೊಟ್ಟಿದ್ದರು ಎಂದು ತಿಳಿದು ಬಂದಿದೆ.

ಸಚಿವ ಖಾದರ್ ಸಂತಾಪ: ಈ ದುರ್ಘಟನೆಗೆ ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
 ಬೆಳಗಾವಿಯ ಅಧಿವೇಶನದಲ್ಲಿರುವ ಕಾರಣ ತನಗೆ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದರೆ, ಘಟನೆ ನಡೆದ ತಕ್ಷಣ ಮಾಹಿತಿ ಪಡೆದು ಮೈಸೂರಿನ ಪೊಲೀಸ್ ಅಧಿಕಾರಿ ಹಾಗೂ ವೈದ್ಯಾಧಿಕಾರಿಯನ್ನು ಕಂಡು ಎಲ್ಲ ವ್ಯವಸ್ಥೆ ಕಲ್ಪಿಸಿದ್ದೇನೆ ಎಂದು ಸಚಿವ ಖಾದರ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News