ರೋಗಿಗಳಿಗೆ ಔಷಧಿಯ ಜತೆಗೆ ಹನುಮಾನ್ ಚಾಲಿಸಾ ಓದಿ ಎನ್ನುತ್ತಾರೆ ಈ ವೈದ್ಯ!

Update: 2017-11-14 07:56 GMT

ಜೈಪುರ, ನ.14: ರೋಗಿಯೊಬ್ಬ ಚಿಂತಾಜನಕ ಸ್ಥಿತಿಯಲ್ಲಿದ್ದಾನೆಂದು ಯೋಚಿಸಿ. ಆತನನ್ನು ಉಳಿಸಲು ತನ್ನ ಸರ್ವ ಪ್ರಯತ್ನವನೂ ನಡೆಸುವ ವೈದ್ಯರು ಕೊನೆಗೆ ರೋಗಿಯ ಕುಟುಂಬಸ್ಥರಿಗೆ ಇನ್ನು ದೇವರಿಗೆ ಪ್ರಾರ್ಥಿಸಿ ಎನ್ನುತ್ತಾರೆ. ಇದು ಬಾಲಿವುಡ್ ಚಿತ್ರದ ದೃಶ್ಯದಂತಿದೆ ನಿಜ. ಆದರೆ ನಿಜ ಜೀವನದಲ್ಲೂ ಪ್ರತಿಯೊಬ್ಬ ರೋಗಿಗೂ ಹೀಗೆ ಹೇಳುವ ವೈದ್ಯರೊಬ್ಬರಿದ್ದಾರೆ. ಅವರೇ ಡಾ ದಿನೇಶ್ ಶರ್ಮ.

ರಾಜಸ್ಥಾನದ ಭರತಪುರ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಡಾ.ಶರ್ಮ ಅವರ ಪ್ರಕಾರ ಪ್ರಾರ್ಥನೆ ಕೂಡ ರೋಗಿಯೊಬ್ಬನ ಸ್ಥಿತಿ ಸುಧಾರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಇದೇ ಕಾರಣದಿಂದ ರೋಗಿ ತೆಗೆದುಕೊಳ್ಳಬೇಕಾದ ಔಷಧಿಗಳ ಪಟ್ಟಿಯ ಕೊನೆಗೆ ಹನುಮಾನ್ ಚಾಲಿಸಾ ಓದಬೇಕೆಂದು ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಬೇಕೆಂದು ಅವರು ಬರೆಯುತ್ತಾರೆ.

ಈ ವೈದ್ಯ ತನ್ನ ರೋಗಿಯೊಬ್ಬನಿಗೆ ನೀಡಿದ ಪ್ರಿಸ್ಕ್ರಿಪ್ಶನ್ ಚೀಟಿಯ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಟಿವಿ ಮೆಕ್ಯಾನಿಕ್ ಒಬ್ಬ ಹೊಟ್ಟೆ ನೋವೆಂದು ನಿವೃತ್ತ ಸರಕಾರಿ ವೈದ್ಯರಾಗಿರುವ ಡಾ.ಶರ್ಮ ಬಳಿ ಹೋಗಿದ್ದರು. ಅವರಿಗೆ ನಾಲ್ಕು ಔಷಧಿಗಳನ್ನು ಅವರಿಗೆ ಬರೆದುಕೊಟ್ಟಿರುವ ವೈದ್ಯ ಕೊನೆಯಲ್ಲಿ ಪ್ರತೀದಿನ ಹನುಮಾನ್ ಚಾಲಿಸಾ ಓದಿ, ದೇವಸ್ಥಾನಗಳಿಗೆ ಭೇಟಿ ನೀಡಿ ಹಾಗೂ ಆರತಿಯಲ್ಲಿ ಭಾಗಿಯಾಗಿ ಎಂದಿದ್ದಾರೆ.

ಹಿರಿಯ ಸರಕಾರಿ ವೈದ್ಯರಾಗಿದ್ದ ಡಾ.ಶರ್ಮ(69) 1998ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡು ರೈಲು ನಿಲ್ದಾಣ ರಸ್ತೆಯ ರಂಜೀತ್ ನಗರದಲ್ಲಿ ತಮ್ಮ ಕ್ಲಿನಿಕ್ ಆರಂಭಿಸಿದ್ದಾರೆ. ಅವರ ಹೆಚ್ಚಿನ ರೋಗಿಗಳು ಗ್ರಾಮೀಣ ಭಾಗದವರಾಗಿದ್ದು, ಅವರಿಗೆ ಔಷಧಿಯ ಜತೆಗೆ ಒಂದಿಷ್ಟು ಆಧ್ಯಾತ್ಮಿಕತೆಗೂ ಒತ್ತು ನೀಡಲು ಹೇಳುತ್ತಾರೆ ಹಾಗೂ ಇದರಿಂದ ಬೇಗನೇ ಗುಣಮುಖರಾಗಬಹುದೆಂದು ಡಾ.ಶರ್ಮ ವಿವರಿಸುತ್ತಾರೆ.
ತಮ್ಮ ಹೆಚ್ಚಿನ ರೋಗಿಗಳು ನಕಲಿ ವೈದ್ಯರ ಬಳಿ ಹೋಗಿ ಯಾವುದೇ ಗುಣ ಕಾಣದೆ ತಮ್ಮ ಬಳಿ ಬಂದವರಾಗಿದ್ದಾರೆ ಎನ್ನುತ್ತಾರೆ ಡಾ.ಶರ್ಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News