ಕೃಷಿ ಚಟುವಟಿಕೆಗೆ ಬಳಸುವ ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಿ: ಧರ್ಮೇಗೌಡ

Update: 2017-11-14 17:42 GMT

ಚಿಕ್ಕಮಗಳೂರು, ನ.14: ಕೃಷಿ ಚಟುವಟಿಕೆಗಳಿಗೆ ಬಳಸುವ ಡೀಸೆಲ್ ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಧರ್ಮೇಗೌಡ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.

ಮಂಗಳವಾರ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಮತ್ತು ಡಿಸಿಸಿ ಬ್ಯಾಂಕ್ ಆಶ್ರಯದಲ್ಲಿ ನಡೆದ 64ನೆ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಚಟುವಟಿಕೆಗಳಿಗೆ ಬಳಸುವ ಡೀಸೆಲ್ ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದರಿಂದ ಇದೀಗ ವಿಧಿಸಲಾಗುತ್ತಿರುವ ತೆರಿಗೆ ಶೇ.68ರಿಂದ 28ಕ್ಕೆ ಇಳಿಯುತ್ತದೆ ಇದರಿಂದಾಗಿ ರೈತಾಪಿ ವರ್ಗಕ್ಕೆ ಹೆಚ್ಚಿನ ಹೊರೆ ತಪ್ಪುತ್ತದೆ. ರೈತರಿಗೆ ನೀಡಲಾಗುತ್ತಿರುವ ಮೂರು ಲಕ್ಷ ಬಡ್ಡಿ ರಹಿತ ಬೆಳೆ ಸಾಲ ಕೇವಲ ಶೇ.20 ರಷ್ಟು ಕೃಷಿಕರಿಗೆ ಮಾತ್ರ ಲಭಿಸುತ್ತಿದ್ದು, ಈ ಸೌಲಭ್ಯವನ್ನು ರಾಜ್ಯ ಸರಕಾರ ಎಲ್ಲ ರೈತರಿಗೂ ನೀಡಲಿ ಎಂದು ಒತ್ತಾಯಿಸಿದರು.

ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಎಲ್.ಬೋಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿನದ ಮಹತ್ವ ಕುರಿತು ಸಾಗರದ ಲೆಕ್ಕಪರಿಶೋಧಕ ಬಿ.ವಿ.ರವೀಂದ್ರನಾಥ್ ಉಪನ್ಯಾಸ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಂ.ನರೇಂದ್ರ, ಉಪಾಧ್ಯಕ್ಷ ಪಿ.ರವಿ, ಸಿಇಒ ಎಂ.ಡಿ.ಮಂಜುನಾಥ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ದಿನೇಶ್ ಹೆಗಡೆ, ವ್ಯವಸ್ಥಾಪಕ ಡಿ.ಜಿ.ಲಿಂಗಣ್ಣಯ್ಯ, ಸಹಕಾರ ಸಂಘಗಳ ಉಪನಿಬಂಧಕ ಆರ್.ಜೆ.ಕಾಂತರಾಜು, ಸಹಾಯಕ ನಿಬಂಧಕ ಎಂ.ಡಿ.ಪರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ.ಗೋಪಾಲ್, ಟಿ.ಈ.ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News