ಅನಿಷ್ಟ ಪದ್ಧತಿಗಳ ತಡೆಗಟ್ಟಲು ಎಲ್ಲಾ ಇಲಾಖೆಗಳು ಕೈಜೋಡಿಸುವುದು ಅಗತ್ಯ: ವಿಜಯಕುಮಾರ್

Update: 2017-11-14 17:40 GMT

ದಾವಣಗೆರೆ, ನ.14: ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಗಳನ್ನು ತಡೆಗಟ್ಟಲು ಎಲ್ಲಾ ಇಲಾಖೆಗಳು ಕೈಜೋಡಿಸುವುದು ಅಗತ್ಯ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯಕುಮಾರ್ ಹೇಳಿದ್ದಾರೆ.

ನಗರದ ರೋಟರಿ ಬಾಲಭವನದಲ್ಲಿ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಮಕ್ಕಳ ಸಂರಕ್ಷಣಾ ಕಾರ್ಯಕ್ರಮ, ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್ ಮುಂಬೈ ಮತ್ತು ಜಿಲ್ಲಾ ಮಕ್ಕಳ ಸಹಾಯವಾಣಿ ದಾವಣಗೆರೆ ಇವರ ಸಂಯುಕ್ತಾಶ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಚೈಲ್ಡ್‍ಲೈನ್ ದೋಸ್ತಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಹಕ್ಕು ಉಲ್ಲಂಘನೆ ಆಗದಂತೆ ತಡೆಗಟ್ಟಲು ಶಿಕ್ಷಣ, ಕಾರ್ಮಿಕ ಹಾಗೂ ಪೊಲೀಸ್ ಇಲಾಖೆಗಳು ಸಹಕಾರ ನೀಡಬೇಕು ಆಗ ಮಾತ್ರ ಕಾನೂನು ಅರಿವು ಮೂಡಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇಂತಹ ಅನಿಷ್ಟ ಪದ್ಧತಿಗಳು ಜೀವಂತವಾಗಿರುವೆಡೆಗಳಲ್ಲಿ ಪೊಲೀಸ್ ಇಲಾಖೆ ಅದನ್ನು ತಡೆಗಟ್ಟಲು ಅವರ ವ್ಯಾಪ್ತಿಯಲ್ಲಿ ಶ್ರಮವಹಿಸಬೇಕು. ಆದರೆ, ನಾವುಗಳೆಲ್ಲಾ ನಿರೀಕ್ಷಿಸಿದಷ್ಟು ಅವರ ಸಹಕಾರ ಸಿಗುತ್ತಿಲ್ಲ. ಎಂದು ಬೇಸರ ವ್ಯಕ್ತಪಡಿಸಿದ ವಿಜಯಕುಮಾರ್, ಪ್ರತಿ ಮಕ್ಕಳ ಪೋಷಕರಿಗೂ ಕಾನೂನು ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಜಿಲ್ಲೆಯಾದ್ಯಂತ ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕುಗಳಲ್ಲಿ ಬಾಲ್ಯವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಮೊಕದ್ದೊಮೆ ಹೂಡಲಾಗಿದೆ ಎಂದು ಮಾಹಿತಿ ನೀಡಿದರು.

ಬಾಲಕಾರ್ಮಿಕ ಪದ್ಧತಿಯಡಿ ಈ ಹಿಂದೆ ಕೇವಲ ಮಾಲಕನ ಮೇಲೆ ಮಾತ್ರ ಕೇಸು ದಾಖಲಾಗುತ್ತಿತ್ತು, ಆದರೆ, ಈಗ ಬಾಲಕಾರ್ಮಿಕ ಕಾಯ್ದೆಯಲ್ಲಿ ಹೊಸ ತಿದ್ದುಪಡಿ ತಂದಿರುವುದರಿಂದ ಪೋಷಕರ ಮೇಲು ಪ್ರಕರಣ ದಾಖಲಾಗುತ್ತದೆ. ಈ ಬಗ್ಗೆ ಎನ್‍ಜಿಒ ಗಳು ಪೋಷಕರಿಗೆ ಕಾನೂನು ಅರಿವು ಮೂಡಿಸಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆದರ್ಶ ಸಮಾಜ ಕಾರ್ಯ ಸಂಸ್ಥೆಯ ಕಾರ್ಯದರ್ಶಿ ಎನ್. ಬಿ. ಮಂಜಪ್ಪ ಅಧ್ಯಲ್ಷತೆ ವಹಿಸಿದ್ದರು. ಎಂ. ಮಂಜುನಾಥ್ ಪ್ರಾಸ್ತಾವಿಕ ನುಡಿದರು, ಟಿ.ಎಂ. ಕೊಟ್ರೇಶ್ ಸ್ವಾಗತಿಸಿದರು, ಎ.ಎಸ್. ದುಷ್ಯಂತ್‍ರಾಜ್ ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News