ಮುಂದುವರಿದ ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರ; ಉಪವಾಸ ಸತ್ಯಾಗ್ರಹ ನಿರ್ಧಾರ

Update: 2017-11-14 05:25 GMT
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ. ರವೀಂದ್ರ ಮತ್ತು ಪದಾಧಿಕಾರಿಗಳ ಜೊತೆ ಮಾತುಕತೆ

ಬೆಳಗಾವಿ, ನ.14: ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರುವ ಮಸೂದೆ ವಿಚಾರದಲ್ಲಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಘಟಕದ ಪದಾಧಿಕಾರಿಗಳ  ಜತೆ ಸರಕಾರ  ಸೋಮವಾರ ನಡೆಸಿದ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ  ಮಂಗಳವಾರದಿಂದ  ಸರದಿ ಉಪವಾಸ ಸತ್ಯಾಗ್ರಹ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ.

ವೈದ್ಯರು ಸೋಮವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆದಿದ್ದರು. ಆದರೆ ಮಂಗಳವಾರ ಪ್ರತಿಭಟನೆಯನ್ನು ಮುಂದುವರಿಸಲು ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಪ್ರತಿಭಟನೆ ಮುಂದುವರಿಸಲು ಅನುಮತಿ ಸಿಕ್ಕಿಲ್ಲ. ಅನುಮತಿಯ ನಿರೀಕ್ಷೆಯಲ್ಲಿದ್ದಾರೆ.

ಈ  ನಡುವೆ ನಾಲ್ಕು ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ವೈದ್ಯರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ. ರವೀಂದ್ರ ಮತ್ತು ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ವಿಫಲವಾಗಿತ್ತು.  ಮುಷ್ಕರವನ್ನು ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಮುಖ್ಯ ಮಂತ್ರಿ ಅವರಲ್ಲಿ ಈ ಸಂದರ್ಭದಲ್ಲಿ ಮನವಿ ಮಾಡಿದ್ದರು. ಆದರೆ ವೈದ್ಯರು ಅವರ ಮನವಿಗೆ ಸ್ಪಂದಿಸದೆ  ತಮ್ಮ ಬೇಡಿಕೆಯ ಈಡೇರಿಕೆಗೆ ಮುಷ್ಕರವನ್ನು ಮುಂದುವರಿಸಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.

ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರುವ ಮಸೂದೆ ಮಂಡಿಸುವ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ಒಮ್ಮತವಿಲ್ಲ. ಕೆಲವು ಸಚಿವರು ಮತ್ತು ಶಾಸಕರು ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ವಿವಾದವನ್ನು ಎಳೆದು  ಹಾಕುವುದು  ಬೇಡ . ವೈದ್ಯರ ವಿರೋಧವನ್ನು ಕಡೆಗಣಿಸಿ ಒಂದು ವೇಳೆ ಮಸೂದೆಯನ್ನು ಮಂಡಿಸಿದರೆ  ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆಯಾಗಬಹುದು  ಎಂದು ಕೆಲವು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಆರೋಗ್ಯ ಸಚಿವ ರಮೇಶ್‌ ಕುಮಾರ್‌  ಮಸೂದೆ   ಮಂಡನೆ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಅವರಿಗೆ ಕೆಲವು ಸಚಿವರು ಮತ್ತು ಶಾಸಕರಿಂದಲೂ ಬೆಂಬಲ ಇದೆ ಎಂದು ತಿಳಿದು ಬಂದಿದೆ.   ಮುಖ್ಯ ಮಂತ್ರಿ ಮಸೂದೆ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.  ಈ ಉದ್ದೇಶಕ್ಕಾಗಿ ನ.15ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ (ಸಿಎಲ್ ಪಿ) ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News